More

    ಮೂಡಿಗೆರೆಯಲ್ಲಿ 71 ಹುದ್ದೆಗಳು ಖಾಲಿ!

    ಮೂಡಿಗೆರೆ: ಪಶುಪಾಲನಾ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿ, ಗ್ರಾಮ ಸಭೆಗೆ ಗೈರಾದ ಆಧಿಕಾರಿಗಳ ವಿರುದ್ಧ ಕ್ರಮ, ಹೇಮಾವತಿ ನದಿ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಬುಧವಾರ ಕಿರುಗುಂದ ಗ್ರಾಪಂನಲ್ಲಿ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ತಾಲೂಕು ಪಶುಪಾಲನಾ ಇಲಾಖೆಯಲ್ಲಿ 89 ಹುದ್ದೆಗಳಿವೆ. 18 ಮಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ. 71 ಖಾಲಿಯಿದೆ ಇದರಿಂದ ಕರ್ತವ್ಯ ನಿರ್ವಹಿಸಲು ಕಷ್ಟಕರವಾಗುತ್ತಿದೆ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮನು ಸಭೆ ಗಮನಕ್ಕೆ ತಂದಾಗ ಹುದ್ದೆ ಭರ್ತಿಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲು ನಿರ್ಣಯ ಕೈಗೊಳ್ಳಲಾಯಿತು.
    ಆರೋಗ್ಯ ಕಾರ್ಡ್ ಹೊಂದಿದ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಪತ್ರ ತರಬೇಕು ಎನ್ನುತ್ತಾರೆ. ಮಂಗಳೂರು ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ರೋಗಿ ಮತ್ತೆ ಅಲ್ಲಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೋಗಿ ಶಿಫಾರಸ್ಸು ಪತ್ರ ತರಲು ಸಾಧ್ಯವೇ ಎಂದು ಗ್ರಾಮಸ್ಥ ಬಸವರಾಜ್ ಅಧಿಕಾರಿಗಳನ್ನು ಪ್ರಶ್ನಿಸಿದರು.
    ದೋಣಗೋಡು ಗ್ರಾಮದಲ್ಲಿರುವ ಕುಡಿಯುವ ನೀರಿನ ಬಾವಿಯಲ್ಲಿ ನೀರು ಕಲುಷಿತಗೊಂಡಿದೆ. ಆ ನೀರು ಕುಡಿದವರು ಕಾಲರಾ ರೋಗಕ್ಕೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥ ಬಿಳಿಗೌಡ ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಬಾವಿಯನ್ನು ಸ್ವಚ್ಛಗೊಳಿಸುವುದಾಗಿ ಪಿಡಿಒ ಸಾಹಿತ್ಯಾ ಭರವಸೆ ನೀಡಿದರು.
    ವಸತಿ ಯೋಜನೆ ಮನೆಗೆ 1.20 ಲಕ್ಷ ರೂ. ಮಾತ್ರ ಅನುದಾನ ನೀಡಲಾಗುತ್ತಿದೆ. ಈ ಹಣದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ. ವಸತಿ ಯೋಜನೆ ಮನೆಗಳಿಗೆ ಕನಿಷ್ಠ 5 ಲಕ್ಷ ರೂ.ನಿಗದಿಪಡಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು. ಎರಡು ವರ್ಷದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಗ್ರಾಮಸ್ಥ ರಾಮಯ್ಯ ಸಭೆಗೆ ತಿಳಿಸಿದರು.
    ಹೇಮಾವತಿ ನದಿ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿ 6 ವರ್ಷವಾದರೂ ಕಾಮಗಾರಿ ಮುಗಿದಿಲ್ಲ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.ಇಲ್ಲವಾದರೆ ಈ ವರ್ಷದ ಮಳೆಗಾಲದಲ್ಲಿ ಹಳೆ ಸೇತುವೆ ಕುಸಿದರೆ ಮೂಡಿಗೆರೆ, ಸಕಲೇಶಪುರ ಸಂಚಾರ ಸ್ಥಗಿತಗೊಳ್ಳಲಿದೆ. ಅಲ್ಲದೆ ಜನ್ನಾಪುರದಿಂದ ಕಿರುಗುಂದದವರೆಗೆ ರಾಜ್ಯಹೆದ್ದಾರಿ 6 ಕಿ.ಮೀ ಸಂಪೂರ್ಣ ಗುಂಡಿಯಾಗಿದೆ. ಬದಿಯಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಗೆ ಚಾಚಿ ಕೊಂಡಿದೆ. ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ಗ್ರಾಮಸ್ಥ ಅಬ್ಬಾಸ್ ಸಭೆ ಗಮನಕ್ಕೆ ತಂದರು. ಸೇತುವೆ ಕಾಮಗಾರಿ ತ್ವರತಗತಿಯಲ್ಲಿ ಪೂರ್ಣಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
    ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ರವಿ, ಉಪಾಧ್ಯಕ್ಷೆ ಸ್ವಾತಿಶ್ರೀ, ಸದಸ್ಯರಾದ ಚಂದ್ರಿಕಾ, ದಿನೇಶ್, ಧರ್ಮೇಂದ್ರ, ಪೂರ್ಣೇಶ್, ಇಂದಿರಾ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ನಜೀರ್, ಯು.ಎಚ್.ರಾಜಶೇಖರ್, ಭಾಗ್ಯಾ ಲಕ್ಷ್ಮಣ, ಬಿ.ಕೆ.ಚಂದ್ರಶೇಖರ್, ಅಬ್ಬಾಸ್, ಕೆ.ಕೆ.ರಾಮಯ್ಯ, ಚನ್ನಕೇಶವ, ಸಿ.ಎಲ್.ಪೂರ್ಣೇಶ್, ವೆಂಕಟೇಶ್ ಇತರರಿದ್ದರು.
    ಕಸ ವಿಲೇ ಘಟಕವಾದ ದೊಡ್ಡಿ: ಬಿಡಾಡಿ ಜಾನುವಾರುಗಳನ್ನು ಕಟ್ಟಿಹಾಕುವ ದೊಡ್ಡಿಯಲ್ಲಿ ಕಸ ಸುರಿಯಲಾಗುತ್ತಿದೆ ಎಂದು ಗ್ರಾಮಸ್ಥೆ ಪ್ರೇಮಾ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಇಲ್ಲದಿರುವುದರಿಂದ ದೊಡ್ಡಿಯಲ್ಲಿ ಕಸ ಸುರಿಯಲಾಗುತ್ತಿದೆ. ಹೆಗ್ಗರವಳ್ಳಿಯಲ್ಲಿ ಕಸ ವಿಲೇ ಘಟಕ ಸ್ಥಾಪನೆಗೆ 9 ಲಕ್ಷ ರೂ. ಅನುದಾನವಿದ್ದು, ಘಟಕ ನಿರ್ಮಾಣ ಕಾಮಗಾರಿ ಹೊಣೆಯನ್ನು ಮಾರ್ಚ್‌ನಲ್ಲಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಅದರೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಪಿಡಿಒ ದೂರಿದರು. ಗ್ರಾಪಂನಲ್ಲಿ ಶುಕ್ರವಾರ ಮಾತ್ರ ಕಸ ಸಂಗ್ರಹಿಸಲಾಗುತ್ತಿದೆ. ವಾರದಲ್ಲಿ ಒಂದು ದಿನ ಕಸ ಸಂಗ್ರಹಿಸಿದರೆ ಉಳಿದ ದಿನ ಕಸ ಏನು ಮಾಡಬೇಕು? ಅನುದಾನವಿದ್ದರೂ ವಿಲೇವಾರಿ ಘಟಕ ಏಕೆ ಸ್ಥಾಪಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನೋಡಲ್ ಅಧಿಕಾರಿ ಡಾ. ಮನು ಮಾತನಾಡಿ, ಬೀಡಾಡಿ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲಾಗುವುದು ಕಸ ವಿಲೇ ಘಟಕ ತ್ವರಿತ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಕಾಮಗಾರಿ ವಿಳಂಬಕ್ಕೆ ಆಕ್ರೋಶ: ಕಿರುಗುಂದ, ಉದುಸೆ, ಬೆಟ್ಟದಮನೆಯಲ್ಲಿ ಜೆಜೆಎಂ ಯೋಜನೆಯ ಕುಡಿಯುವ ನೀರಿನ ಟ್ಯಾಂಕ್ ಮತ್ತು ಪೈಪ್‌ಲೈನ್ ನಿರ್ಮಾಣ ಕಾಮಗಾರಿ ಕಳೆದ ಒಂದು ವರ್ಷದಿಂದ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಯು.ಎಚ್.ರಾಜಶೇಖರ್ ದೂರಿದರು. ಉದುಸೆ ಮತ್ತು ಕಿರುಗುಂದ ಗ್ರಾಮದ ರಸ್ತೆಯ ಕೆಲವೆಡೆ ಕಾಂಕ್ರೀಟ್ ರಸ್ತೆ ಬದಿ ಮಣ್ಣು, ಮಣ್ಣು ಸುರಿಯದಿರುವುದರಿಂದ ತೊಂದರೆಯಾಗಿದೆ. ಅಲ್ಲದೆ ಉದುಸೆ ಗ್ರಾಮಕ್ಕೆ ತೆರಳುವ ರಸ್ತೆ ಗುಂಡಿಯಾಗಿದೆ. ರಸ್ತೆ ದುರಸ್ತಿಪಡಿಸುವಂತೆ 20 ವರ್ಷದಿಂದ ಗ್ರಾಪಂ ಸೇರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿಪಡಿಸಿಲ್ಲ ಎಂದು ಗ್ರಾಮಸ್ಥ ಬಸವರಾಜ್ ದೂರಿದರು. ಜೆಜೆಎಂ ಯೋಜನೆಯಡಿ ನಡೆದ ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿಲ್ಲ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮಳೆ ಕಳೆದ ನಂತರ ರಸ್ತೆ ಬದಿಗೆ ಮಣ್ಣು ಹಾಕಲಾಗುವುದು ಎಂದು ಜಿಪಂ ಕಿರಿಯ ಇಂಜಿನಿಯರ್ ನಾಗರಾಜ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts