More

    4 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಆತಂಕ

    ಸುಭಾಷ ದೂಪದಹೊಂಡ ಕಾರವಾರ

    ರಾಜೀವ ಗಾಂಧಿ ವಸತಿ ನಿಗಮದಲ್ಲಿ ಬ್ಲಾಕ್ ಆಗಿದ್ದ ಮನೆಗಳ ನಿರ್ಮಾಣ ಪ್ರಾರಂಭ ಹಾಗೂ ಜಿಪಿಎಸ್ ಮಾಡಿಸಲು ನೀಡಿದ್ದ ಮಾ. 15ರ ಗಡುವು ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದ 4 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಶಾಶ್ವತವಾಗಿ ಅನುದಾನದಿಂದ ವಂಚಿತರಾಗುವ ಆತಂಕ ಎದುರಾಗಿದೆ.

    ಇಂದಿರಾ, ಬಸವ ಮುಂತಾದ ವಸತಿ ಯೋಜನೆಗಳಡಿ ಆಯ್ಕೆಯಾದ 5,495 ಫಲಾನುಭವಿಗಳ ಹೆಸರುಗಳನ್ನು ನಿಗಮದಿಂದ ವಿವಿಧ ಕಾರಣಗಳಿಗೆ ಬ್ಲಾಕ್ ಮಾಡಲಾಗಿತ್ತು. ಅವರಿಗೆ ಅನುದಾನ ಹಂಚಿಕೆ ತಡೆ ಹಿಡಿಯಲಾಗಿತ್ತು.

    ಈಗ ವಸತಿ ನಿಗಮ 5361 ಫಲಾನುಭವಿಗಳ ಹೆಸರನ್ನು ಅನ್​ಬ್ಲಾಕ್ ಮಾಡಿ, ಮನೆಗಳನ್ನು ಪ್ರಾರಂಭಿಸಿ, ಜಿಪಿಎಸ್ ಮಾಡಿಸಿಕೊಳ್ಳಲು ಮಾ. 15ರವರೆಗೆ ಕಾಲಾವಕಾಶ ನೀಡಿತ್ತು. ಈ ಸಂಬಂಧ ಜಿಲ್ಲೆಯ 5204 ಫಲಾನುಭವಿಗಳಿಗೆ ಸಂಬಂಧಪಟ್ಟ ಗ್ರಾಪಂಗಳಿಂದ ನೋಟಿಸ್ ನೀಡಿ, ಶೀಘ್ರ ಮನೆ ಫೌಂಡೇಷನ್ ನಿರ್ಮಾಣ ಮಾಡಿ ಗ್ರಾಪಂ ಅಧಿಕಾರಿಗಳನ್ನು ಕರೆಸಿ ಜಿಪಿಎಸ್ ಆಧಾರಿತ ಫೋಟೋ ಅಪ್​ಲೋಡ್ ಮಾಡಿಸಿಕೊಳ್ಳಿ ಎಂದು ಸೂಚಿಸಲಾಗಿತ್ತು.

    ಆದರೆ, ಇದುವರೆಗೆ 586 ಜನ ಮಾತ್ರ ಮನೆಯ ನೆಲಗಟ್ಟು ನಿರ್ಮಾಣ ಮಾಡಿ ಜಿಪಿಎಸ್ ಮಾಡಿಸಿಕೊಂಡಿದ್ದಾರೆ. ಇನ್ನೂ ನಾಲ್ಕು ಸಾವಿರಕ್ಕೂ ಅಧಿಕ ಫಲಾನುಭವಿಗಳು ದಾಖಲೆ ಸಂಗ್ರಹ, ನೆಲಗಟ್ಟಿಗೆ ಸಾಮಗ್ರಿ ಸಂಗ್ರಹದ ಹಂತದಲ್ಲೇ ಇದ್ದಾರೆ.

    ವಂಚಿತರಾಗುವ ಆತಂಕ: ಮಾರ್ಚ್ 15 ರೊಳಗೆ ಎಲ್ಲ ದಾಖಲೆ ಸಿದ್ಧಪಡಿಸಿ, ಸಂಬಂಧಪಟ್ಟ ಜಾಗದಲ್ಲಿ ಮನೆಯ ನೆಲಗಟ್ಟು ನಿರ್ವಿುಸಿಕೊಳ್ಳಬೇಕು. ಗ್ರಾಪಂ ಅಧಿಕಾರಿಗಳು ಜಿಪಿಎಸ್ ಆಧಾರಿತ ಫೋಟೋವನ್ನು ಆಪ್​ನಲ್ಲಿ ಅಪ್​ಲೋಡ್ ಮಾಡಿದಲ್ಲಿ ಅಂಥವರಿಗೆ ಹಣ ಬಿಡುಗಡೆ ಮಾಡಲಾಗುವುದು. ಹಾಗೊಮ್ಮೆ ನಿಗದಿತ ಅವಧಿಯಲ್ಲಿ ಜಿಪಿಎಸ್ ಆಧಾರಿತ ಫೋಟೋ ಅಪ್​ಲೋಡ್ ಆಗದೇ ಇದ್ದಲ್ಲಿ ಅವರನ್ನು ಶಾಶ್ವತವಾಗಿ ವಸತಿ ಯೋಜನೆಯಿಂದ ಕೈಬಿಡಲಾಗುವುದು ಎಂದು ಗ್ರಾಪಂಗಳು ಫಲಾನುಭವಿಗಳಿಗೆ ನೀಡಿದ್ದ ನೋಟಿಸ್​ನಲ್ಲಿ ತಿಳಿಸಲಾಗಿದೆ. ಇದರಿಂದ ಜಿಲ್ಲೆಯ 4 ಸಾವಿರಕ್ಕೂ ಅಧಿಕ ಫಲಾನುಭವಿಗಳು ವಸತಿ ಯೋಜನೆಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. ಜಿಪಿಎಸ್ ಮಾಡಿಸುವ ಅವಧಿಯನ್ನು ಇನ್ನಷ್ಟು ದಿನ ವಿಸ್ತರಿಸಬೇಕು ಎಂದು ಯೋಜನೆಯ ಫಲಾನುಭವಿಗಳು ಮನವಿ ಮಾಡಿದ್ದಾರೆ.

    ಏನಿದು ಜಿಪಿಎಸ್?: ವಸತಿ ಯೋಜನೆಗಳ ಮೇಲ್ವಿಚಾರಣೆಗೆ ರಾಜೀವ ಗಾಂಧಿ ವಸತಿ ನಿಗಮವು ಇಂದಿರಾ ವಿಜಿಲ್ ಎಂಬ ಆಪ್ ಸಿದ್ಧಪಡಿಸಿದೆ. ಪಿಡಿಒ ಹಾಗೂ ಕಾರ್ಯದರ್ಶಿ ಅಥವಾ ತಾಪಂನ ಒಬ್ಬ ಅಧಿಕಾರಿಯು ಸಂಬಂಧಪಟ್ಟ ಫಲಾನುಭವಿಯ ನಿರ್ಮಾಣ ಹಂತದ ಮನೆಗೆ ತೆರಳಿ ಅದರ ಫೋಟೋವನ್ನು ಆಪ್​ನಲ್ಲಿ ಅಪ್​ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.

    ಏಕೆ ಬ್ಲಾಕ್? : ವಸತಿ ಯೋಜನೆಗೆ ಗ್ರಾಪಂ ಹಂತದಲ್ಲಿ ಫಲಾನುಭವಿಯ ಆಯ್ಕೆ ನಡೆದು ರಾಜೀವ ಗಾಂಧಿ ವಸತಿ ನಿಗಮದ ವೆಬ್​ಸೈಟ್​ಗೆ ಅಪ್​ಲೋಡ್ ಆಗಬೇಕು. ನಂತರ ಮನೆಯ ಫೌಂಡೇಷನ್ ನಿರ್ವಣವಾದಾಗ ಒಂದು ಫೋಟೋ, ಕಿಟಕಿ ಹಂತದಲ್ಲಿ ಇನ್ನೊಂದು, ಸಂಪೂರ್ಣ ಮನೆ ನಿರ್ವಣವಾದ ನಂತರ ಇನ್ನೊಂದು ಹೀಗೆ ಮೂರು ಹಂತದ ಫೋಟೋವನ್ನು ಜಿಪಿಎಸ್ ಆಧಾರಿತ ಆಪ್​ನಲ್ಲಿ ಗ್ರಾಪಂ ಅಧಿಕಾರಿಗಳು ಅಪ್​ಲೋಡ್ ಮಾಡಬೇಕು. ಫೋಟೋಗಳು ಅಪ್​ಲೋಡ್ ಆದ ಹಾಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತದೆ. ಜಿಲ್ಲೆಯ ಹಲವರು ಫೌಂಡೇಷನ್, ಕಿಟಕಿವರೆಗಿನ ಮನೆ ನಿರ್ವಿುಸಿ ಜಿಪಿಎಸ್ ಮಾಡಿಸಿದರೂ ಹಣ ಮಾತ್ರ ಬಿಡುಗಡೆಯಾಗಿರಲಿಲ್ಲ. ಫಲಾನುಭವಿಯ ಹೆಸರು ಹಾಗೂ ಆರ್​ಟಿಸಿಯಲ್ಲಿನ ಹೆಸರು ಹೊಂದಿಕೆಯಾಗುತ್ತಿಲ್ಲ. ಆಧಾರ್ ಕಾರ್ಡ್ ಸಂಖ್ಯೆ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣಗಳಿಗೆ ವಸತಿ ನಿಗಮವು ಹಲವು ಫಲಾನುಭವಿಗಳ ಹೆಸರನ್ನು ಬ್ಲಾಕ್ ಮಾಡಿತ್ತು. ಹಣ ಬಾರದ ಕಾರಣ ಹಲವರು ಮನೆ ನಿರ್ವಣವನ್ನು ಅರ್ಧಕ್ಕೇ ಕೈ ಬಿಟ್ಟಿದ್ದರು.

    ವಸತಿ ನಿಗಮದ ಸೂಚನೆಯಂತೆ ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಮನೆ ಫೌಂಡೇಷನ್ ಸಿದ್ಧವಾದಲ್ಲಿ ಅದರ ಫೋಟೋವನ್ನು ಇಂದಿರಾ ವಿಜಿಲ್ ಆಪ್​ಗೆ ಅಪ್​ಲೋಡ್ ಮಾಡಲಾಗಿದೆ. ದಿನಾಂಕ ವಿಸ್ತರಣೆಯ ಬಗ್ಗೆ ಯಾವುದೇ ಸೂಚನೆ ರಾಜೀವ ಗಾಂಧಿ ವಸತಿ ನಿಗಮದಿಂದ ಬಂದಿಲ್ಲ. | ಎಂ.ರೋಶನ್ ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts