More

    ಶೇ. 30 ಮಕ್ಕಳಲ್ಲಿ ದೃಷ್ಟಿ ಸಮಸ್ಯೆ

    ಬೆಂಗಳೂರು: ಪರೀಕ್ಷೆ ಸಮೀಪಿಸುತ್ತಿವೆ. ಸಾಕಷ್ಟು ನಿದ್ರೆ ಮತ್ತು ಹೊರಾಂಗಣ ಚಟುವಟಿಕೆಗಳ ಕೊರತೆಯ ಜೊತೆಗೆ ದೀರ್ಘ ಸಮಯದ ಅಧ್ಯಯನದಿಂದಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಜೊತೆಗೆ ಹೆಚ್ಚುತ್ತಿರುವ ಕಣ್ಣಿನ ಆರೋಗ್ಯದ ಸಮಸ್ಯೆಯು ಉತ್ತಮ ಸಿದ್ಧತೆಯ ಹೊರತಾಗಿಯೂ ಮಕ್ಕಳ ಶೈಕ್ಷಣಿಕ ಯಶಸ್ಸಿಗೆ ಅಡ್ಡಿಯಾಗುತ್ತಿದೆ.

    ಒತ್ತಡ ಮತ್ತು ದೀರ್ಘ ಸಮಯದ ಅಧ್ಯಯನದಿಂದ ಶೇ. 30 ಮಕ್ಕಳಲ್ಲಿ ನಾನಾ ರೀತಿಯ ದೃಷ್ಟಿ ಸಮಸ್ಯೆ ಹೊಂದಿದ್ದಾರೆ. ದೂರದೃಷ್ಟಿ ಮತ್ತು ಸಮೀಪದೃಷ್ಟಿಯ ಸಮಸ್ಯೆಯಿಂದಾಗಿ ಓದು ಸೇರಿ ಮಕ್ಕಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಾರಾಯಣ ನೇತ್ರಾಲಯದ ತಜ್ಞರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಆಸ್ಪತ್ರೆಯ ಅಧ್ಯಕ್ಷ ರೋಹಿತ್ ಶೆಟ್ಟಿ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ಶೇ. 50ಕ್ಕೂ ಹೆಚ್ಚು ರೋಗಿಗಳು 10ನೇ ತರಗತಿ/ ಪಿಯುಸಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ದುರದೃಷ್ಟವಶಾತ್ ಶೇ. 95 ಕೇಂದ್ರೀಕರಿಸುವ ಸಮಸ್ಯೆಗಳು ಅಥವಾ ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳು ದಿನನಿತ್ಯದ ಕಣ್ಣಿನ ಪರೀಕ್ಷೆಗಳಲ್ಲಿ ರೋಗನಿರ್ಣಯ ಮಾಡಲಾಗುವುದಿಲ್ಲ. ಇವನ್ನು ಗಮನಿಸದಿದ್ದರೆ ಏಕಾಗ್ರತೆ ಕೊರತೆ, ತಲೆನೋವು, ಮಂದ ದೃಷ್ಟಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದರು.

    ಈ ಸಮಸ್ಯೆಗಳ ಜೊತೆಗೆ, ಡಿಜಿಟಲ್ ಸ್ಕ್ರೀನ್‌ಗಳ ಅತಿಯಾದ ಬಳಕೆ ಮತ್ತು ಆನ್‌ಲೈನ್ ಅಧ್ಯಯನದಿಂದ ನೇತ್ರ ಸಂಬಂಧಿ ಸಮಸ್ಯೆಗಳು ಬಾಧಿಸುತ್ತವೆ. ಈ ರೋಗಲಕ್ಷಣ ಇರುವ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಕಾಡುತ್ತದೆ ಎಂದು ವಿವರಿಸಿದರು.

    ಆಸ್ಪತ್ರೆಯ ಬೊಮ್ಮಸಂದ್ರ ಶಾಖೆಯ ಮಕ್ಕಳ ನೇತ್ರವಿಜ್ಞಾನ ಮತ್ತು ಸ್ಟ್ರಾಬಿಸ್ಮಾಲಜಿ ಸಲಹೆಗಾರ್ತಿ ಜ್ಯೋತಿ ಮಟಾಲಿಯಾ ಮಾತನಾಡಿ, ಸಾಂಪ್ರದಾಯಿಕ ಕಣ್ಣಿನ ತಪಾಸಣೆಗಳು ಸಾಮಾನ್ಯವಾಗಿ ದೂರದೃಷ್ಟಿ ಸಮಸ್ಯೆಗಳನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಹೀಗಾಗಿ, ವಿವರವಾದ ಆರ್ಥೋಪ್ಟಿಕ್ಟ್ ಮೌಲ್ಯಮಾಪನದ ಅಗತ್ಯವಿರುವ ಕಣ್ಣಿನ ಸಮಸ್ಯೆಗಳ ರೋಗನಿರ್ಣಯ ಮಾಡಲು ಸಾಧ್ಯವಾಗುವುದಿಲ್ಲ. ಈ ಮೌಲ್ಯಮಾಪನದಿಂದ ಕನ್ನಡಕ, ಉದ್ದೇಶಿತ ಕಣ್ಣಿನ ವ್ಯಾಯಾಮಗಳು ಮತ್ತು ಅಪರೂಪದ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕಣ್ಣಿನ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದು ಹೇಳಿದರು.

    ಕಣ್ಣಿನ ಆರೋಗ್ಯಕ್ಕೆ ಸಲಹೆಗಳು
    * ಉತ್ತಮ ಓದುವ ಅಂತರ (ಪುಸ್ತಕಕ್ಕೆ 14-16 ಇಂಚು ದೂರ) ಕಾಪಾಡಿಕೊಳ್ಳಿ.
    * ಆನ್‌ಲೈನ್ ಅಧ್ಯಯನ ಸಾಮಗ್ರಿಗಳಿಗಾಗಿ ಮೊಬೈಲ್ ಫೋನ್‌ಗಳಂತಹ ಸಣ್ಣ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ.
    * 20-20-20 ನಿಯಮ (20 ನಿಮಿಷಕ್ಕೊಮ್ಮೆ 20 ಬಾರಿ ಕಣ್ಣು ಮಿಟುಕಿಸಿ) ಅನುಸರಿಸಿ ಕಣ್ಣಿನ ವಿರಾಮ ನೀಡಿ.
    * ವಿರಾಮದ ಸಮಯದಲ್ಲಿ, ಮೊಬೈಲ್ ಫೋನ್ ಬಳಸುವುದನ್ನು ಅಥವಾ ಟಿವಿ ನೋಡುವುದನ್ನು ತಪ್ಪಿಸಿ.
    * ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಲು ಮತ್ತು ಏಕಾಗ್ರತೆಯನ್ನು ಸುಧಾರಿಸಲು ಧ್ಯಾನ ರೂಢಿಸಿಕೊಳ್ಳಿ.
    * ಸೊಪ್ಪು, ತರಕಾರಿ ಸೇರಿ ಆರೋಗ್ಯಕರ ಆಹಾರ ಸೇವಿಸಿ, ಸಾಕಷ್ಟು ನಿದ್ರೆ ಮಾಡಿ.
    * ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts