More

    ಮಂದಿರಕ್ಕೆ ಮಹಾದೇಣಿಗೆ: ಇಪ್ಪತ್ತೇ ದಿನದಲ್ಲಿ ಹರಿದು ಬಂತು 600 ಕೋಟಿ ರೂಪಾಯಿ!

    ಅಯೋಧ್ಯೆಯಲ್ಲಿ ನಿರ್ವಣಗೊಳ್ಳುತ್ತಿರುವ ಭವ್ಯ ರಾಮಮಂದಿರಕ್ಕೆ ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ. ನಿಧಿ ಸಮರ್ಪಣ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಈ ಮೊತ್ತ 80 ಕೋಟಿ ರೂ. ದಾಟಿದೆ. ಪಕ್ಷ, ಧರ್ವತೀತವಾಗಿ ಜನರು ನಾಮುಂದು ತಾಮುಂದು ಎಂಬಂತೆ ರಾಮ ದೇಗುಲಕ್ಕೆ ಕಾಣಿಕೆ ಸಲ್ಲಿಸುತ್ತಿದ್ದಾರೆ.

    ನವದೆಹಲಿ: ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾದ 20 ದಿನಗಳಲ್ಲಿ 600 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇದು ಮಂದಿರ ನಿರ್ವಣಕ್ಕೆ ಅಂದಾಜಿಸಿರುವ 1,100 ಕೋಟಿ ರೂಪಾಯಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತ. ಜ.15ರಂದು ಆರಂಭವಾಗಿರುವ ‘ನಿಧಿ ಸಮರ್ಪಣ ಅಭಿಯಾನ’ ಫೆ. 27ಕ್ಕೆ ಕೊನೆಗೊಳ್ಳಲಿದ್ದು, ಆ ದಿನದೊಳಗೆ ದೇಣಿಗೆ ಸಂಗ್ರಹ ಮತ್ತಷ್ಟು ವೇಗವಾಗಿ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಆದರೆ, ದೇಣಿಗೆ ಸಂಗ್ರಹಕ್ಕೆ ಯಾವುದೇ ಗುರಿಯನ್ನು ಇರಿಸಿಕೊಂಡಿಲ್ಲ ಎಂದು ಟ್ರಸ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿದೆ.

    ಮ.ಪ್ರ.ದಲ್ಲಿ ಶತಕೋಟಿ!: ಈವರೆಗೆ ಮಧ್ಯಪ್ರದೇಶದಲ್ಲಿ 100 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇಲ್ಲಿನ 10 ಮಂದಿ ತಲಾ 1 ಕೋಟಿ ರೂ. ಹಾಗೂ 20ಕ್ಕೂ ಹೆಚ್ಚು ಜನರು 50 ಲಕ್ಷ ರೂ. ದೇಣಿಗೆಯನ್ನು ಕೊಟ್ಟಿದ್ದಾರೆ. ರಾಜಸ್ಥಾನದಲ್ಲಿ 50 ಜನರು ತಲಾ 1 ಕೋಟಿ ರೂ. ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

    ಮಂದಿರಕ್ಕೆ ಮಹಾದೇಣಿಗೆ: ಇಪ್ಪತ್ತೇ ದಿನದಲ್ಲಿ ಹರಿದು ಬಂತು 600 ಕೋಟಿ ರೂಪಾಯಿ!ಮನೆ ಮನೆ ಸಂಗ್ರಹ: ಆರ್​ಎಸ್​ಎಸ್, ವಿಶ್ವ ಹಿಂದು ಪರಿಷದ್ ಮೂಲಕ ದೇಣಿಗೆ ಮನೆ ಮನೆಗೆ ತೆರಳಿ ಸಂಗ್ರಹವನ್ನು ಟ್ರಸ್ಟ್ ಆರಂಭಿಸಿದ್ದು, ಇದಕ್ಕಾಗಿ 10, 100, 1,000 ರೂ. ಮುಖಬೆಲೆಯ ಕೂಪನ್​ಗಳನ್ನು ಬಿಡುಗಡೆ ಮಾಡಿದೆ. 20 ಸಾವಿರ ರೂಪಾಯಿವರೆಗಿನ ದೇಣಿಗೆಯನ್ನು ಮಾತ್ರ ನಗದು ರೂಪದಲ್ಲಿ ಸ್ವೀಕರಿಸಲಾಗುತ್ತಿದ್ದು, ಇದಕ್ಕೂ ಹೆಚ್ಚಿನ ಮೊತ್ತವನ್ನು ಚೆಕ್ ಮೂಲಕ ಪಡೆಯಲಾಗುತ್ತಿದೆ. ಕ್ರಿಶ್ಚಿಯನ್ನರು, ಮುಸ್ಲಿಮರು ಸೇರಿ ಇತರ ಧರ್ಮೀಯರು ಸಹ ಮಂದಿರಕ್ಕೆ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2020ರ ಆ. 5ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಬುನಾದಿ ಕಾಮಗಾರಿ ಪ್ರಗತಿಯಲ್ಲಿದೆ.

    ಮುಸ್ಲಿಮರಿಂದ ದೇಣಿಗೆ: ಉತ್ತರ ಪ್ರದೇಶದ ಫೈಜಾಬಾದ್​ನ ಮುಸ್ಲಿಂ ಕುಟುಂಬವೊಂದು 5,100 ರೂ. ದೇಣಿಗೆ ಕೊಟ್ಟಿದೆ. ‘ಭಗವಾನ್ ಶ್ರೀರಾಮ ಹಿಂದುಸ್ತಾನಕ್ಕೆ ಸೇರಿದವ. ನಾವೆಲ್ಲರೂ ಈ ದೇಶದ ವಾಸಿಗಳು. ಆದ್ದರಿಂದ ಶ್ರೀರಾಮ ಎಲ್ಲರಿಗೂ ದೈವ ಮತ್ತು ಮಂದಿರ ಎಲ್ಲರಿಗೂ ಸೇರಿದ್ದು. ನಾವು ಇರಾಕ್, ಇರಾನ್ ಅಥವಾ ಟರ್ಕಿಯಿಂದ ಬಂದವರಲ್ಲ. ಹಿಂದುಗಳು ನಮ್ಮ ಸೋದರರು. ಮಂದಿರ ನಿರ್ಮಾಣ ಕಾರ್ಯದಲ್ಲಿ ಮುಸ್ಲಿಂ ಸಮುದಾಯವು ದೊಡ್ಡ ಮಟ್ಟದಲ್ಲಿ ಭಾಗಿಯಾಗಲಿದೆ’ ಎಂದು ಅಯೋಧ್ಯೆಯ ಮುಸ್ಲಿಂ ರಾಷ್ಟ್ರೀಯ ಮಂಚ್​ನ ಸದಸ್ಯ ಹಾಜಿ ಸಯೀದ್ ಅಹ್ಮದ್ ತಿಳಿಸಿದ್ದಾರೆ. ‘ಮಂದಿರ ನಿರ್ವಣಕ್ಕೆ ಅತ್ಯಂತ ಸಂತಸದಿಂದ ದೇಣಿಗೆ ನೀಡಿರುವೆ. ಉದಾರವಾಗಿ ದೇಣಿಗೆ ನೀಡಬೇಕು ಎಂದು ನಮ್ಮ ಸಮುದಾಯದವರಲ್ಲಿ ಮನವಿ ಮಾಡುವೆ’ ಎಂದು ನವಾಬ್​ಗಂಜ್​ನ ಸೈಯದ್ ಹಫೀಜ್ ಹೇಳಿದ್ದಾರೆ.

    ಮಂದಿರಕ್ಕೆ ಮಹಾದೇಣಿಗೆ: ಇಪ್ಪತ್ತೇ ದಿನದಲ್ಲಿ ಹರಿದು ಬಂತು 600 ಕೋಟಿ ರೂಪಾಯಿ!

    ಹೆಚ್ಚು ದೇಣಿಗೆ ನೀಡಿದವರು

    • 1 ಕೋಟಿ ರೂ.: ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್
    • 30 ಲಕ್ಷ ರೂ.: ತೆಲುಗು ನಟ ಪವನ್ ಕಲ್ಯಾಣ್
    • 11 ಲಕ್ಷ ರೂ.: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
    • 5,00,100 ರೂ.: ರಾಷ್ಟ್ರಪತಿ ರಾಮನಾಥ ಕೋವಿಂದ
    • 5.10 ಲಕ್ಷ ರೂ.: ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್
    • 5 ಲಕ್ಷ ರೂ.: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್
    • 2 ಲಕ್ಷ ರೂ.: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ
    • 1,11,111 ರೂ.: ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್

    ರಾಜ್ಯದಲ್ಲಿ 80 ಕೋಟಿ ರೂ. ಸಂಗ್ರಹ

    ಬೆಂಗಳೂರು: ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಲ್ಲಿ ಈವರೆಗೆ 80 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ನಿಧಿ ಸಮರ್ಪಣ ಅಭಿಯಾನ ಕೈಗೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಬೆನ್ನೆಲುಬಾಗಿ ನಿಂತ ಆರೆಸ್ಸೆಸ್ ಹಾಗೂ ಪರಿವಾರದ ಎಲ್ಲ ಸಂಘಟನೆಗಳ ಲಕ್ಷಾಂತರ ಕಾರ್ಯಕರ್ತರು ಮನೆಮನೆಗೆ ತೆರಳಿ ದೇಣಿಗೆ ಪಡೆಯುತ್ತಿದ್ದಾರೆ.

    ತಮ್ಮ ಶಕ್ತ್ಯಾನುಸಾರ 10 ರೂ. ನಿಂದ ಲಕ್ಷಾಂತರ ರೂ.ವರೆಗೂ ಜನರು ದೇಣಿಗೆ ನೀಡುತ್ತಿದ್ದಾರೆ. ರಾಜಕಾರಣಿಗಳಲ್ಲಿ ಬಿಜೆಪಿ ನಾಯಕರಷ್ಟೇ ಅಲ್ಲ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ನಾನಾ ಪಕ್ಷಗಳ ನಾಯಕರು ಸಹ ದೇಣಿಗೆ ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರು ಇದರಲ್ಲಿ ಸೇರಿದ್ದಾರೆ. ಅನೇಕ ನಟನಟಿಯರು, ಉದ್ಯಮಿಗಳು ಸಹ ನಿಧಿ ಸಮರ್ಪಿಸಿದ್ದಾರೆ.

    ಹೆಚ್ಚು ಕೊಟ್ಟವರು

    • 25 ಲಕ್ಷ ರೂ.: ಡಾ.ವೀರೇಂದ್ರ ಹೆಗ್ಗಡೆ
    • 25 ಲಕ್ಷ ರೂ.: ಜೆಡಿಎಸ್ ಶಾಸಕ ಆರ್. ಮಂಜುನಾಥ್
    • 5.55 ಲಕ್ಷ ರೂ.: ಬರೋಡಾ ಉದ್ಯಮಿ, ಬೆಳ್ತಂಗಡಿ ಮೂಲದ ಶಶಿಧರ ಶೆಟ್ಟಿ

    ನಿಧಿ ದೇಣಿಗೆ ವಿವರ: ramjanmbhoomiteerthkshetratrustdeposit

    (ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಡಿಪಾಸಿಟ್) ಮತ್ತು amjanmbhoomiteerthkshetratrustmoniter (ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮಾನಿಟರ್) ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ನಿಧಿ ಸಂಗ್ರಹಕಾರರು ತಾವು ಪಡೆದ ದೇಣಿಗೆಯ ವಿವರವನ್ನು ಡಿಪಾಸಿಟ್ ಆ್ಯಪ್​ನಲ್ಲಿ ದಾಖಲಿಸಿ ನಂತರ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಹಾಕುತ್ತಾರೆ. ಇದಕ್ಕಾಗಿ ಪ್ರತಿ ತಂಡದಲ್ಲಿ 5 ಮಂದಿ ಸದಸ್ಯರು ಇರುತ್ತಾರೆ. ಇದರ ನಿರ್ವಹಣೆಗೆ ಮಾನಿಟರಿಂಗ್ ಆ್ಯಪ್​ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts