ಬೆಂಗಳೂರು: ಬ್ಯಾಂಕ್‌ಗೆ ಹಣ ಜಮೆ ಮಾಡಲು ಬಂದಿದ್ದ ಖಾಸಗಿ ಕಂಪನಿ ನೌಕರನಿಗೆ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ 50 ಸಾವಿರ ರೂ. ಪಡೆದು ವಂಚಕನೊಬ್ಬ ಮೋಸ ಮಾಡಿದ್ದಾನೆ.
ಸುಧಾಮನಗರ ಲಾಲ್‌ಬಾಗ್ ರಸ್ತೆಯ ಬಿ. ಚಂದ್ರೇಗೌಡ ಮೋಸಕ್ಕೆ ಒಳಗಾದವರು. ಚಂದ್ರೇಗೌಡ 5ರಂದು ಕಂಪನಿ ಖಾತೆಗೆ 50 ಸಾವಿರ ರೂ. ಜಮೆ ಮಾಡಲು ಶಾಂತಿನಗರದ ಖಾಸಗಿ ಬ್ಯಾಂಕ್ ಶಾಖೆಗೆ ಹೋಗಿದ್ದರು. ಅಷ್ಟೊತ್ತಿಗೆ ಎಟಿಎಂ ಬೂತ್‌ನಿಂದ ಹೊರಬಂದ ಅಪರಿಚಿತ ವ್ಯಕ್ತಿ, ಚಂದ್ರೇಗೌಡನನ್ನು ತಡೆದು ತುರ್ತಾಗಿ 50 ಸಾವಿರ ರೂ. ನಗದು ಬೇಕು. ಎಟಿಎಂನಲ್ಲಿ ಹಣ ಡ್ರಾ ಆಗುತ್ತಿಲ್ಲ. ನಿಮ್ಮ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುತ್ತೇನೆ. ನಗದು ಕೊಡುವಂತೆ ಕೋರಿದ್ದ. ಬೇಕಾದರೆ ನಿಮಗೆ ನಾನು ಕೆಲಸ ಮಾಡುವ ಸ್ಥಳ ತೋರಿಸುತ್ತೇನೆ ಎಂದು ಹೇಳಿ ಸುಧಾಮನಗರದ ಬಾರ್ ತೋರಿಸಿದ್ದ.
ನಿಜ ಇರಬೇಕೆಂದು ಚಂದ್ರೇಗೌಡ ಒಪ್ಪಿಕೊಂಡಾಗ ಮೊಬೈಲ್‌ನಲ್ಲಿ ಹಣ ವರ್ಗಾವಣೆ ಮಾಡುವ ನಾಟಕ ಮಾಡಿದ ವಂಚಕ, 50 ಸಾವಿರ ರೂ. ನಗದು ಪಡೆದು 2 ತಾಸು ಕಳೆದ ಮೇಲೆ ಬ್ಯಾಲೆನ್ಸ್ ತೋರಿಸಲಿದೆ ಎಂದು ಹೇಳಿ ತೆರಳಿದ್ದ. ತಾಸುಗಳೇ ಕಳೆದರೂ ಚಂದ್ರೇಗೌಡನ ಖಾತೆಗೆ ಮಾತ್ರ ಹಣ ಬಂದಿರಲಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.