More

    ಸುವರ್ಣ ಕರ್ನಾಟಕ, ಸುವರ್ಣ ಹೆಜ್ಜೆಗಳು…

    ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ…’ – ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಣ ಮಾಡಿದ ಸಂದರ್ಭದಲ್ಲಿ ಮೊಳಗಿದ ಘೊಷಣೆ ಇದು. ಅದಾಗಿ ಐವತ್ತು ವರ್ಷಗಳು ಕಳೆದಿವೆ. ಆ ಘೊಷಣೆಯ ಆಶಯ ಸಂಪೂರ್ಣವಾಗಿ ಈಡೇರದೇ ಇರಬಹುದು. ಆದರೆ ಹಾಗೆಂದು ನಿರಾಶರಾಗುವ ಅಗತ್ಯವೂ ಇಲ್ಲ. ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ತನ್ನದೇ ಆದ ಸದೃಢ ಹೆಜ್ಜೆಗಳನ್ನು ಇರಿಸುವಲ್ಲಿ ಯಶಸ್ವಿಯಾಗಿದೆ. ಆ ಪೈಕಿ ಸಾಂಕೇತಿಕವಾಗಿ 50 ಆಯ್ದ ಮೈಲಿಗಲ್ಲುಗಳನ್ನು ಇಲ್ಲಿ ದಾಖಲಿಸಲಾಗಿದೆ.

    ಸುವರ್ಣ ಕರ್ನಾಟಕ, ಸುವರ್ಣ ಹೆಜ್ಜೆಗಳು...ಹೆಸರಾಯಿತು ಕರ್ನಾಟಕ: ದೇವರಾಜ ಅರಸರು 1972ರಲ್ಲಿ ಅಧಿಕಾರಕ್ಕೇರಿದ ಮರುವರ್ಷವೇ, ಅಂದರೆ 1973ರಲ್ಲಿ ‘ಕರ್ನಾಟಕ’ದ ಉದಯವಾಯಿತು. ಮೈಸೂರು ಎಂದು ಇದ್ದ ರಾಜ್ಯದ ಹೆಸರನ್ನು ಕರ್ನಾಟಕ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

    ಆಡಳಿತದಲ್ಲಿ ಕನ್ನಡ: ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲೇ ಕಾರ್ಯನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯದವರು 450 ಪುಟಗಳ ‘ಕಚೇರಿ ಕೈಪಿಡಿ’ಯನ್ನು ಸಿದ್ಧಪಡಿಸಿದ್ದು, ಅದನ್ನು ಎಲ್ಲ ಸಚಿವರು ಮತ್ತು ಇಲಾಖಾ ಮುಖ್ಯಸ್ಥರ ಕಾರ್ಯಾಲಯಗಳಿಗೆ ಕಳಿಸಿ, ಕಟ್ಟುನಿಟ್ಟಾಗಿ ಪಾಲಿಸುವಂತೆ 1974ರ ಆ. 26ರಂದು ಸರ್ಕಾರ ಆದೇಶ ಹೊರಡಿಸಿತು.

    ನಾಮಫಲಕ: ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳ ನಾಮಫಲಕಗಳಲ್ಲಿ ಕನ್ನಡವನ್ನೇ ಬಳಸುವಂತೆ 1981ರ ಆ. 10ರಂದು ಸರ್ಕಾರ ಆದೇಶ ಹೊರಡಿಸಿತು. ಫಲಕಗಳಲ್ಲಿ ಏಕರೂಪತೆ ತರುವ ಸಲುವಾಗಿ ‘ಸರ್ಕಾರಿ ಇಲಾಖಾ ನಾಮಫಲಕಗಳ ಕೈಪಿಡಿ’ಯನ್ನು ಸರ್ಕಾರ ಪ್ರಕಟಿಸಿತು.

    ಕಡತ-ಪತ್ರ: ಕಡತಗಳ ಮೇಲೆ ಬರೆಯುವ ಟಿಪ್ಪಣಿಗಳು, ಪತ್ರವ್ಯವಹಾರ, ಸಭೆಯ ನಡವಳಿಕೆಗಳು, ಪ್ರಕಟಣೆಗಳು, ಜಾಹೀರಾತು, ನೋಟಿಸ್, ಲೈಸೆನ್ಸ್, ಬಿಲ್, ಪ್ರಮಾಣಪತ್ರ, ಲೆಟರ್​ಹೆಡ್ಸ್, ಕಚೇರಿಯ ಹಾಗೂ ಬೀದಿಯ ಫಲಕಗಳು, ಲೆಕ್ಕಪತ್ರಗಳು, ರಿಜಿಸ್ಟರ್​ಗಳು ಕನ್ನಡದಲ್ಲೇ ಇರಬೇಕೆಂಬ ಕಟ್ಟಪ್ಪಣೆ ಹೊರಡಿಸಿದ್ದು 1983ರ ಫೆ. 10ರಂದು. ಇದನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿ, ಬೆರಳಚ್ಚು ಯಂತ್ರಗಳು ಮತ್ತು ಬೆರಳಚ್ಚುಗಾರರ ಕೊರತೆ ಕಂಡುಬಂದರೆ, ಬಾಲ್​ಪಾಯಿಂಟ್ ಪೆನ್ ಹಾಗೂ ಕಾರ್ಬನ್ ಕಾಗದ ಬಳಸಿ ಪತ್ರವ್ಯವಹಾರ ಮಾಡಬೇಕೆಂದು ಅದರಲ್ಲಿ ನಿರ್ದಿಷ್ಟವಾಗಿ ನಮೂದಿಸಿದ್ದು ವಿಶೇಷ.

    ಕನ್ನಡದಲ್ಲೇ ವಿಧೇಯಕಗಳು: ಏಕೀಕರಣವಾಗಿ ಮೂರು ದಶಕ ಕಳೆಯುತ್ತ ಬಂದಿದ್ದರೂ ಶಾಸನಸಭೆಗಳಲ್ಲಿ ವಿಧೇಯಕಗಳು ಮತ್ತು ತಿದ್ದುಪಡಿಗಳು ಇಂಗ್ಲಿಷ್​ನಲ್ಲೇ ಮಂಡನೆ ಆಗುತ್ತಿದ್ದುದನ್ನು ಗಮನಿಸಿದ ಸರ್ಕಾರ, 1984ರ ಜು. 16ರಂದು ಆದೇಶ ಹೊರಡಿಸಿ, ಇನ್ನು ಮುಂದೆ ಸರ್ಕಾರ ಹೊರಡಿಸುವ ಶಾಸನಗಳು, ನಿಯಮಾವಳಿಗಳು, ನಿಬಂಧನೆಗಳು, ವಿಧೇಯಕ ಮತ್ತು ತಿದ್ದುಪಡಿಗಳು ಕನ್ನಡದಲ್ಲೇ ಇರಬೇಕೆಂದು ಕಟ್ಟಾಜ್ಞೆ ಮಾಡಿತು. ಅಷ್ಟೇ ಅಲ್ಲ, ಅದುವರೆಗೆ ಇಂಗ್ಲಿಷ್​ನಲ್ಲಿ ಮಂಡಿಸಿ ಅಂಗೀಕರಿಸಿದ ಎಲ್ಲ ಶಾಸನಗಳು, ನಿಯಮಾವಳಿಗಳನ್ನೂ ಕನ್ನಡಕ್ಕೆ ತರ್ಜುಮೆ ಮಾಡಬೇಕೆಂದು ಆದೇಶಿಸಿತು.

    ಸುವರ್ಣ ಕರ್ನಾಟಕ, ಸುವರ್ಣ ಹೆಜ್ಜೆಗಳು...ಕನ್ನಡ ಕಾವಲು ಸಮಿತಿ ರಚನೆ: ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ 1983ರ ಫೆ. 10ರಂದು ಕನ್ನಡ ಕಾವಲು ಸಮಿತಿಯನ್ನು ರಚಿಸಿತು. ಇದಕ್ಕೆ ಮೊದಲ ಅಧ್ಯಕ್ಷರಾಗಿದ್ದವರು ಸಿದ್ದರಾಮಯ್ಯ (ಈಗಿನ ಮುಖ್ಯಮಂತ್ರಿ). ನಂತರ ಜ್ಞಾನದೇವ ದೊಡ್ಡಮೇಟಿ, ಪಾಟೀಲ ಪುಟ್ಟಪ್ಪ, ಡಾ. ಜಿ. ನಾರಾಯಣ ಅಧ್ಯಕ್ಷರಾಗಿದ್ದರು. 1995ರವರೆಗೆ ಇದು ಅಸ್ತಿತ್ವದಲ್ಲಿತ್ತು. ರಾಜ್ಯ ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಕನ್ನಡ ಅನುಷ್ಠಾನ ಕಾರ್ಯಗಳ ಉಸ್ತುವಾರಿ ಈ ಸಮಿತಿಯ ಪ್ರಮುಖ ಕಾರ್ಯವಾಗಿತ್ತು. ಸುಮಾರು 12 ವರ್ಷಗಳ ಕಾಲ ಈ ಕಾರ್ಯವನ್ನು ಸಮಿತಿ ಮಾಡಿತು.

    ಕನ್ನಡ ಭಾಷಾ ಸಮಗ್ರ ವಿಧೇಯಕ: ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲ ಹಂತಗಳಲ್ಲಿ ಅನುಷ್ಠಾನಗೊಳಿಸುವುದಕ್ಕೆ ಅಗತ್ಯವಾದ ಶಾಸನಾತ್ಮಕ ಬಲವನ್ನು ಒಳಗೊಂಡ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ’ವನ್ನು 2022ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಸಚಿವರಾಗಿದ್ದ ಸುನೀಲ್​ಕುಮಾರ್ ಮಂಡಿಸಿದರು. ಆಡಳಿತದಲ್ಲಿ ಕನ್ನಡ ಜಾರಿ ನಿಯಮ ಉಲ್ಲಂಘಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ.

    ಡಾ. ಡಿ.ಎಂ. ನಂಜುಂಡಪ್ಪ ಸಮಿತಿ: ರಾಜ್ಯದಲ್ಲಿರುವ ಪ್ರಾದೇಶಿಕ ಅಸಮತೋಲನ ಗುರುತಿಸಲು ಸರ್ಕಾರ 2001ರಲ್ಲಿ ಡಾ.ಡಿ.ಎಂ. ನಂಜುಂಡಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಒಂದೇ ವರ್ಷದಲ್ಲಿ ಆ ಸಮಿತಿ ತನ್ನ ವರದಿ ನೀಡಿತು. ಆಗ ಇದ್ದ 175 ತಾಲೂಕುಗಳ ಪೈಕಿ 114 ತಾಲೂಕುಗಳು ಹಿಂದುಳಿದಿವೆ ಎಂಬುದನ್ನು ಕಾಂಪ್ರಹೆನ್ಸಿವ್ ಕಾಂಪೋಜಿಟ್ ಡೆವಲಪ್​ವೆುಂಟ್ ಇಂಡೆಕ್ಸ್ (ಸಿಸಿಡಿಐ) ಮತ್ತು ಕ್ಯುಮುಲೇಟಿವ್ ಡೆಪ್ರಿವೇಷನ್ ಇಂಡೆಕ್ಸ್ (ಸಿಡಿಐ) ಮೂಲಕ ಅದು ವೈಜ್ಞಾನಿಕ ರೀತಿಯಲ್ಲಿ ಪ್ರಸ್ತುತಪಡಿಸಿತು.

    ಅಧಿಕಾರ ವಿಕೇಂದ್ರೀಕರಣ: ವಿಧಾನಸೌಧಕ್ಕೆ ಕೇಂದ್ರೀಕೃತವಾಗಿದ್ದ ಅಧಿಕಾರವನ್ನು ಜಿಲ್ಲೆ, ತಾಲೂಕು, ಗ್ರಾಮಮಟ್ಟಕ್ಕೂ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಪಂಚಾಯತ್​ರಾಜ್ ವ್ಯವಸ್ಥೆ ಮೊದಲು ಜಾರಿಯಾಗಿದ್ದು ಕರ್ನಾಟಕದಲ್ಲಿ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವ ನಜೀರ್ ಸಾಬ್ ಮೂಲಕ ಇದು ಅನುಷ್ಠಾನಗೊಂಡಿತು. ಇದನ್ನು ಗಮನಿಸಿ ಪ್ರಧಾನಿ ರಾಜೀವ್ ಗಾಂಧಿ ನಂತರ ದೇಶಾದ್ಯಂತ ಜಾರಿಗೊಳಿಸಲು ಮುಂದಾದರು.

    ವೃತ್ತಿಶಿಕ್ಷಣ ಪ್ರವೇಶಕ್ಕೆ ಸಿಇಟಿ: ಇಂಜಿನಿಯರಿಂಗ್, ವೈದ್ಯಕೀಯ ಮೊದಲಾದ ವೃತ್ತಿಶಿಕ್ಷಣ ಕೋರ್ಸ್​ಗಳ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವ್ಯವಸ್ಥೆ ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಜಾರಿಗೆ ಬಂತು. ಆಗ ಈ ರೀತಿಯ ವ್ಯವಸ್ಥೆ ಇಡೀ ದೇಶದಲ್ಲೇ ಮೊದಲು. ನಂತರ ಇದನ್ನೇ ಬೇರೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಅನುಕರಿಸಿದವು.

    ಋಣಮುಕ್ತ ಕಾಯ್ದೆ: ನಿರಂತರ ಸಾಲದಲ್ಲಿ ಮುಳುಗಿದ ನಿರ್ಗತಿಕರಿಗೆ ಋಣಪರಿಹಾರವನ್ನು ನೀಡಿದ್ದು ಎಪ್ಪತ್ತರ ದಶಕದಲ್ಲಿ. ದೇವರಾಜ ಅರಸು ಇದಕ್ಕೊಂದು ಕಾನೂನು ತಂದರು. ಇದರಿಂದ ಲಕ್ಷಾಂತರ ಮಂದಿ ಋಣಮುಕ್ತರಾಗಿ ಸ್ವಾಭಿಮಾನದಿಂದ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಯಿತು.

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ದೇಶದ ಚಲನಚಿತ್ರರಂಗದಲ್ಲಿ ಅತ್ಯಂತ ಪ್ರತಿಷ್ಠಿತವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ವರನಟ ಡಾ. ರಾಜ್​ಕುಮಾರ್ 1995ರಲ್ಲಿ ಭಾಜನರಾದರು. ನಂತರ ಈ ಪುರಸ್ಕಾರವನ್ನು 2010ರಲ್ಲಿ ಕನ್ನಡಿಗ ಕ್ಯಾಮರಾಮನ್ ವಿ.ಕೆ. ಮೂರ್ತಿ ಪಡೆದರು.

    ನ್ಯಾಯಾಲಯಗಳಲ್ಲಿ ಕನ್ನಡ: ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಕಲಾಪ ಮತ್ತು ತೀರ್ಪು ನೀಡಿಕೆ ಇಂಗ್ಲಿಷ್​ನಲ್ಲೇ ನಡೆಯುತ್ತಿದ್ದುದನ್ನು ಗಮನಿಸಿದ ಸರ್ಕಾರ, 1974ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗಳಲ್ಲಿ, 1978ರಲ್ಲಿ ಸಿವಿಲ್ ಕೋರ್ಟ್​ಗಳಲ್ಲಿ, 1979ರಲ್ಲಿ ಸೆಷನ್ಸ್ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಗೆ ಆದೇಶ ಹೊರಡಿಸಿತು. ಕನ್ನಡದಲ್ಲಿ ಮೊದಲ ತೀರ್ಪು ನೀಡಿದ ಜಿಲ್ಲಾಧಿಕಾರಿ ಜಯತೀರ್ಥ ರಾಜ ಪುರೋಹಿತ್.

    ಭಾರತರತ್ನ ಪ್ರಶಸ್ತಿ: ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಭಾರತರತ್ನ ಈವರೆಗೆ ಮೂವರು ಕನ್ನಡಿಗರಿಗೆ ಸಂದಿದೆ. ಸರ್ ಸಿ.ವಿ. ರಾಮನ್, ಸರ್ ಎಂ. ವಿಶ್ವೇಶ್ವರಯ್ಯ, ಡಾ. ಸಿ.ಎನ್.ಆರ್. ರಾವ್ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

    ಉತ್ಪನ್ನಗಳಿಗೆ ಜಿಐ ಟ್ಯಾಗ್: ಕರ್ನಾಟಕದ 45ಕ್ಕೂ ಹೆಚ್ಚು ಉತ್ಪನ್ನಗಳು ಜಿಐ ಟ್ಯಾಗ್ (ಭೌಗೋಳಿಕ ಸೂಚಿಕೆ) ಮಾನ್ಯತೆ ಪಡೆದಿವೆ. ಇದರಲ್ಲಿ ಗಂಜೀಫಾ ಕಲೆ, ಮಲ್ಲಿಗೆ ಹೂ, ರಸಬಾಳೆ, ಚಕೋತ, ಧಾರವಾಡ ಪೇಡ, ಕಿನ್ನಾಳ ಗೊಂಬೆ ಮುಂತಾದವು ಇವೆ.

    ಪಶುಭಾಗ್ಯ: ರೈತರಿಗೆ ನೆರವಾಗಲು ಪಶುಭಾಗ್ಯ ಯೋಜನೆಯನ್ನು 2015ರಲ್ಲಿ ಸಿದ್ದರಾಮಯ್ಯ ಜಾರಿ ಮಾಡಿದರು. ಇದರಡಿ ರೈತರಿಗೆ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕೋಳಿಗಳನ್ನು ಖರೀದಿಸಲು ಬ್ಯಾಂಕ್​ಗಳಿಂದ ಸಾಲ ನೀಡಲಾಗುತ್ತದೆ. ಇದಕ್ಕೆ ಸರ್ಕಾರ ಪರಿಶಿಷ್ಟರಿಗೆ ಶೇ. 50 ಮತ್ತು ಇತರರಿಗೆ ಶೇ. 25ರಷ್ಟು ಸಹಾಯಧನವನ್ನೂ ನೀಡುತ್ತದೆ.

    ಯಶಸ್ವಿನಿ ಆರೋಗ್ಯ ವಿಮೆ: ಆರ್ಥಿಕ ದುರ್ಬಲರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಸೇವೆ ನೀಡಲು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು 2002ರಲ್ಲಿ ಆಗಿನ ಸಿಎಂ ಎಸ್.ಎಂ. ಕೃಷ್ಣ ಜಾರಿಗೆ ತಂದರು. 2003ರಲ್ಲಿ ಅನುಷ್ಠಾನಗೊಂಡಿದ್ದ ಯೋಜನೆ ಕಾಲಾನಂತರದಲ್ಲಿ ಸ್ಥಗಿತಗೊಂಡಿತ್ತು. 2018ರಲ್ಲಿ ಪುನರಾರಂಭವಾಯಿತು.

    ಎಲೆಕ್ಟ್ರಾನಿಕ್ ಸಿಟಿ: ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಸ್ಥಾಪನೆಯಾದದ್ದು 1978ರಲ್ಲಿ. ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೇಗೂರಿನ ಇದನ್ನು ಕಿಯಾನಿಕ್ಸ್ ಸಂಸ್ಥೆ ಸ್ಥಾಪಿಸಿತು. 800 ಎಕರೆ ಪ್ರದೇಶದಲ್ಲಿ ಇನ್​ಫೋಸಿಸ್, ವಿಪ್ರೋ, ಟಿಸಿಎಸ್, ಎಚ್​ಸಿಎಲ್ ಸೇರಿ ನೂರಾರು ಎಲೆಕ್ಟ್ರಾನಿಕ್ಸ್/ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಇವೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಐಟಿ ಹಬ್ ಆಗಿ ಬೆಳೆಯಲು ಇದರ ಕೊಡುಗೆ ಅಪಾರ. ಇದು ದೇವರಾಜ ಅರಸು ಅವರ ದೂರದೃಷ್ಟಿಯ ಫಲ.

    ಸ್ತ್ರೀಶಕ್ತಿಗೆ ಬಲ: ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಯೋಜನೆಯನ್ನು ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ 2000-01ರಲ್ಲಿ ಜಾರಿಗೊಳಿಸಲಾಯಿತು. ಸ್ತ್ರೀಶಕ್ತಿ ಗುಂಪುಗಳನ್ನು ರಚಿಸುವ ಮೂಲಕ ಬೃಹತ್ ಪ್ರಮಾಣದಲ್ಲಿ ಮಹಿಳೆಯರನ್ನು ಸಂಘಟಿಸಲು ಪ್ರಯತ್ನಿಸಿದ್ದು ಒಂದು ಕ್ರಾಂತಿಕಾರಿ ಹೆಜ್ಜೆ. ಸುತ್ತುನಿಧಿ, ಸಾಲದ ಮೇಲಿನ ಬಡ್ಡಿಗೆ ಸಹಾಯಧನ, ಅಧಿಕ ಉಳಿತಾಯ ಮಾಡಿದವರಿಗೆ ಪ್ರೋತ್ಸಾಹಧನ, ಆದಾಯೋತ್ಪನ್ನ ಚಟುವಟಿಕೆ, ಮಾರುಕಟ್ಟೆ ಸೌಲಭ್ಯ ಮುಂತಾದವು ಇದರ ಪ್ರಮುಖಾಂಶಗಳು.

    ಆಶ್ರಯ ವಸತಿ ಯೋಜನೆ: ಸ್ವಂತ ಸೂರು ಪ್ರತಿಯೊಬ್ಬರ ಕನಸು. ಬಡವರಿಗೆ ಅದು ಸುಲಭವಾಗಿ ನನಸಾಗುವ ಕನಸಲ್ಲ. ಹಾಗಾಗಿ ಬಡವರಿಗೆ ಮನೆಗಳನ್ನು ನಿರ್ವಿುಸಿಕೊಡಲು ಆಶ್ರಯ ವಸತಿ ಯೋಜನೆಯನ್ನು 1992ರಲ್ಲಿ ಆಗಿನ ಸಿಎಂ ಎಸ್. ಬಂಗಾರಪ್ಪ ಆರಂಭಿಸಿದರು. ಆ ಯೋಜನೆ ಈಗಲೂ ಮುಂದುವರಿದಿದೆ.

    ನ್ಯಾಯಾಂಗದಲ್ಲಿ ಪ್ರಶಸ್ತಿ: ಕೋರ್ಟ್​ಗಳಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ 2008ರಲ್ಲಿ ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಸ್ಥಾಪಿಸಿತು. ಕನ್ನಡದಲ್ಲೇ ಹೆಚ್ಚು ತೀರ್ಪು ನೀಡುವ ನ್ಯಾಯಾಧೀಶರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದೇ ರೀತಿ, ಕನ್ನಡದಲ್ಲಿ ಅರ್ಜಿ ಸಲ್ಲಿಸುವ, ವಾದ ಮಂಡಿಸುವ ಸರ್ಕಾರಿ ಅಭಿಯೋಜಕರು ಮತ್ತು ವಕೀಲರಿಗೆ 2016ರಿಂದ ಪ್ರಶಸ್ತಿ ನೀಡಲು ಆರಂಭಿಸಲಾಗಿದೆ. ಈವರೆಗೆ ಐನೂರಕ್ಕೂ ಹೆಚ್ಚು ಜನ ಈ ಪ್ರಶಸ್ತಿ ಪಡೆದಿದ್ದಾರೆ.

    ದೇಶದ ಪ್ರಧಾನಿ ಹುದ್ದೆ

    ಸುವರ್ಣ ಕರ್ನಾಟಕ, ಸುವರ್ಣ ಹೆಜ್ಜೆಗಳು...ಭಾರತದ ಪ್ರಧಾನಿಯಾಗಿ ಆಯ್ಕೆಯಾದ ಕರ್ನಾಟಕದ ಏಕೈಕ ರಾಜಕಾರಣಿ ಎಚ್.ಡಿ. ದೇವೇಗೌಡರು. 1996ರ ಜೂನ್ 1ರಿಂದ 1997ರ ಏಪ್ರಿಲ್ 21ರವರೆಗೆ ಅವರು ಪ್ರಧಾನಿಯಾಗಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಹಲವು ರೈತಪರ ಯೋಜನೆಗಳನ್ನು ಜಾರಿಗೊಳಿಸಿದರು.

    ಬೆಳಕಾದ ಭಾಗ್ಯಲಕ್ಷ್ಮೀ: ‘ಭಾಗ್ಯಲಕ್ಷ್ಮೀ’ ಯೋಜನೆ 2006-07ರಲ್ಲಿ ಜಾರಿಯಾಯಿತು. ಹೆಣ್ಣುಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣುಮಗುವಿನ ಜನನವನ್ನು ಉತ್ತೇಜಿಸಲು ಇದನ್ನು ಜಾರಿಗೆ ತರಲಾಯಿತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ಬಿ.ಎಸ್. ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇದು ಜಾರಿಯಾದರೂ ನಂತರ ಬಿಎಸ್​ವೈ ಅವಧಿಯಲ್ಲಿ ಇದಕ್ಕೆ ಸಾವಿರಾರು ಕೋಟಿ ರೂ. ಅನುದಾನ ದೊರೆಯಿತು. ಲಕ್ಷಾಂತರ ಕುಟುಂಬಗಳ ಹೆಣ್ಣುಮಕ್ಕಳು ಭಾಗ್ಯಲಕ್ಷ್ಮೀ ಬಾಂಡ್​ಗಳನ್ನು ಪಡೆದು, ಆರ್ಥಿಕವಾಗಿ ಸದೃಢರಾದರು.

    ಆರ್ಥಿಕ ಅಭಿವೃದ್ಧಿ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆಯ ದರವೇ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಸರಾಸರಿ ಬೆಳವಣಿಗೆ ದರವು 1974ರ ಸಮಯದಲ್ಲಿ 4.1ರಷ್ಟಿದ್ದದ್ದು 2022ರ ವೇಳೆಗೆ 9.5ರಷ್ಟಾಗಿದೆ.

    ಪ್ರಾಧಿಕಾರ ಸ್ಥಾಪನೆ: ಕನ್ನಡ ಕಾವಲು ಸಮಿತಿಯ ವ್ಯಾಪ್ತಿಯನ್ನು ಹಿಗ್ಗಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು 1994ರಲ್ಲಿ ಮಂಡನೆಯಾದ ವಿಧೇಯಕದ ಮೂಲಕ ರಚಿಸಲಾಯಿತು. ಇದಕ್ಕೆ ಸ್ವಾಯತ್ತತೆ ಮತ್ತು ಶಾಸನಬದ್ಧ ಸ್ಥಾನಮಾನ ನೀಡಲಾಯಿತಲ್ಲದೆ ಇದರ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಯಿತು. ಎಚ್. ನರಸಿಂಹಯ್ಯ, ಬರಗೂರು ರಾಮಚಂದ್ರಪ್ಪ, ಡಾ. ಸಿದ್ಧಲಿಂಗಯ್ಯ ಸೇರಿ ಹಲವಾರು ಖ್ಯಾತನಾಮರು ಇದರ ಅಧ್ಯಕ್ಷರಾಗಿ ದುಡಿದಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಪರಿಶೀಲನೆ, ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳ ಜಾರಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಾಮುಖ್ಯತೆ ಸಿಗುವಂತೆ ಮಾಡುವುದು ಮುಂತಾದ ಜವಾಬ್ದಾರಿಗಳನ್ನು ನಿಭಾಯಿಸಲು ಪ್ರಾಧಿಕಾರ ಪ್ರಯತ್ನಿಸುತ್ತಿದೆ. ಪುಸ್ತಕೋದ್ಯಮ ಬೆಳವಣಿಗೆಗೆ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಲಾಯಿತು.

    ಶಾಲೆಗಳಲ್ಲಿ ಭಾಷಾನೀತಿ: ಪ್ರೌಢಶಾಲಾ ಹಂತದಲ್ಲಿ ಕನ್ನಡವೇ ಏಕೈಕ ಪ್ರಥಮ ಭಾಷೆಯಾಗತಕ್ಕದ್ದೆಂದು, ಕನ್ನಡೇತರ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಪ್ರಥಮ ವರ್ಷದಿಂದ ಕನ್ನಡ ಬೋಧನೆ ಕಡ್ಡಾಯವಾಗತಕ್ಕದ್ದೆಂದು ಕಟ್ಟುನಿಟ್ಟಿನ ಆದೇಶವನ್ನು ಸರ್ಕಾರ 1982ರಲ್ಲಿ ಹೊರಡಿಸಿತು. ಆದರೆ ಅದರ ವಿರುದ್ಧ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸುದೀರ್ಘ ಕಾನೂನು ಹೋರಾಟ ನಡೆದಿದೆ.

    ಮಲಹೊರುವ ಪದ್ಧತಿ ನಿಷೇಧ: ಅಸ್ಪ ೃಶ್ಯರಿಗೆ ಪರಂಪರಾನುಗತವಾಗಿ ಬಂದ ಮಲಹೊರುವ ವೃತ್ತಿಗೆ ಇತಿಶ್ರೀ ಹಾಡಲು ನಿರ್ಧರಿಸಿ, ದೇವರಾಜ ಅರಸರ ಅಧಿಕಾರಾವಧಿಯಲ್ಲಿ ಒಂದು ಶಾಸನವನ್ನು ರೂಪಿಸಿ ಜಾರಿ ಮಾಡಲಾಯಿತು. ಸಾವಿರಾರು ವರ್ಷಗಳಿಂದ ಬೇರು ಬಿಟ್ಟ ಜಾತಿಪದ್ಧತಿ ಯನ್ನು ಬೇರುಸಹಿತ ಕಿತ್ತೊಗೆಯುವುದು ಅಸಾಧ್ಯವಾದರೂ, ಅದರ ಒಂದು ಭಾಗವಾದ ಈ ಅನಿಷ್ಠ ಪದ್ಧತಿಯನ್ನು ಕಾನೂನು ಬದ್ಧವಾಗಿ ನಿಷೇಧಿಸಲಾಯಿತು.

    ಹಾವನೂರು ವರದಿ ಅನುಷ್ಠಾನ: ಪರಿಶಿಷ್ಟರಿಗೆ ಶೇ. 18 ಮೀಸಲಾತಿ ಇದ್ದರೂ ಹಿಂದುಳಿದವರಿಗೆ ಇರಲಿಲ್ಲ. ಇದನ್ನು ಮನಗಂಡ ದೇವರಾಜ ಅರಸು ಸಿಎಂ ಆಗಿದ್ದಾಗ ಆಗಿನ ಕಾನೂನು ಸಚಿವ ಲಕ್ಷ್ಮಣ ಹಾವನೂರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿದರು. 1975ರಲ್ಲಿ ಅಂಕಿಅಂಶಗಳನ್ನು ಒಳಗೊಂಡ ವರದಿ ಸಲ್ಲಿಕೆಯಾಯಿತು. ಭಾರಿ ರಾಜಕೀಯ ವಿರೋಧವನ್ನೂ ಲೆಕ್ಕಿಸದೆ ಅರಸು ಹಿಂದುಳಿದ ವರ್ಗದವರಿಗೆ ಶೇ. 55 ಮೀಸಲಾತಿ ಕಲ್ಪಿಸುವ ಆ ವರದಿಯನ್ನು ಜಾರಿಗೊಳಿಸಿದರು.

    ಕನ್ನಡ ಆಡಳಿತ ಭಾಷಾ ವರ್ಷಾಚರಣೆ: 1985ರ ನ. 1ರಿಂದ 1986ರ ನ. 1ರವರೆಗೆ ‘ಸಮಗ್ರ ಕನ್ನಡ ಆಡಳಿತ ಭಾಷಾ ವರ್ಷ’ ಆಚರಿಸಲಾಯಿತು. ವಿಧಾನಸೌಧದಿಂದ ಹಿಡಿದು ಗ್ರಾಮಲೆಕ್ಕಿಗರವರೆಗೆ ಎಲ್ಲ ಸರ್ಕಾರಿ ಸಂಸ್ಥೆಗಳು, ಸರ್ಕಾರದ ಅನುದಾನ, ಧನಸಹಾಯ ಪಡೆಯುತ್ತಿರುವ ಸ್ವಾಯತ್ತ ಸಂಸ್ಥೆಗಳು, ಕಾರ್ಪೆರೇಷನ್​ಗಳು, ಸ್ಥಳೀಯ ಸಂಸ್ಥೆಗಳು, ಕಾರ್ಖಾನೆಗಳು ಕನ್ನಡದಲ್ಲೇ ವ್ಯವಹರಿಸಬೇಕು. ಉದಾಸೀನ ತೋರುವ ಅಧಿಕಾರಿಗಳು ಮತ್ತು ನೌಕರರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿತು.

    ಸರೋಜಿನಿ ಮಹಿಷಿ ಸಮಿತಿ: ಕನ್ನಡಿಗರಿಗೆ ಉದ್ಯೋಗ ಖಚಿತಪಡಿಸುವುದಕ್ಕೆ ಸಂಬಂಧಿಸಿದಂತೆ 1984ರಲ್ಲಿ ಸರೋಜಿನಿ ಮಹಿಷಿ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತು. ‘ಕರ್ನಾಟಕದಲ್ಲಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು’ ಎಂದು ಸಮಿತಿ ವರದಿ ನೀಡಿತು. ತಕ್ಷಣವೇ ಅದು ಜಾರಿಯಾಗದಿದ್ದರೂ, ಕನ್ನಡಿಗರಿಗೆ ಉದ್ಯೋಗ ದೊರಕಿಸುವಲ್ಲಿ ಈ ಸಮಿತಿಯ ವರದಿ ಪ್ರಮುಖ ಮೈಲಿಗಲ್ಲು.

    ಬಡವರಿಗೆ ಅನ್ನಭಾಗ್ಯ: ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ದಿನವೇ ಘೊಷಿಸಿದರು. ನಂತರದ ವರ್ಷಗಳಲ್ಲಿ ಯೋಜನೆಗೆ ಬದಲಾವಣೆ ಮಾಡಿ ಪ್ರತಿ ಕುಟುಂಬ ಸದಸ್ಯನಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲು ಆರಂಭಿಸಲಾಯಿತು. ಶಾಲಾಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದರು. ಅರಸು ಅವಧಿಯ ಉಳುವವನೇ ಹೊಲದೊಡೆಯ ಕಾಯ್ದೆ ರೀತಿಯಲ್ಲೇ ಸಿದ್ದರಾಮಯ್ಯ 2017ರಲ್ಲಿ ವಾಸಿಸುವವನೇ ಮನೆದೊಡೆಯ ಕಾನೂನು ಜಾರಿಗೆ ತಂದರು.

    ಪ್ರತ್ಯೇಕ ಕೃಷಿ ಬಜೆಟ್: ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಾಗಿದ್ದು 2008ರಲ್ಲಿ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಯೋಜನೆ ಜಾರಿ ಮಾಡಿದರು. 76 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಸಾವಯವ ಕೃಷಿ ಯೋಜನೆ ಜಾರಿಗೊಳಿಸಿ 83 ಸಾವಿರ ರೈತರು ತೊಡಗುವಂತೆ ಮಾಡಿದರು.

    ರೈಟ್ ಲೈವ್ಲಿಹುಡ್ ಪ್ರಶಸ್ತಿ: ಬಿಳಿಗಿರಿ ರಂಗನ ಬೆಟ್ಟದ ಗಿರಿಜನರ ಅಭಿವೃದ್ಧಿಗಾಗಿ ದುಡಿದ ಡಾ. ಎಸ್. ಸುದರ್ಶನ್ ಅವರಿಗೆ 1994ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಲಭಿಸಿತು. ವಿಶ್ವದ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಪರಿಗಣಿತವಾಗಿರುವ ಪ್ರತಿಷ್ಠಿತ ಪುರಸ್ಕಾರ ಇದು.

    ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಕನ್ನಡಿಗರು ಅಲಂಕರಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. 2018ರಲ್ಲಿ ನಡೆದ ಚುನಾವಣೆಯಲ್ಲಿ ಡಾ. ಚಂದ್ರಶೇಖರ ಕಂಬಾರರು ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು.

    ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ: ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಬಗ್ಗೆ ಕಾನೂನು ರೂಪಿಸಿದರು. ಆದರೆ ದೇವೇಗೌಡರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಆ ಕಾನೂನು ಜಾರಿಗೆ ಬಂತು.

    ಮ್ಯಾಗ್ಸೆಸೆ ಗೌರವ: ಏಷ್ಯಾ ಖಂಡದ ನೊಬೆಲ್ ಎಂದೇ ಪರಿಗಣಿತವಾಗಿರುವ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಈವರೆಗೆ ಕರ್ನಾಟಕದ ಐವರು ಪಡೆದಿದ್ದಾರೆ. ಕಮಲಾದೇವಿ ಚಟ್ಟೋಪಾಧ್ಯಾಯ, ಆರ್.ಕೆ. ಲಕ್ಷ್ಮಣ್, ಕೆ.ವಿ. ಸುಬ್ಬಣ್ಣ, ಹರೀಶ್ ಹಂದೆ ಮತ್ತು ವಿಲ್ಸನ್ ಬೆಜವಾಡ ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದ ಕನ್ನಡಿಗರು.

    ಭೂಸುಧಾರಣೆ ಕಾಯ್ದೆ: ದೇವರಾಜ ಅರಸು ಸಿಎಂ ಆಗಿದ್ದಾಗ 1974ರಲ್ಲಿ ಜಾರಿಗೆ ಬಂದ ‘ಉಳುವವನೇ ಹೊಲದೊಡೆಯ’ ಕಾನೂನಿನಿಂದಾಗಿ ಸುಮಾರು 4.85 ಲಕ್ಷ ಗೇಣಿದಾರರು 21 ಲಕ್ಷ ಎಕರೆ ಭೂಮಿ ಪಡೆದು ಭೂಮಾಲೀಕರಾದರು. ಅದರಲ್ಲಿ 14,700 ದಲಿತ ಭೂಹೀನರು 1 ಲಕ್ಷ ಎಕರೆಗೂ ಹೆಚ್ಚು ಭೂಮಿ ಪಡೆದರು. 3,700 ಕೃಷಿ ಕಾರ್ವಿುಕರು ತಾವು ವಾಸಿಸುತ್ತಿದ್ದ ಮನೆಗಳ ಮಾಲೀಕರಾದರು. ಭೂಮಿ ಕೊಟ್ಟವರಿಗೆ 20.30 ಕೋಟಿ ರೂ. ಪರಿಹಾರವನ್ನೂ ಸರ್ಕಾರ ನೀಡಿತು.

    ಜ್ಞಾನಪೀಠ ಪುರಸ್ಕಾರ: ಇದುವರೆಗೆ ಕರ್ನಾಟಕದ 8 ಸಾಹಿತಿಗಳಿಗೆ ಜ್ಞಾನಪೀಠ ಪುರಸ್ಕಾರ ಲಭಿಸಿದೆ. ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರ ಈ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಮಹನೀಯರು.

    ಕೂಲಿಗಾಗಿ ಕಾಳು: ಎಲ್ಲ ದುಡಿಯುವ ಕೈಗಳಿಗೂ ವರ್ಷಕ್ಕೆ ಕನಿಷ್ಠ ನೂರು ದಿನಗಳ ಉದ್ಯೋಗ ಕಲ್ಪಿಸುವ ಯೋಜನೆ ಮೊದಲು ಜಾರಿಯಾಗಿದ್ದು ಕರ್ನಾಟಕದಲ್ಲಿ, 1973ರಲ್ಲಿ. ‘ಕೂಲಿಗಾಗಿ ಕಾಳು’ ಹೆಸರಿನ ಈ ಯೋಜನೆ ದೇವರಾಜ ಅರಸರ ಕನಸಿನ ಕೂಸು. ನಂತರ ಇದನ್ನು ಕೇಂದ್ರ ಯೋಜನಾ ಆಯೋಗ ಬೇರೆ ಹೆಸರಿನಲ್ಲಿ ದೇಶಾದ್ಯಂತ ಜಾರಿಗೊಳಿಸಿತು.

    ಬೆಂಗಳೂರು ಮೆಟ್ರೋ: ‘ನಮ್ಮ ಮೆಟ್ರೋ’ ಬೆಂಗಳೂರು ನಗರದೊಳಗೆ ಸೇವೆ ಸಲ್ಲಿಸುವ ಕ್ಷಿಪ್ರ ರೈಲು ವ್ಯವಸ್ಥೆ. ದೆಹಲಿ ನಂತರ ಇದು ದೇಶದ 2ನೇ ಅತಿ ಉದ್ದದ ಕಾರ್ಯಾಚರಣೆಯ ಮೆಟ್ರೋ ಜಾಲ. ದಕ್ಷಿಣ ಭಾರತದ ಮೊದಲ ಭೂಗತ (ಅಂಡರ್​ಗ್ರೌಂಡ್) ಮೆಟ್ರೋ. 1977ರಲ್ಲೇ ಈ ಯೋಜನೆ ಜಾರಿಗೊಳಿಸುವ ಯೋಚನೆ ಶುರುವಾಯಿತಾದರೂ ಇದರ ನಿರ್ಮಾಣ ಮುಗಿದು, ಕಾರ್ಯಾರಂಭ ಮಾಡಿದ್ದು 2011ರಲ್ಲಿ. ನಟ ಶಂಕರ್​ನಾಗ್ ಕೂಡ ಬಹುಹಿಂದೆಯೇ ಮೆಟ್ರೋ ಯೋಜನೆಯ ಕನಸು ಕಂಡಿದ್ದರು.

    ಕೊಳವೆಬಾವಿ ಕ್ರಾಂತಿ: ಎಂಬತ್ತರ ದಶಕದ ಮಧ್ಯಭಾಗದಲ್ಲಿ ಭೀಕರ ಬರಗಾಲ ತಲೆದೋರಿತ್ತು. ಕುಡಿಯಲೂ ನೀರಿರಲಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್​ಸಾಬ್ ಬರಪೀಡಿತ ಹಳ್ಳಿಗಳಲ್ಲೆಲ್ಲ ಬೋರ್​ವೆಲ್ ಕೊರೆಸಿ ಹ್ಯಾಂಡ್​ಪಂಪ್ ಹಾಕಿಸಿ ಆಧುನಿಕ ಭಗೀರಥರಾದರು. ಜನರು ಅವರನ್ನು ಪ್ರೀತಿಯಿಂದ ನೀರ್​ಸಾಬ್ ಎಂದು ಕರೆಯತೊಡಗಿದರು.

    ಆರಾಧನಾ ಯೋಜನೆ: ಪರಿಶಿಷ್ಟ ಜಾತಿ, ಪಂಗಡ, ಲಂಬಾಣಿ ತಾಂಡಾ, ವಡ್ಡರ ಕೇರಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ವಾಸವಿರುವ ಸ್ಥಳಗಳಲ್ಲಿನ ದೇವಾಲಯ, ಪೂಜಾಮಂದಿರ, ಹಾಗೂ ಪ್ರಾರ್ಥನಾಮಂದಿರಗಳ ದುರಸ್ತಿ, ಜೀಣೋದ್ಧಾರ ಹಾಗೂ ನವನಿರ್ವಣಕ್ಕಾಗಿ ಆರಾಧನಾ ಯೋಜನೆಯನ್ನು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೊಷಿಸಲಾಯಿತು. 1991-92ರಿಂದ ಇದು ಜಾರಿಗೆ ಬಂತು.

    ಜೀತವಿಮುಕ್ತಿ: ಶ್ರೀಮಂತ ಜಮೀನ್ದಾರರು ಬಡವರನ್ನು ಜೀವನಪರ್ಯಂತ ಜೀತಕ್ಕೆ ಇಟ್ಟುಕೊಳ್ಳುವ ಅಮಾನುಷ ಪದ್ಧತಿಯನ್ನು ಕೊನೆಗಾಣಿಸಿದವರು ದೇವರಾಜ ಅರಸು. ಅವರ ಕಾಲದಲ್ಲಿ ಸುಮಾರು 65 ಸಾವಿರ ಜೀತದಾಳುಗಳು ಋಣವಿಮುಕ್ತಿ ಹೊಂದಿದರು ಎನ್ನುವ ಅಂಶ ಸಾಮಾನ್ಯವೇನಲ್ಲ.

    ಮಕ್ಕಳಿಗೆ ಬೈಸಿಕಲ್: ಬಡತನ ರೇಖೆಗಿಂತ ಕೆಳಗೆ ಇರುವ ಹೆಣ್ಣುಮಕ್ಕಳಿಗೆ ಬೈಸಿಕಲ್ ಸೌಲಭ್ಯವನ್ನು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಲಾಯಿತು. 2007-08ರಿಂದ ಇದನ್ನು ನಗರ ಪ್ರದೇಶದ ಬಿಪಿಎಲ್ ಕುಟುಂಬದ ಹೆಣ್ಣುಮಕ್ಕಳಿಗೂ ಹಾಗೂ ಗಂಡುಮಕ್ಕಳಿಗೂ ವಿಸ್ತರಿಸಲಾಯಿತು. ಶಾಲಾ ದಾಖಲಾತಿ ಹೆಚ್ಚಿಸುವುದು, ಮಕ್ಕಳ ಕಲಿಕೆ, ಉಳಿಯುವಿಕೆ ಉತ್ತಮಪಡಿಸುವುದು, ಪ್ರಯಾಣದ ವೇಳೆಯನ್ನು ತಗ್ಗಿಸುವುದು ಈ ಯೋಜನೆಯ ಉದ್ದೇಶ.

    ಬಜೆಟ್ ಅನುದಾನ ಮೀಸಲು: ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅನುದಾನವನ್ನು ವೆಚ್ಚ ಮಾಡುವ ಪರಿಶಿಷ್ಟರು ಮತ್ತು ಗಿರಿಜನ ಉಪಯೋಜನೆ ಕಾಯ್ದೆ 2017ರಲ್ಲಿ ಜಾರಿಗೆ ಬಂತು. ಇದರಿಂದ ಆ ವರ್ಗಗಳಿಗೆ ಎಲ್ಲ ಇಲಾಖೆಗಳಲ್ಲಿ ಅಷ್ಟರಮಟ್ಟಿನ ಅನುದಾನ ಖಚಿತಪಡಿಸುವ ಮಹತ್ವದ ಕಾಯ್ದೆ ಇದು. ಇದನ್ನು ಜಾರಿಗೆ ತಂದ ಎರಡನೇ ರಾಜ್ಯ ಕರ್ನಾಟಕ.

    ಗೋಕಾಕ್ ಸಮಿತಿ ರಚನೆ

    ಸುವರ್ಣ ಕರ್ನಾಟಕ, ಸುವರ್ಣ ಹೆಜ್ಜೆಗಳು...ಪ್ರೌಢಶಾಲಾ ಹಂತದಲ್ಲಿ ಕನ್ನಡದ ಕಡೆಗಣನೆಗೆ ಮದ್ದು ಕಂಡುಹಿಡಿಯಲು 1980ರಲ್ಲಿ ಡಾ. ವಿ.ಕೃ. ಗೋಕಾಕರ ನೇತೃತ್ವದಲ್ಲಿ ಸಮಿತಿಯನ್ನು ಸರ್ಕಾರ ರಚಿಸಿತು. ಸಮಿತಿ ಸಲ್ಲಿಸಿದ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮೀನಮೇಷ ಎಣಿಸಲಾರಂಭಿಸಿದಾಗ ಕನ್ನಡಿಗರು ದೊಡ್ಡ ಚಳವಳಿಯನ್ನೇ ಮಾಡಿದರು. ಅದು ‘ಗೋಕಾಕ್ ಚಳವಳಿ’ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದರ ನೇತೃತ್ವವನ್ನು ಡಾ. ರಾಜ್​ಕುಮಾರ್ ವಹಿಸಿದ್ದರು.

    ಲೋಕಾಯುಕ್ತ ವ್ಯವಸ್ಥೆ: ಮಹಾರಾಷ್ಟ್ರದಲ್ಲಿ ಮೊದಲು ಲೋಕಾಯುಕ್ತ ವ್ಯವಸ್ಥೆ 1971ರಲ್ಲಿ ಜಾರಿಗೆ ಬಂತು. ಇದನ್ನು ಜಾರಿಗೊಳಿಸಿದ ಎರಡನೇ ರಾಜ್ಯ ಕರ್ನಾಟಕ. ದೇವರಾಜ ಅರಸು ಅವಧಿಯಲ್ಲಿ ಸಿ. ಹೊನ್ನಯ್ಯ ಮೊದಲ ಲೋಕಾಯುಕ್ತರಾಗಿ 1979ರಲ್ಲಿ ನಿಯುಕ್ತರಾದರು. ನಂತರ ಬಂದ ಗುಂಡೂರಾವ್ ಸರ್ಕಾರ ಈ ವ್ಯವಸ್ಥೆಯನ್ನು ತೆಗೆದುಹಾಕಿತು. ಬಳಿಕ, ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ (1984) ಮತ್ತೆ ಲೋಕಾಯುಕ್ತ ಸಂಸ್ಥೆ ಮರುಸ್ಥಾಪನೆಯಾಯಿತು.

    ಚಲನಚಿತ್ರಗಳಿಗೆ ಸಹಾಯಧನ: 1980ರ ದಶಕಗಳಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿಯೇ ಪೂರ್ಣವಾಗಿ ತಯಾರಿಸಿದ ಕನ್ನಡ ಚಲನಚಿತ್ರಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿಯನ್ನು ಮಂಜೂರು ಮಾಡಿತು ಅಲ್ಲದೆ ಆ ಚಿತ್ರಗಳಿಗೆ ಸಹಾಯಧನ ಮೊತ್ತವನ್ನೂ ಹೆಚ್ಚಿಸಿತು. ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ-ಕಲಾವಿದರಿಗೆ ಅವರ ಜೀವಿತಾವಧಿವರೆಗೆ ಮಾಸಾಶನ ನೀಡುತ್ತಿದೆ.

    ಪಕ್ಷಾಂತರ ನಿಷೇಧಕ್ಕೆ ನಾಂದಿ: ಪಕ್ಷಾಂತರದ ಪಿಡುಗಿಗೆ ಇತಿಶ್ರೀ ಹಾಡುವ ಕೆಲಸ ಆರಂಭವಾಗಿದ್ದೇ ನಮ್ಮ ರಾಜ್ಯದ ಒಂದು ಘಟನೆಯ ಮೂಲಕ. ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ಬೀಳಿಸಿದ ಪ್ರಕರಣ ಸುಪ್ರೀಂಗೂ ಹೋಯಿತು. ‘ಇಂತಹ ಸಂದರ್ಭಗಳಲ್ಲಿ ರಾಜಭವನ ಅಥವಾ ಬೇರೆ ಸ್ಥಳದಲ್ಲಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವುದಕ್ಕೆ ಆಗುವುದಿಲ್ಲ. ಸದನದಲ್ಲೇ ಬಲಾಬಲ ಪರೀಕ್ಷೆ ಆಗಬೇಕು’ ಎಂಬ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್​ನಿಂದ ಬಂತು. ಅದು ಅಂತಿಮವಾಗಿ ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ರೂಪುಗೊಳ್ಳುವುದಕ್ಕೆ ಕಾರಣವಾಯಿತು.

    ಇಂಗ್ಲಿಷ್​ಗೆ ಕಡಿವಾಣ: ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಸುವಂತೆ 1972ರಲ್ಲೇ ಆದೇಶ ಹೊರಡಿಸಿದ್ದರೂ ಹಲವಾರು ಕಚೇರಿಗಳಲ್ಲಿ ಇಂಗ್ಲಿಷ್​ನಲ್ಲೇ ವ್ಯವಹರಿಸುತ್ತಿದ್ದುದನ್ನು ಗಮನಿಸಿದ ಸರ್ಕಾರ 1976 ನ. 22ರಂದು ಮತ್ತೊಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿ ಇಂಗ್ಲಿಷ್ ಬಳಕೆ ನಿಲ್ಲಿಸುವಂತೆ ತಾಕೀತು ಮಾಡಿತು. ಅದಕ್ಕೆ ಪೂರಕವಾಗಿ ಕನ್ನಡ ಬೆರಳಚ್ಚು ಯಂತ್ರಗಳನ್ನು ಪೂರೈಸಿ ಬಳಕೆ ಬಗ್ಗೆ ತರಬೇತಿ ಕೊಡಿಸಿತು. ಕನ್ನಡದಲ್ಲೇ ಟಿಪ್ಪಣಿ, ಕರಡು ಬರೆಯುವ ನೌಕರರಿಗೆ ಬಹುಮಾನ, ಪ್ರೋತ್ಸಾಹಧನ ನೀಡಿತು.

    ಕೊನೆಗೂ ಅಲ್ಲಿ ರಾಜ್ಯೋತ್ಸವ ಆಚರಿಸಲು ಅವಕಾಶ ಸಿಕ್ತು: ಉಚ್ಚ ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ

    ನಟ ದರ್ಶನ್ ವಿರುದ್ಧ ದೂರು ಕೊಟ್ಟ ಮಹಿಳೆ​: ಹರಿದುಹೋದ ಬಟ್ಟೆ, ಹೊಟ್ಟೆಗೆ ಗಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts