More

    ಕೋರ್ಟ್‌ಗಳಲ್ಲಿ 80 ಸಾವಿರ ಕೇಸ್

    – ಗೋಪಾಲಕೃಷ್ಣ ಪಾದೂರು ಉಡುಪಿ
    ದಕ್ಷಿಣ ಕನ್ನಡ ಜಿಲ್ಲೆಯ 26 ನ್ಯಾಯಾಧೀಶರ ವ್ಯಾಪ್ತಿಯಲ್ಲಿ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಉಡುಪಿ ಜಿಲ್ಲೆಯ 17 ನ್ಯಾಯಾಧೀಶರ ವ್ಯಾಪ್ತಿಯಲ್ಲಿ 29,412 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯಗಳ ಮೇಲಿನ ಈ ಒತ್ತಡವನ್ನು ಕಡಿಮೆಗೊಳಿಸುವ ಮೂಲಕ ಶೀಘ್ರ ನ್ಯಾಯದಾನಕ್ಕಾಗಿ ನಡೆಸಲಾಗುತ್ತಿರುವ ಲೋಕ ಅದಾಲತ್‌ನಲ್ಲಿ ಈ ಬಾರಿ ಇದುವರೆಗೆ 2809 ದೂರುಗಳು ಇತ್ಯರ್ಥವಾಗಿವೆ.
    ಉಡುಪಿ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 14,245 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಕುಂದಾಪುರ ತಾಲೂಕಿನಲ್ಲಿ 11,702 ಹಾಗೂ ಕಾರ್ಕಳ ತಾಲೂಕಿನಲ್ಲಿ 3465 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಜತೆಗೆ ದಿನಕ್ಕೆ ಸರಾಸರಿ 3 ಚೆಕ್‌ಬೌನ್ಸ್ ಪ್ರಕರಣಗಳು, ವಾಹನ ಅಪಘಾತ, ವಿವಾಹ ವಿಚ್ಛೇದನ, ಕೌಟುಂಬಿಕ ವ್ಯಾಜ್ಯಗಳು ದಾಖಲಾಗುತ್ತಿರುತ್ತವೆ. ಇವುಗಳನ್ನು ವಿಚಾರಣೆ ನಡೆಸಿ ಶೀಘ್ರ ನ್ಯಾಯದಾನ ಮಾಡುವುದು ಸವಾಲಿನ ಕಾರ್ಯವಾಗಿದ್ದು, ನ್ಯಾಯಾಲಯಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ವರ್ಷದಲ್ಲಿ 5 ಬಾರಿ ಲೋಕ ಅದಾಲತ್ ಮೂಲಕ ಇಂತಹ ದಾವೆಗಳನ್ನು ಬಗೆಹರಿಸಲಾಗುತ್ತದೆ.

    ವ್ಯಾಜ್ಯಪೂರ್ವ ಪ್ರಕರಣಗಳು: ನ್ಯಾಯಾಲಯಗಳಲ್ಲಿ ದಾವೆ ಸಲ್ಲಿಕೆ ಮುನ್ನವೇ ಲೋಕ ಅದಾಲತ್ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶವಿದೆ. ಇದನ್ನು ವ್ಯಾಜ್ಯಪೂರ್ವ ಪ್ರಕರಣಗಳೆಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ನ್ಯಾಯಾಲಯ ಶುಲ್ಕ ವಿನಾಯತಿಯೂ ಇದೆ. 2015ರಲ್ಲಿ 2577, 2016ರಲ್ಲಿ 516, 2017ರಲ್ಲಿ 557, 2018ರಲ್ಲಿ 408, 2019ರಲ್ಲಿ 935 ಹಾಗೂ ಫೆ. 8ರಂದು ನಡೆದ ಲೋಕ ಅದಾಲತ್‌ನಲ್ಲಿ 307 ಪ್ರಕರಣಗಳನ್ನು ವಿಚಾರಣೆ ಪರಿಗಣಿಸಿ, 137 ಕೇಸ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.

    ಉಡುಪಿ ಕಳೆದ ವರ್ಷ 5 ಸಾವಿರ ಪ್ರಕರಣ ಇತ್ಯರ್ಥ:
    ಉಡುಪಿ ಜಿಲ್ಲೆಯಲ್ಲಿ 2019ನೇ ಸಾಲಿನಲ್ಲಿ ಲೋಕ ಅದಾಲತ್ ಮೂಲಕ 5079 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. 2015ರಲ್ಲಿ ಪ್ರತಿದಿನ ಲೋಕ ಅದಾಲತ್ ನಡೆಸಿ 10,159 ದಾವೆಗಳನ್ನು ಬಗೆಹರಿಸಲಾಗಿತ್ತು. ನಂತರ 2016ರಲ್ಲಿ ತಿಂಗಳಿಗೊಮ್ಮೆ ಜನತಾ ಅದಾಲತ್ ನಡೆದು 7529 ಪ್ರಕರಣ, 2017ರಲ್ಲಿ 3833 ಪ್ರಕರಣ, 2018ರಲ್ಲಿ 2 ತಿಂಗಳಿಗೊಮ್ಮೆ ನಡೆದ ಲೋಕ ಅದಾಲತ್‌ನಲ್ಲಿ 2274 ಪ್ರಕರಣಗಳಿಗೆ ಇತಿಶ್ರೀ ಹಾಡಲಾಗಿದೆ. ಫೆ.8ರಂದು ನಡೆದ ಈ ವರ್ಷದ ಮೊದಲ ಅದಾಲತ್‌ನಲ್ಲಿ 2180 ಪ್ರಕರಣಗಳನ್ನು ಕೈಗೆತ್ತಿಕೊಂಡು 1251 ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ.

    ಚೆಕ್‌ಬೌನ್ಸ್ ಹೆಚ್ಚಳ
    ಲೋಕ ಅದಾಲತ್‌ನಲ್ಲಿ ವಿಚಾರಣೆಗಾಗಿ ಮೋಟಾರು ವಾಹನ ಕಾಯ್ದೆ ಮತ್ತು ಎನ್‌ಐ ಕಾಯ್ದೆಯಡಿ ದಾಖಲಾದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಗಮನಾರ್ಹ. ಉಡುಪಿ ಜಿಲ್ಲೆಯಲ್ಲಿ 2015ರಲ್ಲಿ 248 ವಾಹನ ಅಪಘಾತ ಪರಿಹಾರ ಪ್ರಕರಣ ಬಗೆಹರಿದಿದ್ದರೆ 2019ರಲ್ಲಿ ಈ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. 2015ರಲ್ಲಿ 268 ಚೆಕ್‌ಬೌನ್ಸ್ ಪ್ರಕರಣ ಇತ್ಯರ್ಥವಾಗಿದ್ದರೆ, 2019ರಲ್ಲಿ ಈ ಸಂಖ್ಯೆ 624ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2129 ಮೋಟಾರು ಅಪಘಾತ ಪ್ರಕರಣ ಹಾಗೂ 6251 ಚೆಕ್‌ಬೌನ್ಸ್ ಪ್ರಕರಣ ವಿಚಾರಣಾ ಹಂತದಲ್ಲಿದೆ. ಕಳೆದ ಲೋಕ ಅದಾಲತ್‌ನಲ್ಲಿ 111 ಅಪಘಾತ ಪ್ರಕರಣ ಹಾಗೂ 123 ಚೆಕ್‌ಬೌನ್ಸ್ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.

    ದ.ಕ. ಕಳೆದ ವರ್ಷ 4820 ಕೇಸುಗಳಿಗೆ ಪರಿಹಾರ:
    ಮಂಗಳೂರು: ಈ ಬಾರಿಯ ಮೊದಲ ದ.ಕ. ಜಿಲ್ಲಾ ಲೋಕ ಅದಾಲತ್‌ನಲ್ಲಿ ಸುಮಾರು 6 ಸಾವಿರ ಪ್ರಕರಣಗಳಲ್ಲಿ ನೋಟಿಸ್ ಆಗಿತ್ತು. ಒಟ್ಟು 1,558 ಪ್ರಕರಣಗಳು ಇತ್ಯರ್ಥಗೊಂಡವು. ಇದರಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳು 134. ಮೋಟಾರ್ ವಾಹನ 75, ಸಿವಿಲ್ 93, ಕ್ರಿಮಿನಲ್ 1256 ಇತ್ಯರ್ಥಗೊಂಡ ಪ್ರಕರಣಗಳು. 2019ರ ಅದಾಲತ್‌ನಲ್ಲಿ 4820 ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಅದರಲ್ಲಿ 1011 ವ್ಯಾಜ್ಯಪೂರ್ವ ಪ್ರಕರಣ, 700 ಮೋಟಾರು ವಾಹನ ಕಾಯ್ದೆ ಪ್ರಕರಣ, 476 ಸಿವಿಲ್ ಪ್ರಕರಣ ಸೇರಿದ್ದವು.

    ಇನ್ನೂ 4 ಅದಾಲತ್:
    ಈ ವರ್ಷ ಒಟ್ಟು ಐದು ದಿನ ಲೋಕ ಅದಾಲತ್ ಇರುತ್ತದೆ. ಮೊದಲ ಅದಾಲತ್ ಫೆ.8ರಂದು ನಡೆದಿದೆ. ಇನ್ನು ಏಪ್ರಿಲ್ 11, ಜುಲೈ 11, ಸೆಪ್ಟೆಂಬರ್ 12 ಹಾಗೂ ಡಿಸೆಂಬರ್ 12ರಂದು ನಡೆಯಲಿದೆ.

    ಲೋಕ ಅದಾಲತ್ ಮೂಲಕ ಶೀಘ್ರದಲ್ಲಿ ದಾವೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಉಭಯ ಪಕ್ಷದವರಿಗೂ ರಾಜೀ ಸಂಧಾನಕ್ಕೆ ಅವಕಾಶವಿದ್ದು, ಬಾಂಧವ್ಯಗಳು ಉಳಿದುಕೊಂಡು ವಿವಾದಗಳು ಬಗೆಹರಿಯುತ್ತವೆ. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇದಲ್ಲದೆ ಪ್ರತೀ ಬುಧವಾರ ಮತ್ತು ಶುಕ್ರವಾರ ಪೂರ್ವಸಮಾಲೋಚನೆ ಲೋಕಅದಾಲತ್ ನಡೆಯುತ್ತದೆ. ಸಾಮಾನ್ಯ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲು ಹತ್ತುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ.
    – ಕಾವೇರಿ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts