More

    78 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

    ಬೆಳಗಾವಿ: ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ನಗರ ಪೊಲೀಸರು ಈಚೆಗೆ ಗಣೇಶಪುರ ಬಳಿ ಬಂಧಿಸಿದ್ದಾರೆ. ವಡಗಾವಿಯ ಪ್ರಕಾಶ ಪಾಟೀಲ (37), ಖಾನಾಪುರದ ಮಹೇಶ ಕಾಳಗಿನಕೊಪ್ಪ (37) ಬಂಧಿತರು. ಪ್ರಕಾಶ ಗೋವಾದ ಸಾಕಳಿ ಹಾಗೂ ಮಹೇಶ ಮಹಾರಾಷ್ಟ್ರದ ಸಿಂಧದುರ್ಗದ ವೈಭವವಾಡಿಯಲ್ಲಿ ವಾಸವಾಗಿದ್ದರು. ಇವರಿಬ್ಬರು ಕಳ್ಳತನ ಮಾಡಿದ್ದ 78 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯ್ಲಲಿ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.

    ಬೆಳಗಾವಿ ನಗರ, ಗ್ರಾಮೀಣ ಪ್ರದೇಶ ಹಾಗೂ ಧಾರವಾಡ ಜಿಲ್ಲೆಯ ಹಲವೆಡೆ ಒಟ್ಟು 22 ಮನೆ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ. ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 2, ಎಪಿಎಂಸಿ ಠಾಣೆಯಲ್ಲಿ 2, ಮಾರಿಹಾಳ ಠಾಣೆಯಲ್ಲಿ 2, ಖಡೇಬಜಾರ್‌ನಲ್ಲಿ 1, ಉದ್ಯಮಬಾಗ ಠಾಣೆಯಲ್ಲಿ 1, ಮಾಳಮಾರುತಿ ಠಾಣೆಯಲ್ಲಿ 1 ಮತ್ತು ಕ್ಯಾಂಪ್ ಠಾಣೆಯಲ್ಲಿ 4 ಪ್ರಕರಣ ಸೇರಿ ಬೆಳಗಾವಿ ನಗರದಲ್ಲಿ ಒಟ್ಟು 13 ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಆರೋಪಿಗಳು ಕಳ್ಳತನ ಮಾಡಿ ಬೇರೆಯವರಿಗೆ ವಿಲೇವಾರಿ ಮಾಡಿದ 75 ಲಕ್ಷ ರೂ. ಮೌಲ್ಯದ 1.5 ಕೆಜಿ ಬಂಗಾರ, 3 ಲಕ್ಷ ರೂ. ಮೌಲ್ಯದ 4 ಕೆಜಿ ಬೆಳ್ಳಿ ಹಾಗೂ ಕಳ್ಳತನಕ್ಕೆ ಬಳಸಿದ್ದ 1.80 ಲಕ್ಷ ರೂ. ಮೌಲ್ಯದ 1 ಬಜಾಜ್ ಡಾಮಿನರ್ ಬೈಕ್ ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಡಿಸಿಪಿ ಪಿ.ವಿ. ಸ್ನೇಹಾ ನೇತೃತ್ವದಲ್ಲಿ ಎಸಿಪಿಗಳಾದ ನಾರಾಯಣ ಭರಮನಿ, ಚಂದ್ರಪ್ಪ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಸಿಪಿಐ ನಿಂಗನಗೌಡ ಪಾಟೀಲ, ಕ್ಯಾಂಪ್ ಠಾಣೆ ಸಿಪಿಐ ಪ್ರಭಾಕರ ಧರ್ಮಟ್ಟಿ ಅವರನ್ನೊಳಗೊಂಡ ವಿಶೇಷ ಅಪರಾಧ ಪತ್ತೆ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಆರೋಪಿಗಳನ್ನು ಬಂಧಿಸಿದೆ. ತಂಡಕ್ಕೆ ಸೂಕ್ತ ಬಹುಮಾನ ಘೋಷಿಸುತ್ತೇವೆ ಎಂದು ತಿಳಿಸಿದರು. ಡಿಸಿಪಿ ಗಳಾದ ಪಿ.ವಿ. ಸ್ನೇಹಾ, ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts