More

    ಲೆಕ್ಚರ್ ಹುದ್ದೆಗೆ 40 ಲಕ್ಷ ರೂಪಾಯಿ ಡೀಲ್!? ಮಾ.12ರಿಂದ 16ವರೆಗೆ ನೇಮಕಕ್ಕೆ ಪರೀಕ್ಷೆ

    |ದೇವರಾಜ್ ಕನಕಪುರ ಬೆಂಗಳೂರು

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹಾಗೂ ಪೊಲೀಸ್ ನೇಮಕಾತಿಯಲ್ಲಿ ಕೇಳಿಬರುತ್ತಿದ್ದ ಅವ್ಯವಹಾರದ ಆರೋಪವೀಗ ಶಿಕ್ಷಣ ಇಲಾಖೆ ನೇಮಕಾತಿಗೂ ವ್ಯಾಪಿಸಿದೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಡೀಲ್ ಶುರುವಾಗಿದೆ! ತಲಾ ಹುದ್ದೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಡೀಲ್ ಒಪ್ಪಿಕೊಂಡು ಮುಂಗಡ ಹಣ ಕೊಟ್ಟವರಿಗೆ ಹುದ್ದೆ ಫಿಕ್ಸ್ ಭರವಸೆ ನೀಡಲಾಗುತ್ತಿದೆ. ಮಾ.12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. 33 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

    ಪರೀಕ್ಷೆ ದಿನಾಂಕ ಘೋಷಣೆಯಾಗುವ ಮೊದಲಿನಿಂದಲೂ ಡೀಲ್ ನಡೆಯುತ್ತಲೇ ಇದ್ದು, ಹತ್ತಿರ ಬಂದ ತಕ್ಷಣ ವ್ಯವಹಾರ ಜೋರಾಗಿದೆ. ಡೀಲ್ ಬಗ್ಗೆ ಬಹುತೇಕ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ 40 ರಿಂದ 50 ಲಕ್ಷ ರೂ.ಗೆ ನಿಗದಿಯಾಗಿದೆ ಎಂದು ಬರೆದುಕೊಳ್ಳುತ್ತಿರುವುದು ಅವ್ಯವಹಾರಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೇಲೂ ನಂಬಿಕೆ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

    ಪೇಮೆಂಟ್ ಪಾವತಿ ಹೇಗೆ?

    ಮೊದಲಿಗೆ ಶೇ.30 ಹಣವನ್ನು ಮುಂಗಡವಾಗಿ ಪಡೆದು, ನಂತರ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಬಂದ ಮೇಲೆ ಉಳಿದ ಹಣವನ್ನು ಪಡೆಯುತ್ತಾರೆ. ಇಲ್ಲಿ ಎಲ್ಲಿಯೂ ಕ್ಯಾಶ್ ಹೊರತಾಗಿ ಬೇರೆ ಯಾವುದೇ ರೀತಿಯ ವ್ಯವಹಾರ ನಡೆಯುವುದಿಲ್ಲ.

    ಡೀಲ್​ಗೆ ಒಪ್ಪಿದರೆ ಕೆಲಸ ಪಕ್ಕಾ: ವೇತನ ಹೆಚ್ಚಿರುವುದರಿಂದ ಡೀಲ್ ಮೊತ್ತ ಕೂಡ ದೊಡ್ಡದಾಗಿ ಫಿಕ್ಸ್ ಮಾಡಲಾಗಿದೆ. ಕೆಲವು ಅಭ್ಯರ್ಥಿಗಳು ಏಜೆಂಟ್​ಗಳನ್ನು ಸಂರ್ಪಸಿ ದ್ದಾರೆ. 40 ಲಕ್ಷ ರೂ. ನಿಗದಿಪಡಿಸಿದ್ದು, ಅಷ್ಟಕ್ಕೆ ಒಪ್ಪಿದರಷ್ಟೇ ನೇಮಕಾತಿ ಪಕ್ಕಾ ಎಂಬ ಭರವಸೆ ಕೊಡುತ್ತಿದ್ದಾರೆ. ಡೀಲ್​ಗೆ ಒಪ್ಪಿ ಮುಂಗಡವಾಗಿ ಹಣ ನೀಡಿದರೆ, ಪರೀಕ್ಷೆ ಹಿಂದಿನ ದಿನವೇ ಅಭ್ಯರ್ಥಿಗಳ ಕೈಗೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಏಜೆಂಟ್​ಗಳು ಭರವಸೆ ನೀಡುತ್ತಿರುವುದಾಗಿ ಕೆಲವು ಅಭ್ಯರ್ಥಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

    ಹೇಗೆ ನಡೆಯುತ್ತದೆ ಡೀಲ್?

    ಪರೀಕ್ಷೆಯ 1 ದಿನ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಡೀಲರ್ ಪಡೆಯುತ್ತಾರೆ. ಪೇಮೆಂಟ್ ಮಾಡಿರುವ ಅಭ್ಯರ್ಥಿಗಳಿಗೆ ಕರೆ ಮಾಡಿ ಕಾರ್​ನಲ್ಲಿ ನಿರ್ದಿಷ್ಟ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮೊಬೈಲ್ ಎಲ್ಲವನ್ನು ಕಸಿದುಕೊಂಡು ಪ್ರಶ್ನೆ ಪತ್ರಿಕೆ ತೋರಿಸಿ ಉತ್ತರವನ್ನೂ ನೀಡುತ್ತಾರೆ. ಚೆನ್ನಾಗಿ ಗಮನದಲ್ಲಿಟ್ಟುಕೊಂಡು ಮಾರನೇ ದಿನ ಪರೀಕ್ಷೆ ಬರೆಯಬೇಕಾಗಿರುತ್ತದೆ ಎಂಬುದಾಗಿ ಏಜೆಂಟ್ ಬಳಿ ಚರ್ಚೆ ಮಾಡಿರುವ ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ. 

    ಹುದ್ದೆಗಳಿಗೆ ಡೀಲ್ ಮೊತ್ತ ಫಿಕ್ಸ್ ಆಗುವುದೇ ಆಯಾ ಹುದ್ದೆಗಳಿಗೆ ನಿಗದಿಯಾಗಿರುವ ವೇತನದ ಅನ್ವಯ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮೂಲ ವೇತನ 51,700 ರೂ. ಇದ್ದು, ಇತರೆ ಭತ್ಯೆ ಸೇರಿ ಬೆಂಗಳೂರಿನವರಿಗೆ 88 ಸಾವಿರ ರೂ. ಹಾಗೂ ಹೊರ ಜಿಲ್ಲೆಯವರಿಗೆ 78 ಸಾವಿರ ರೂ.ವರೆಗೆ ವೇತನ ದೊರೆಯುತ್ತದೆ.

    ಅಧಿಕಾರಿಗಳ ಕೈವಾಡ: ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿರುವ ಏಜೆಂಟ್​ಗಳು, ಡೀಲ್ ಕುದುರಿಸುವ ಜವಾಬ್ದಾರಿ ಹೊತ್ತಿರುತ್ತಾರೆ. ಅಭ್ಯರ್ಥಿಗಳ ಜತೆ ಮಾತುಕತೆ ನಡೆಸುವಾಗ ಫೋನ್​ನಲ್ಲಿ ಮಾತನಾಡುವುದಿಲ್ಲ. ನೇರವಾಗಿ ವ್ಯಕ್ತಿಯನ್ನು ಭೇಟಿ ಮಾಡಿ ಡೀಲ್ ಪ್ರಸ್ತಾಪ ನಡೆಯುತ್ತದೆ. ಇಷ್ಟವಿದ್ದರೆ, ಒಪ್ಪಿಕೊಳ್ಳಬಹುದು ಇಲ್ಲವೇ ಬಿಡಬಹುದು. ಹೊರಗೆ ಪ್ರಸ್ತಾಪಿಸುವಂತಿಲ್ಲ. ಈ ವೇಳೆ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಲೆಕ್ಟ್ರಾನಿಕ್ ಡಿವೈಸ್, ಮೊಬೈಲ್​ಗಳನ್ನು ಪಡೆದು ಆನಂತರವೇ ಡೀಲರ್​ಗಳು ಮಾತುಕತೆ ಮಾಡುತ್ತಾರೆಂದು ಅಭ್ಯರ್ಥಿಗಳು ವಿವರಿಸುತ್ತಾರೆ.

    ಕ್ಯಾರೆ ಎನ್ನದ ಕೆಇಎ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರೂಪಿಸಿರುವ ಸಹಾಯವಾಣಿಗೆ ಕರೆ ಮಾಡಿ ಡೀಲ್ ಬಗ್ಗೆ ದೂರು ಕೊಟ್ಟರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಡೀಲ್ ವಿಚಾರವಾಗಿ ಸಾಕಷ್ಟು ಕಡೆ ಚರ್ಚೆಯಾಗುತ್ತಿರುವುದರಿಂದ ಪ್ರಾಧಿಕಾರವು ಈ ಹುದ್ದೆಗಳ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸುವುದಕ್ಕಾಗಿ ಹಾಗೂ ಡೀಲ್​ಗಳ ಕುರಿತು ದೂರುಗಳು ಸಲ್ಲಿಸಲು ಸಹಾಯವಾಣಿ ರೂಪಿಸಿದೆ.

    ಈ ಸಹಾಯವಾಣಿಗೆ ಅಭ್ಯರ್ಥಿಗಳು ಕರೆ ಮಾಡಿ ಡೀಲ್​ಗಳ ಮಾಹಿತಿಯನ್ನು ನೀಡಬಹುದಾಗಿದೆ. ಸಾಕಷ್ಟು ಅಭ್ಯರ್ಥಿಗಳು ಭಯದಿಂದ ಕರೆ ಮಾಡಿ ಪರೀಕ್ಷೆ ಕುರಿತು ಮಾಹಿತಿ ಕೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಪರಿಶೀಲಿಸುವುದಕ್ಕಾಗಿ ‘ವಿಜಯವಾಣಿ’ಯೂ ಕರೆ ಮಾಡಿ ಮಾತನಾಡಿತು. ಸಾಕ್ಷಿ ಇದ್ದರೆ, ನೀಡಿ ಇಲ್ಲ, ಸುಮ್ಮನೆ ಪರೀಕ್ಷೆ ಬರೀರಿ ಎಂದರು. ನಮ್ಮ ಬಳಿ ಆಡಿಯೋ ರೆಕಾರ್ಡ್ ಇದೆ ಎಂದರೆ, ನೋಡಿ ಸುಮ್ಮನೆ ಏನೋ ಮಾತನಾಡಬೇಡಿ. ದೊಡ್ಡ ಅಧಿಕಾರಿಗಳೆಲ್ಲ ಇದ್ದಾರೆ. ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ. ಪರೀಕ್ಷೆ ಬರೀರಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

    ಬುಲ್ಡೋಜರ್ ಎದುರು ನಡೆಯದ ಆಟ; ಅಬ್ಬರಿಸಲು ಹೋಗಿ ಮಕಾಡೆ ಮಲಗಿದ ಓವೈಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts