More

    ದೇಶ ವಿದೇಶಗಳಿಂದ ಬರುವವರಿಗೆ ದ.ಕ, ಉಡುಪಿಯಲ್ಲಿ ಕ್ವಾರಂಟೈನ್ ಸಿದ್ಧತೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ರಾಜ್ಯ ಮತ್ತು ವಿದೇಶದಿಂದ 15-20 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಹೊರ ರಾಜ್ಯದಿಂದ ಬರುವವರು ಸುಮಾರು 5 ಸಾವಿರ ಮಂದಿ ಇದುವರೆಗೆ ನೋಂದಣಿ ಮಾಡಿದ್ದಾರೆ. ಜಿಲ್ಲೆಗೆ ಹೊರ ರಾಜ್ಯಕ್ಕಿಂತಲೂ ಗಲ್ಫ್ ರಾಷ್ಟ್ರಗಳಿಂದ ಬರುವವರ ಸಂಖ್ಯೆ ಹೆಚ್ಚಿರಲಿದೆ. ಬಂದವರಿಗೆ ಕ್ವಾರಂಟೈನ್‌ಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

    ಉಡುಪಿ ಜಿಲ್ಲೆಗೆ ಹೊರ ರಾಜ್ಯ ಮತ್ತು ವಿದೇಶ ಸೇರಿದಂತೆ ಒಟ್ಟು 20 ಸಾವಿರ ಜನರು ಬರುವ ನಿರೀಕ್ಷೆ ಇದೆ. ವಿದೇಶದಿಂದ ಬರುವವರನ್ನು ಪ್ರತ್ಯೇಕ ಸಿಂಗಲ್ ರೂಂಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಶುಕ್ರವಾರ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲಾ ಮುಖ್ಯಶಿಕ್ಷಕರ, ವಸತಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಸಿದ ಅವರು, ಜಿಲ್ಲೆಗೆ ಹೊರರಾಜ್ಯದಿಂದ ಬರಲು ಪ್ರಥಮ ಹಂತದಲ್ಲಿ 6000 ಮಂದಿ ನೋಂದಾಯಿಸಿದ್ದು, ರಾಜ್ಯ ಸರ್ಕಾರ ಅನುಮತಿ ನೀಡಿದ ಕೂಡಲೇ ಜಿಲ್ಲೆಗೆ ಪ್ರವೇಶ ಆರಂಭವಾಗಲಿದೆ. ಆರೋಗ್ಯ ತಪಾಸಣೆ ಬಳಿಕ ಪೊಲೀಸ್ ಎಸ್ಕಾರ್ಟ್‌ನೊಂದಿಗೆ ಸಂಬಂಧಪಟ್ಟ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುವುದು. ರೋಗ ಲಕ್ಷಣ ಇದ್ದಲ್ಲಿ ಆಸ್ಪತ್ರೆಗೆ ದಾಖಲಿಸಲಾಗುವುದು. ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಬಯಸುವವರು ಹೋಟೆಲ್ ವೆಚ್ಚ ಭರಿಸಬೇಕು. ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉಚಿತವಾಗಿ ಉತ್ತಮ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

    ಜಿಲ್ಲಾ ಕೋವಿಡ್-19 ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಡಿಡಿಪಿಐ ಶೇಷಶಯನ ಕಾರಿಂಜ ಸಭೆಯಲ್ಲಿದ್ದರು.

    ವಿರೋಧಿಸಿದರೆ ಜೈಲು: ಕ್ವಾರಂಟೈನ್ ಕೇಂದ್ರಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ, ಅಡ್ಡಿಪಡಿಸುವವರನ್ನು ಸೆಕ್ಷನ್ 188, 269, 270 ಪ್ರಕಾರ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ. ನೀರಿನ ಸಮಸ್ಯೆ ಇದ್ದರೆ ಗ್ರಾಪಂಗಳಿಂದ ಟ್ಯಾಂಕರ್ ಮೂಲಕ ಪೂರೈಸಲಾಗುವುದು. ಕೇಂದ್ರದ ನಿರ್ವಹಣೆಗೆ ಅಗತ್ಯವಿದ್ದಲ್ಲಿ ಅದೇ ಸಂಸ್ಥೆಯ ನೌಕರರನ್ನು ನಿಯೋಜಿಸಲಾಗುವುದು. ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

    ಸರ್ಕಾರಿ, ಖಾಸಗಿ ಶಾಲೆಗಳ ಬಳಕೆ: ಉಡುಪಿ ಜಿಲ್ಲೆಗೆ ವಿದೇಶ, ಹೊರ ರಾಜ್ಯಗಳಿಂದ ಬರುವವರ ಕ್ವಾರಂಟೈನ್‌ಗೆ ಸಿದ್ಧತೆ ನಡೆದಿದೆ. ಖಾಸಗಿ ಶಾಲೆ ಮತ್ತು ಕಾಲೇಜುಗಳು ತಮ್ಮ ಕಟ್ಟಡಗಳು ಮತ್ತು ಹಾಸ್ಟೆಲ್‌ಗಳನ್ನು ಜಿಲ್ಲಾಡಳಿತ ಕೋರಿದ ಕೂಡಲೇ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ. ವಿದೇಶದಿಂದ ಮತ್ತು ಹೊರರಾಜ್ಯದಿಂದ ಆಗಮಿಸುವ ಜಿಲ್ಲೆಯ ಜನರಿಂದ, ಪ್ರಸ್ತುತ ಜಿಲ್ಲೆಯಲ್ಲಿನ ನಾಗರಿಕರನ್ನು ಕೋವಿಡ್‌ನಿಂದ ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸ. ಅವರನ್ನು ಕ್ವಾರಂಟೈನ್ ಮಾಡಲು ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು, ಹಾಸ್ಟೆಲ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಕ್ವಾರಂಟೈನ್ ಮುಗಿದ ಬಳಿಕ ಕಟ್ಟಡಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಬಿಟ್ಟು ಕೊಡಲಾಗುವುದು ಎಂದರು.

    ಮುಂಬೈ ಕನ್ನಡಿಗರ ಪ್ರವೇಶ ಆರಂಭ
    ಬೆಳ್ಮಣ್: ಮುಂಬೈ ಕನ್ನಡಿಗರ ಕರಾವಳಿ ಪ್ರವೇಶ ಆರಂಭಗೊಂಡಿದ್ದು, ಮುಂಡ್ಕೂರಿನ ಸಂಕಲಕರಿಯದಲ್ಲಿ ಉಡುಪಿ ಜಿಲ್ಲೆಯ ಗಡಿಭಾಗದ ಕೊನೆಯ ಚೆಕ್‌ಪೋಸ್ಟ್‌ಗೆ ಗುರುವಾರ ರಾತ್ರಿ ಮುಂಬೈ ಕನ್ನಡಿಗರ ಮೊದಲ ಪ್ರವೇಶವಾಗಿದೆ.
    ಥಾಣೆ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಏಳಿಂಜೆಗೆ ಕ್ರಮಬದ್ಧ ದಾಖಲೆಗಳೊಂದಿಗೆ ಪ್ರಯಾಣ ಬೆಳೆಸಿದ್ದ ದಂಪತಿ ಪೈಕಿ ಮಹಿಳೆ ತುಂಬು ಗರ್ಭಿಣಿಯಾಗಿದ್ದರು.

    ಮುಂಬೈನಿಂದ ಸಂಕಲಕರಿಯದವರೆಗೆ 20 ಚೆಕ್‌ಪೋಸ್ಟ್‌ಗಳನ್ನು 16 ಗಂಟೆಗಳಲ್ಲಿ ದಾಟಿ ಬಂದಿದ್ದ ದಂಪತಿಗೆ ಸಂಕಲಕರಿಯದಿಂದ ಮನೆ ತಲುಪಲು ಇನ್ನೇನು 1 ಕಿ.ಮೀ. ದೂರ ಇರುವಾಗ ಉಡುಪಿ ಜಿಲ್ಲೆಯ ಕೊನೆಯ ಚೆಕ್‌ಪೋಸ್ಟ್‌ನಲ್ಲಿ ಭಾರಿ ತಪಾಸಣೆ ಎದುರಾಯಿತು. ಚೆಕ್‌ಪೋಸ್ಟ್ ಸಿಬ್ಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಕರೆಸಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಕಾರ್ಕಳ ಪೊಲೀಸ್ ಠಾಣೆಯ ಡಿವೈಎಸ್‌ಪಿ ಆದೇಶದ ಬಳಿಕ ದಂಪತಿಗೆ ತೆರಳಲು ಅನುಮತಿ ನೀಡಿದರು. ಕಾರ್ಕಳ ಡಿವೈಎಸ್‌ಪಿ ಮೂಲ್ಕಿ ಠಾಣೆ ಮತ್ತು ಐಕಳ ಗ್ರಾಪಂ ಅಧ್ಯಕ್ಷರಿಗೂ ಮಾಹಿತಿ ನೀಡಿದರು.

    ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾರ್ಗಸೂಚಿಯ ಗೊಂದಲಗಳಿದ್ದುದರಿಂದ ಈ ದಂಪತಿ ಒಂದೂವರೆ ಗಂಟೆ ಪರದಾಡಬೇಕಾಯಿತು. ದಂಪತಿಗೆ ಯಾವ ಕ್ವಾರಂಟೈನ್ ಎನ್ನುವುದು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts