More

    5 ಸಾವಿರ ಕುಟುಂಬಕ್ಕೆ ಕುಡಿಯುವ ನೀರು ಪೂರೈಕೆ

    ಬ್ಯಾಡಗಿ: ಪಟ್ಟಣದ 5 ಸಾವಿರ ಕುಟುಂಬಗಳಿಗೆ ನೀರು ಪೂರೈಕೆ ಸುಸೂತ್ರವಾಗಿ ನಡೆಯಲಿದೆ. ಸಾರ್ವಜನಿಕರು ತಮಗೆ ಅಗತ್ಯವಾದಷ್ಟು ಕುಡಿಯುವ ನೀರು ಪಡೆದು ಹಣ ಪಾವತಿಸಬೇಕು. ಇದಕ್ಕೆ ಆನ್​ಲೈನ್​ಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ಪಟ್ಟಣದ ಅಗಸನಹಳ್ಳಿ ಬಡಾವಣೆಯಲ್ಲಿ 24*7 ನೀರು ಪೂರೈಸುವ ಯೋಜನೆಯ ಪ್ರಾತ್ಯಕ್ಷಿಕೆ ಹಂತಕ್ಕೆ ಚಾಲನೆ ನೀಡಿ, ಜಲಾಗಾರಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಮಾಜಿ ಶಾಸಕ ಸುರೇಶಗೌಡ್ರ ಪಾಟೀಲರ ಶ್ರಮದಿಂದ ಪಟ್ಟಣಕ್ಕೆ ಒಳಚರಂಡಿ ಹಾಗೂ 24*7 ನೀರು ಪೂರೈಕೆ ಯೋಜನೆ ಆರಂಭವಾಗಿದೆ. 105 ಕೋಟಿ ರೂ. ವೆಚ್ಚದ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ. ಇದರಿಂದ ಪಟ್ಟಣದಲ್ಲಿ ಚರಂಡಿಗಳ ದುರ್ವಾಸನೆ, ರೋಗರುಜಿನಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.

    ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲು ಲೋಕೋಪಯೋಗಿ ಇಲಾಖೆ, ಜಿಲ್ಲಾ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಪ್ರಕ್ರಿಯೆಗಳು ನಡೆದಿವೆ. ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ. ಯುಜಿಡಿ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ ಎಲ್ಲ ರಸ್ತೆಗಳನ್ನು ವಿಶೇಷ ಯೋಜನೆಯಲ್ಲಿ ಡಾಂಬರೀಕರಣಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಪುರಸಭೆ ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ಚಂದ್ರಪ್ಪ ಶೆಟ್ಟರ, ಸರೋಜ ಉಳ್ಳಾಗಡ್ಡಿ, ಕವಿತಾ ಸೊಪ್ಪಿನಮಠ, ಗಾಯತ್ರಿ ರಾಯ್ಕರ, ಪಕ್ಕೀರಮ್ಮ ಚಲವಾದಿ, ರಾಮಣ್ಣ ಕೋಡಿಹಳ್ಳಿ, ಸುಭಾಸ ಮಾಳಗಿ, ವಿನಯಕುಮಾರ ಹಿರೇಮಠ, ಮಂಜಣ್ಣ ರ್ಬಾ, ಈರಣ್ಣ ಬಣಕಾರ, ರವೀಂದ್ರ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಇತರರು ಉಪಸ್ಥಿತರಿದ್ದರು.

    ನಾನು ಶಾಸಕನಾಗಿದ್ದ ವೇಳೆ ಪಟ್ಟಣದ ಯುಜಿಡಿ ಕಾಮಗಾರಿ ಹಾಗೂ ಮುಂದಿನ 50 ವರ್ಷಗಳ ಜನಸಂಖ್ಯೆ ಆಧಾರದ ಮೇಲೆ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂ.ಕಾಮಗಾರಿ ನಡೆದಿವೆ.
    | ಸುರೇಶಗೌಡ್ರ ಪಾಟೀಲ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts