More

    5.19 ಕೋಟಿ ರೂ. ಅನುದಾನ ವಾಪಸ್

    ಬೆಳಗಾವಿ: ಖಜಾನೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 2019-20ನೇ ಸಾಲಿನ ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿಯಲ್ಲಿನ 5.18 ಕೋಟಿ ರೂ. ಅನುದಾನ ಲ್ಯಾಪ್ಸ್ ಆಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ, ಖಜಾನೆ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 34 ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಜಿಪಂಗೆ ಬಂದಿದ್ದ ಅನುದಾನ ವಾಪಸ್ ಹೋಗಿದೆ. ಇದರಿಂದ ಜಿಪಂಗೆ ಕೋಟ್ಯಂತರ ರೂ. ನಷ್ಟ ಉಂಟಾಗಿ, ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಸದಸ್ಯರ ಅಸಮಾಧಾನ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ, ದುರಸ್ತಿ ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿ ನಡೆದಿವೆ. ಆದರೂ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾಗಿ ದಾಖಲೆ ಸಲ್ಲಿಕೆ ಮಾಡದಿರುವುದರಿಂದ 5.19 ಕೋಟಿ ರೂ.ನಷ್ಟು ದೊಡ್ಡ ಮೊತ್ತದ ಅಭಿವೃದ್ಧಿ ಅನುದಾನ ಲ್ಯಾಪ್ಸ್ ಆಗಿದೆ. ಇದರಿಂದ ಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ 5 ತಿಂಗಳ ಅವಧಿಯಲ್ಲಿ ಸದಸ್ಯರ ಅಧಿಕಾರ ಅವಧಿ ಮುಗಿಯುತ್ತದೆ. ಬಳಿಕ ಕ್ಷೇತ್ರದಲ್ಲಿ ಜನರಿಗೆ ಮತ್ತೆ ಮುಖ ತೋರಿಸಲು ಸಾಧ್ಯವಾಗುವುದಿಲ್ಲ ಎಂದು ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

    ಲ್ಯಾಪ್ಸ್ ಆಗಿದ್ದು ನಿಜ: ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ, ಜಿಪಂ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ಮತ್ತು ನಿಗದಿತ ಸಮಯದಲ್ಲಿ ದಾಖಲೆ ನೀಡದಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ಜಿಪಂನಿಂದ ಮೇಲಿಂದ ಮೇಲೆ ನೋಟಿಸ್ ನೀಡಿದ್ದರೂ ಮಾಹಿತಿ ನೀಡಿಲ್ಲ. ಹೀಗಾಗಿ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ 5.19 ಕೋಟಿ ರೂ. ಅನುದಾನ ಲ್ಯಾಪ್ಸ್ ಆಗಿರುವುದು ನಿಜ. ಈ ವಿಷಯದಲ್ಲಿ ಜಿಲ್ಲಾ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ವಹಿಸಿದೆ ಎಂದರು.

    ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸದಸ್ಯರು ಇದ್ದರು.

    ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಮಿಟಿ ರಚನೆ

    ಅನುದಾನ ವಾಪಸ್ ಹೋಗಿರುವುದು ನಿಜಕ್ಕೂ ಗಂಭೀರವಾದ ವಿಚಾರ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ. ದರ್ಶನ ಅವರು ಪ್ರತಿಕ್ರಿಯಿಸಿದರು. 2019-20ನೇ ಸಾಲಿನ ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಯೋಜನೆಯ 5.19 ಕೋಟಿ ರೂ. ಅನುದಾನ ಲ್ಯಾಪ್ಸ್ ಆಗಲು ಕಾರಣಗಳೇನು ಎಂಬುದನ್ನು ಪರಿಶೀಲಿಸಲು ಹಾಗೂ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತಿ ಕ್ರಮ ಕೈಗೊಳ್ಳಲು ಕಮಿಟಿ ರಚನೆ ಮಾಡಲಾಗುತ್ತಿದೆ. ಅಲ್ಲದೆ, ವಿವಿಧ ಇಲಾಖೆಗಳಲ್ಲಿ ಹಣ ಅಪವ್ಯಯವಾಗಿರುವುದನ್ನು ವಾಪಸ್ ತರಲು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

    28ಕ್ಕೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಚುನಾವಣೆ

    ಜಿಲ್ಲಾ ಪಂಚಾಯತಿ ಮೂರನೇ (ಕೊನೆಯ) ಅವಧಿಗಾಗಿ ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯವವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಒಪ್ಪಿಗೆ ನೀಡುತ್ತಿಲ್ಲ. ಕರೊನಾ ಸಂಕಷ್ಟದ ಕಾಲದಲ್ಲಿಯೂ ವಿಜಯಪುರದಲ್ಲಿ ಚುನಾವಣೆ ನಡೆದಿದೆ. ಆದರೆ, ನಮ್ಮಲ್ಲಿ ಕರೊನಾ ಹೆಸರಲ್ಲಿ ಚುನಾವಣೆ ಕೈಬಿಟ್ಟಿರುವುದು ಸರಿಯಲ್ಲ. ತಕ್ಷಣ ಚುನಾವಣೆ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ, ಸದಸ್ಯೆ ವಾಸಂತಿ ತೇರದಾಳ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಎಲ್ಲ ಸದಸ್ಯರ ಒತ್ತಾಯದ ಮೇರೆಗೆ ಸೆ. 28ರಂದು ಚುನಾವಣೆ ನಡೆಸಲಾಗುವುದು ಎಂದು ಘೋಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts