More

    ಡಿಸಿಎಂ ವಜಾಗೊಳಿಸಲು ಜೆಡಿಎಸ್ ಪ್ರತಿಭಟನೆ

    ಚಿತ್ರದುರ್ಗ: ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಹರಿಬಿಟ್ಟು ಅನೇಕ ಸ್ತ್ರೀಯರ ಮಾನ ಹರಾಜು ಹಾಕಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ ಹಾಗೂ ಡಿಕೆಶಿ ವಿರುದ್ಧ ಧಿಕ್ಕಾರ ಕೂಗಿದರು. ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು. ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ರೂವಾರಿ ಡಿಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡಿ, ವಿಡಿಯೋ ಹಂಚಿಕೆಯಲ್ಲಿ ಡಿಸಿಎಂ ಹೆಸರು ಕೇಳಿಬರುತ್ತಿದ್ದು, ನೀಚ ಕೆಲಸಕ್ಕೆ ಇಳಿದಿರುವುದು ರಾಜ್ಯದ ದುರ್ದೈವ. ನಾಡು ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದು, ಜನರ ಶ್ರೇಯೋಭಿವೃದ್ಧಿ ಕುರಿತು ಚಿಂತಿಸದೆ, ಸ್ವಾರ್ಥ ರಾಜಕೀಯಕ್ಕೆ ಇಳಿದಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಅಧ್ಯಕ್ಷ ಯಶೋಧರ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸನ್ನು ಕುಂದಿಸಿ, ಪಕ್ಷಕ್ಕೆ ಕಳಂಕ ತರುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಮೈತ್ರಿ ಪಕ್ಷವಾಗಿರುವ ಬಿಜೆಪಿಯನ್ನೂ ಮುಜುಗರಕ್ಕೀಡು ಮಾಡಿ ಚುನಾವಣೆಯಲ್ಲಿ ಹಿನ್ನಡೆಯನ್ನುಂಟು ಮಾಡುವ ದುರುದ್ದೇಶ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.

    ಪ್ರಕರಣದಲ್ಲಿ ಸಂತ್ರಸ್ತ ಸ್ತ್ರೀಯರೆನ್ನಲ್ಲಾದವರ ವಿಡಿಯೋ, ಭಾವಚಿತ್ರ ಯಥಾವತ್ತು ಹರಿಬಿಟ್ಟು ಅವರೆಲ್ಲರ ಮರ್ಯಾದೆಗೆ ಕುಂದುಂಟು ಮಾಡಿದ್ದಾರೆ. ಆ ಕುಟುಂಬಗಳ ಪರಿಸ್ಥಿತಿ ಈಗ ಅತ್ಯಂತ ಶೋಚನೀಯವಾಗಿದೆ. ಇದರಿಂದಾಗಿ ಪ್ರಾಣಹಾನಿ ಮಾಡಿಕೊಂಡರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

    ಪಕ್ಷದ ಮುಖಂಡ ಬಿ.ಕಾಂತರಾಜ್ ಮಾತನಾಡಿ, ಸಂಪೂರ್ಣ ತನಿಖೆಯಾಗಿ ತಪ್ಪು ಯಾರಿಂದಲೇ ಆಗಿದ್ದರೂ ಈ ನೆಲದ ಕಾನೂನಿಗೆ ತಲೆಬಾಗಲೇಬೇಕು. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಲು ಗೌಪ್ಯತೆ ಕಾಪಾಡಬೇಕಿತ್ತು. ಆದರೆ, ವಿಡಿಯೋ ಹರಿಬಿಟ್ಟಿರುವುದು ಕೂಡ ಶಿಕ್ಷಾರ್ಹ ಅಪರಾಧ. ಎಸ್‌ಐಟಿ ಮೂಲಕ ಕಾಂಗ್ರೆಸ್ ಅಧಿಕಾರ ದುರುಪಯೋಗಕ್ಕೆ ಮುಂದಾಗಿದೆ. ಆದ್ದರಿಂದ ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

    ಸ್ತ್ರೀಯರ ಮಾನ ರಕ್ಷಣೆ ಕುರಿತು ಕಿಂಚಿತ್ತು ಗೌರವ ಕೊಡದೇ ಹೀನ ಕೃತ್ಯಕ್ಕೆ ಕಾರಣರು ಎನ್ನಲಾದ ಡಿ.ಕೆ.ಶಿವಕುಮಾರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಅನಿವಾರ್ಯ. ಆದ್ದರಿಂದ ಎಷ್ಟೇ ಪ್ರಭಾವಿಯಾಗಿದ್ದರೂ ಸಂಪುಟದಿಂದ ವಜಾಗೊಳಿಸಬೇಕು ಎಂದು ಕೋರಿದರು.

    ಪದಾಧಿಕಾರಿಗಳಾದ ಗೋಪಾಲಸ್ವಾಮಿ ನಾಯಕ, ಮಂಜುನಾಥ್, ಜಿ.ಬಿ.ಶೇಖರ್, ಮಠದ್ದಟ್ಟಿ ವೀರಣ್ಣ, ಸಣ್ಣ ತಿಮ್ಮಪ್ಪ, ವೀರಭದ್ರಪ್ಪ, ಗಣೇಶ್‌ಮೂರ್ತಿ, ಹನುಮಂತರಾಯಪ್ಪ, ಪರಮೇಶ್ವರಪ್ಪ, ಪ್ರತಾಪ್ ಜೋಗಿ, ಅಪ್ಪು, ದೀಪು, ತಿಪ್ಪೇಸ್ವಾಮಿ, ಆನಂದಪ್ಪ, ಶಿವಣ್ಣ, ಕಲಮರಹಳ್ಳಿ ಶಿವಣ್ಣ, ಶಿವಪ್ರಸಾದ್ ಗೌಡ, ಚನ್ನಗಿರಿ ರಾಮಯ್ಯ, ಎಚ್.ನಾಗರಾಜ್, ರಾಜಣ್ಣ, ಚಿದಾನಂದಪ್ಪ, ಮಹಾಲಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts