More

    ಮನೆ ಆಸೆ ಹುಟ್ಟಿಸಿ 35 ಲಕ್ಷ ರೂಪಾಯಿ ವಂಚನೆ

    ಹಾನಗಲ್ಲ: ಕಡಿಮೆ ವೆಚ್ಚದಲ್ಲಿ ಮನೆ ನಿರ್ವಿುಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವ್ಯಕ್ತಿಯೊಬ್ಬ 12ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಘಟನೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

    ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದ ಮಂಜುನಾಥ ನಾಗಪ್ಪ ಹುಲಮನಿ ಎಂಬಾತನೇ ವಂಚಿಸಿದ ಆರೋಪಿ. ಕೇಂದ್ರ ಸರ್ಕಾರದ ಯೋಜನೆಯಡಿ ಬಡವರಿಗಾಗಿ ಕೆಲವೇ ಮನೆಗಳು ಮಂಜೂರಾಗಿವೆ. ಬೆಳಗಾವಿಯಲ್ಲಿ ತಮ್ಮದೊಂದು ಕನ್ಸಟ್ರಕ್ಷನ್ ಕಂಪನಿ ಕಚೇರಿಯಿದ್ದು, ಸರ್ಕಾರದ ಯೋಜನೆಗಳಡಿ ಮನೆ ಕಟ್ಟಿ ಕೊಡಲಾಗುವುದು. ತಾಲೂಕಿಗೆ ಏಳೆಂಟು ಮನೆಗಳು ಮಾತ್ರ ಮಂಜೂರಾಗಿವೆ. ಕೇವಲ 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿ ಕೊಡಲಾಗುವುದು. ಮನೆ ಪೂರ್ಣಗೊಂಡ ನಂತರ ಸರ್ಕಾರದಿಂದ ಫಲಾನುಭವಿ ಖಾತೆಗೆ 7 ಲಕ್ಷ ರೂಪಾಯಿ ಜಮಾ ಆಗುತ್ತದೆ. ಸದ್ಯ 3.50 ಲಕ್ಷ ರೂಪಾಯಿ ನೀಡಿದರೆ ಮನೆ ಕಟ್ಟಿಸುವುದಾಗಿ ನಂಬಿಸಿದ್ದಾನೆ. ಅಲ್ಲದೆ, ಹಣ ನೀಡಿದ ಕುರಿತು ಬೇರೆಯವರಿಗೆ ತಿಳಿಸಬಾರದು ಎಂತಲೂ ಹೇಳಿದ್ದಾನೆ ಎನ್ನಲಾಗಿದೆ. ತಾಲೂಕಿನ 12ಕ್ಕೂ ಅಧಿಕ ಜನರಿಂದ ಸುಮಾರು 35 ಲಕ್ಷ ರೂಪಾಯಿ ಪಡೆದು ಈಗ ನಾಪತ್ತೆಯಾಗಿದ್ದಾನೆ. ಕೆಲವರು ನಗದು ನೀಡಿದ್ದರೆ, ಇನ್ನು ಕೆಲವರು ಆರ್​ಟಿಜಿಎಸ್, ಚೆಕ್ ಮೂಲಕ ಹಣ ನೀಡಿದ್ದಾರೆ.

    ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ಶಂಕ್ರಪ್ಪ ಸುತ್ತಕೋಟಿ ಎಂಬುವರಿಗೆ ಮಾಡೆಲ್ ಹೌಸ್ ನಿರ್ವಿುಸಿಕೊಡುವುದಾಗಿ ನಾಲ್ಕು ಗೋಡೆಗಳನ್ನೆಬ್ಬಿಸಿ ಸ್ಲ್ಯಾಬ್ ಹಾಕಿ ಉಳಿದವರಿಗೆಲ್ಲ ಅದನ್ನು ತೋರಿಸಿ ಹಣ ಪೀಕಿದ್ದಾನೆ. ಹಣ ಕೊಟ್ಟವರ ಪೈಕಿ ಕೆಲವರ ಮನೆಗಳನ್ನು ಗೋಡೆ ಹಂತದವರೆಗೆ ನಿರ್ವಿುಸಲಾಗಿದೆ.

    ಯಳವಟ್ಟಿ ಗ್ರಾಮದಲ್ಲಿ ಶಿವಮೂರ್ತೆಪ್ಪ ಪೂಜಾರ, ಮಾಲತೇಶ ಕ್ಷೌರದ, ದಾವಲಸಾಬ ಮಿಶ್ರಿಕೋಟಿ, ಸಹದೇವಪ್ಪ ಯಲಿಗಾರ, ಕವಿತಾ ಕ್ಯಾಸನಕೇರಿ, ಬಾಬು ಯಲ್ಲಪ್ಪ ಕೋಣನಕೇರಿ, ವಶೀಂ ಅಕ್ರಂ ಬಮ್ಮನಹಳ್ಳಿ, ತವನಪ್ಪ ಚಂದ್ರಪ್ಪ ಮಲ್ಲಾಡದ, ಬೈಚವಳ್ಳಿಯ ಶಿವಲಿಂಗಪ್ಪ ತಿರಕಪ್ಪ ಯಲಿಗಾರ, ಚಿಕ್ಕೇರಿಹೊಸಳ್ಳಿಯ ರಮೇಶ ಶಿಗ್ಲಿ, ಗೆಜ್ಜಿಹಳ್ಳಿಯ ಹನುಮಂತಪ್ಪ ಕರ್ಲೆಪ್ಪನವರ ಇತರರು ಹಣ ಕಳೆದುಕೊಂಡ ಅಮಾಯಕರು. ಇವರಲ್ಲಿ ಅಂಗವಿಕಲ, ವಿಧವೆಯೂ ಸೇರಿದ್ದಾರೆ. ಕವಿತಾ ಕ್ಯಾಸನಕೇರಿ ಎಂಬುವರು ತಾವಿದ್ದ ಮನೆ ತೆರವುಗೊಳಿಸಿ, ಸದ್ಯ ಬಾಡಿಗೆ ಮನೆಯಲ್ಲಿದ್ದಾರೆ. ಈ ಮಹಿಳೆ ಮನೆ ಅರ್ಧ ಮಾತ್ರ ನಿರ್ವಣಗೊಂಡಿದೆ.

    ಗೌಂಡಿ ಕೆಲಸ ಮಾಡಿದ ಖ್ವಾಜಾಮೈನುದ್ದೀನ್ ಯಲಿವಾಳ ಅವರಿಗೆ 80 ಸಾವಿರ, ಮೆಹಬೂಬಬಾಷಾ ಗೈಬೂನವರ 3.83 ಲಕ್ಷ ರೂ, ದಾವಲಸಾಬ ಮಿಶ್ರಿಕೋಟಿ 1 ಲಕ್ಷ ರೂ., ಮದಾರಸಾಬ ಹಾವಣಗಿ 50 ಸಾವಿರ ರೂಪಾಯಿ ಸೇರಿ ಒಟ್ಟು 5 ಲಕ್ಷ ರೂಪಾಯಿ ಕೂಲಿಯನ್ನು ಆರೋಪಿ ನೀಡಿಲ್ಲ ಎಂದು ಅಳಲು ತೋಡಿಕೊಂಡರು.

    ಸಾಲಕ್ಕೆ ಬಡ್ಡಿ ಕಟ್ಟುವ ಸಂಕಷ್ಟ: ಮನೆ ನಿರ್ವಣಕ್ಕಾಗಿ ಬೇರೆಯವರಲ್ಲಿ ಸಾಲ ತಂದು ಆರೋಪಿ ಮಂಜುನಾಥ ಹುಲಮನಿಗೆ ಹಣ ನೀಡಿರುವ 12ಕ್ಕೂ ಅಧಿಕ ಜನರು, ಪ್ರತಿ ತಿಂಗಳು 6 ಸಾವಿರ ರೂಪಾಯಿ ಬಡ್ಡಿ ಕಟ್ಟುತ್ತಿದ್ದಾರೆ. ಆದರೆ, ಈಗ ಇತ್ತ ಮನೆಯೂ ಇಲ್ಲ, ಅತ್ತ ಆಸಾಮಿಯೂ ಪತ್ತೆಯಿಲ್ಲ.

    ಕ್ರಮ ಕೈಗೊಳ್ಳದ ಪೊಲೀಸರು: ಘಟನೆ ಜನವರಿಯಲ್ಲಿ ನಡೆದಿದ್ದು, ಏಪ್ರಿಲ್​ನಿಂದ ಮಂಜುನಾಥ ಹುಲಮನಿ ನಾಪತ್ತೆಯಾಗಿದ್ದಾನೆ. ಅವನು ನೀಡಿದ್ದ ಮೊಬೈಲ್ ಸಂಖ್ಯೆ ಬಂದ್ ಆಗಿವೆ. ಅವನ ಗ್ರಾಮಕ್ಕೆ ತೆರಳಿದ ಹಣ ಕೊಟ್ಟವರು, ಆತನ ಮನೆಗೆ ಕೀಲಿ ಹಾಕಿದ್ದನ್ನು ನೋಡಿ ಮರಳಿದ್ದಾರೆ. ಏಪ್ರಿಲ್​ನಲ್ಲಿಯೇ ಹಾನಗಲ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಆದರೆ, ಈವರೆಗೆ ಆರೋಪಿ ಮಂಜುನಾಥ ಪತ್ತೆ ಹಚ್ಚಿಲ್ಲ.

    ಕಾನೂನು ಕ್ರಮಕ್ಕೆ ಆಗ್ರಹ

    ವಂಚನೆ ಕುರಿತು ಯಳವಟ್ಟಿ ಗ್ರಾಮದಲ್ಲಿ ಮಾಧ್ಯಮದವರ ಗಮನ ಸೆಳೆದ ಜೆಡಿಎಸ್ ಮುಖಂಡ ನಿಯಾಜ್ ಶೇಖ, ಅಮಾಯಕ ಬಡವರಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಮಂಜುನಾಥ ಹುಲಮನಿಯನ್ನು ಪೊಲೀಸರು ಬಂಧಿಸಿ, ಹಣ ವಸೂಲು ಮಾಡಬೇಕು. ಈ ವ್ಯಕ್ತಿ ಇದೇ ರೀತಿ ತಾಲೂಕು, ಹೊರ ತಾಲೂಕುಗಳಲ್ಲಿಯೂ ಟೋಪಿ ಹಾಕಿದ ಮಾಹಿತಿಯಿದೆ. ಕಲಘಟಗಿ ಠಾಣೆಯಲ್ಲೂ ಇಂಥದೇ 45 ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ. ಅಮಾಯಕ ಫಲಾನುಭವಿಗಳು ಕಣ್ಣೀರು ಹಾಕಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ನನಗೆ ಮನವಿ ಮಾಡಿದ್ದರಿಂದ ಪ್ರಕರಣ ಬಯಲಿಗೆಳೆದಿದ್ದೇನೆ. ಪೊಲೀಸ್ ಅಧಿಕಾರಿಗಳು ವಿಳಂಬ ಮಾಡದೇ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎಸ್. ಹಿರೇಮಠ, ಮುಖಂಡರಾದ ಸುರೇಶ ನಾಯ್ಕ, ಎನ್.ಎಂ. ಸಂಕಣ್ಣನವರ, ಫಕ್ರುದ್ದೀನ್ ಖತೀಬ, ರಾಮಲಿಂಗ ವಗ್ಗಣ್ಣನವರ, ಗದಿಗೆಪ್ಪ ಉಮಚಗಿ, ರಾಮಣ್ಣ ಉಮಚಗಿ, ಫಕೀರೇಶ ಕೋಣನಕೇರಿ, ಮದಾರಸಾಬ ಹಾವಣಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts