More

    4 ವರ್ಷ ಕಠಿಣ ಶಿಕ್ಷೆ ಕೊಟ್ಟ 940 ರೂ.!

    ಬೆಳಗಾವಿ: ಇಲ್ಲಿನ ನ್ಯಾಯಾಲಯ ಸಿಬ್ಬಂದಿ ಬಳಿ ಘೋಷಿಸಿದ್ದಕ್ಕಿಂತ ಹೆಚ್ಚುವರಿಯಾಗಿ 940 ರೂ. ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, ಸಿಬ್ಬಂದಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ.

    ಬೆಳಗಾವಿ ಸಿವಿಲ್ ಜಡ್ಜ್ ಜೆಎಂಎಫ್ ನ್ಯಾಯಾಲಯದ ಆಡಳಿತ ವಿಭಾಗದಲ್ಲಿ ಶಿರಸ್ತೇದಾರಾಗಿದ್ದ ಶೈಲಾ ಶಿವಪ್ಪ ಕುಲಕರ್ಣಿ ಶಿಕ್ಷೆಗೆ ಗುರಿಯಾದವರು.

    ಅಪರಾಧಿ ಶೈಲಾ ಕುಲಕರ್ಣಿ ಅವರು 2015 ಮಾರ್ಚ್ ತಿಂಗಳಲ್ಲಿ ನ್ಯಾಯಾಲಯದ ನಗದು ಘೋಷಣಾ ರಜಿಸ್ಟರ್‌ನಲ್ಲಿ ತಮ್ಮ ಬಳಿ ಕರ್ತವ್ಯದ ಅವಧಿಯಲ್ಲಿ 2 ಸಾವಿರ ರೂ. ಇರುವುದಾಗಿ ನಮೂದಿಸಿದ್ದರು. ಆದರೆ, ಹೈಕೋರ್ಟ್‌ನ ವಿಚಕ್ಷಣಾ ದಳದ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಶೈಲಾ ಕುಲಕರ್ಣಿ ಅವರ ಬಳಿ 940 ರೂಪಾಯಿ ನಗದು ಹೆಚ್ಚು ದೊರೆತಿತ್ತು. ಈ ಬಗ್ಗೆ 2015 ಮಾರ್ಚ್ 20ರಂದು ಅಂದಿನ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಪಿ.ಕೃಷ್ಣಭಟ್ ಅವರು ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಅಂದಿನ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಹವಾಲ್ದಾರ ಹಾಗೂ ಗೋಪಾಲ ಜೋಗಿನ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ವಿಜಯ ವಿ. ಅವರು, ಅಪರಾಧಿ ಶೈಲಾ
    ಕುಲಕರ್ಣಿಗೆ ಕಲಂ 7, ಲಂಚ ಪ್ರತಿಬಂಧಕ ಕಾಯ್ದೆ 1988ರ ಪ್ರಕಾರ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ಹಾಗೂ ಕಲಂ 13(1) (ಡಿ) ಸಹ ಕಲಂ 13 (2) ಲಂಚ ಪ್ರತಿಬಂಧಕ ಕಾಯ್ದೆ 1988ರಡಿ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ ಅಗಸಗಿ ವಕಾಲತು ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts