More

    ವರದಿ ಬಂದ ಚರ್ಚಿಸಿ 7ನೇ ವೇತನ ಆಯೋಗ, ಒಪಿಎಸ್ ತೀರ್ಮಾನ: ಸಿದ್ದರಾಮಯ್ಯ ಭರವಸೆ

    ಬೆಂಗಳೂರು ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಮತ್ತು ಹಳೆ ಪಿಂಚಣಿ ಯೋಜನೆ (ಒಪಿಎಸ್) ವರದಿ ಬಂದ ನಂತರ ಚರ್ಚಿಸಿ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರ ಪರವಾಗಿ ಸರ್ಕಾರವು ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

    ಅರಮನೆ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ನಾನು ಉಪ ಮುಖ್ಯಮಂತ್ರಿಯಾಗಿದ್ದ ವೇಳೆ 1996ರಲ್ಲಿ 5ನೇ ವೇತನ ಆಯೋಗ, ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ 6ನೇ ವೇತನ ಆಯೋಗ ಜಾರಿ ಮಾಡಿದ್ಧೇವೆ. ಈಗ 7ನೇ ವೇತನ ಆಯೋಗ ಕೂಡ ನಾನು ಅಧಿಕಾರದಲ್ಲಿರುವಾಗಲೇ ಬಂದಿದೆ ಎಂದರು.

    ಮಾ.15ರೊಳಗೆ ಹಾಗೂ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ವರದಿ ನೀಡುವಂತೆ 7ನೇ ವೇತನ ಆಯೋಗದ ಅಧ್ಯಕ್ಷ ಕೆ. ಸುಧಾಕರ್ ರಾವ್ ಅವರಿಗೆ ತಿಳಿಸಿದ್ದೇವೆ. ವರದಿ ನೀಡಿದರೆ ಚರ್ಚಿಸಿ ಅನುಷ್ಠಾನ ಮಾಡಲಾಗುತ್ತದೆ. 6ನೇವೇತನ ಆಯೋಗದಲ್ಲಿ ಶೇ.30 ರಷ್ಟು ಹೆಚ್ಚಳ ಮಾಡಲಾಗಿತ್ತು. ಇದು ಇಡೀ ವೇತನ ಆಯೋಗದಲ್ಲಿಯೇ ಅತಿ ಹೆಚ್ಚಿನ ಮೊತ್ತವಾಗಿದೆ. ಈಗ ನೀವು ಶೇ.40 ಕೇಳುತ್ತಿದ್ದೀರಿ. ಆದರೆ, ಹಿಂದಿನ ಸರ್ಕಾರವು ನಿಗದಿ ಮಾಡಿರುವ ಶೇ.17ರಷ್ಟು ಹೆಚ್ಚಳ ಮಾಡಲಾಗುತ್ತದೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

    ಒಪಿಎಸ್‌ಗೆ ವರದಿ:

    ಎನ್‌ಪಿಎಸ್ ಬಲದಾಗಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಅನ್ನು ಕೇಂದ್ರ ಸರ್ಕಾರವು 2006ರಲ್ಲಿ ತೆಗೆದಿದೆ. ಸದ್ಯ ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಅಸ್ಸಾಂ ಸೇರಿ 6 ರಾಜ್ಯಗಳಲ್ಲಿ ಜಾರಿಯಾಗಿದೆ ಎಂದು ಹೇಳುತ್ತಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಈ ಸಮಿತಿ ವರದಿ ನೀಡಿದ ನಂತರ ತೀರ್ಮಾನಿಸಲಾಗುವುದು ಎಂದರು.

    ಹಾಗೆಯೇ ಸರ್ಕಾರಿ ನೌಕರರ ಕುಟುಂಬದ ಆರೋಗ್ಯ ಕಾಪಾಡಲು ಕರ್ನಾಟಕ ಜ್ಯೋತಿ ಸಂಜೀವಿನಿ ಯೋಜನೆಯನ್ನು ಕೂಡಲೇ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ಭೈರತಿ ಬಸವರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಶೇಷಯ್ಯ, ಭೈರಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶ್ರೀನಿವಾಸ ತಿಮ್ಮೇಗೌಡ, ಖಜಾಂಚಿ ಡಾ. ಸಿದ್ದರಾಮಣ್ಣ ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts