More

    40% ಕಮಿಷನ್ ದಂಧೆಯ ತನಿಖೆ: ದೂರು ನೀಡಲು ಭಯಗೊಂಡ ಅಧಿಕಾರಿಗಳು; ಗುತ್ತಿಗೆದಾರರಿಗೂ ಒಳಗೊಳಗೆ ಕಾಡುತ್ತಿದೆ ಆತಂಕ


    *ಈ ತನಕ ಬಂದಿದ್ದು 180 ಅರ್ಜಿಗಳು ಮಾತ್ರ
    *ದೂರು ನೀಡಿದವರಿಗೆ ರಕ್ಷಣೆ ಅಭಯ ನೀಡಿದ ಸಮಿತಿ
    *ಸಮಿತಿಗೆ ದೂರು ನೀಡಲು ಮತ್ತೊಮ್ಮೆ ಅವಧಿ ವಿಸ್ತರಣೆ

    ಶಿವಾನಂದ ತಗಡೂರು, ಬೆಂಗಳೂರು:
    40% ಕಮಿಷನ್ ದಂಧೆಯ ಬಗ್ಗೆ ತನಿಖೆಗಾಗಿ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಸಮಿತಿ ಮುಂದೆ ಈತನಕ 180 ದೂರು ಅರ್ಜಿಗಳು ಸಲ್ಲಿಕೆಯಾಗಿವೆ.
    ಅಚ್ಚರಿ ಅಂದರೆ, ಈ ತನಕ ಒಬ್ಬ ಇಂಜಿನೀಯರ್‌ಗಳಾಗಲಿ, ಅಧಿಕಾರಿಗಳಾಗಲಿ ದೂರು ಸಲ್ಲಿಸಿಲ್ಲ. ರಾಜಕಾರಿಣಿಗಳ ಪೈಕಿಯೂ ಒಬ್ಬರೂ ದೂರು ಕೊಟ್ಟಿಲ್ಲ. ಅಷ್ಟೆ ಅಲ್ಲ, ವೈಯುಕ್ತಿಕವಾಗಿ ಗುತ್ತಿಗೆದಾರರೂ ದೂರು ನೀಡಿಲ್ಲ.
    ಈಗ ಸಲ್ಲಿಕೆಯಾಗಿರುವ ದೂರುಗಳಲ್ಲಿ ಸಾರ್ವಜನಿಕ ದೂರುಗಳೇ ಹೆಚ್ಚು. ಇನ್ನು ರಾಜ್ಯ ಗುತ್ತಿಗೆದಾರರ ಸಂಘ ಮತ್ತು ಕೆಲ ಸಂಘ ಸಂಸ್ಥೆಗಳು ಭ್ರಷ್ಟಚಾರದ ಬಗ್ಗೆ ದೂರು ನೀಡಿವೆ.
    ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಐದು ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಸಮಿತಿಗೆ ಸೂಚಿಸಿದೆ.
    29 ಜಿಲ್ಲೆಯಿಂದ ದೂರುಗಳು ಬಂದಿದ್ದು, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಬಗ್ಗೆಯೇ ಅತಿ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
    ತಮ್ಮ ಅನುಮತಿ ಇಲ್ಲದೆ ಬಿಲ್ ಕೊಟ್ಟಿದ್ದರ ಬಗ್ಗೆ ಹಿಂದಿನ ಸರ್ಕಾರದಲ್ಲಿ ಎಂಜಿನೀಯರೊಬ್ಬರಿಗೆ ಆಗಿನ ಶಾಸಕರೊಬ್ಬರು ಧಮಕಿ ಹಾಕಿದ್ದು ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಆಗಿನ ಅಧಿಕಾರಿ ದೂರು ಸಲ್ಲಿಸಬಹುದು ಎಂದು ಹೇಳಲಾಗುತಿತ್ತು. ಆದರೆ, ಈ ತನಕ ಆ ಎಂಜಿನೀರ್ ಕೂಡ ದೂರು ಸಲ್ಲಿಸಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

    ದೂರು ನೀಡಿದವರಿಗೆ ರಕ್ಷಣೆ
    ಭ್ರಷ್ಟಾಚಾರ ಬಗ್ಗೆ ಯಾರೇ ದೂರು ನೀಡಿದರೂ, ಅದರ ಗೌಪ್ಯತೆಯನ್ನು ಕಾಪಾಡಲಾಗುವುದು ಮತ್ತು ಅಗತ್ಯವಿದ್ದವರಿಗೆ ಪೊಲೀಸ್ ರಕ್ಷಣೆಯನ್ನು ನೀಡಲಾಗುವುದು ಎಂದು ಸಮಿತಿ ಭರವಸೆ ನೀಡಿದೆ. ಯಾವುದೇ ಮಾಹಿತಿಯನ್ನು ದಾಖಲೆಗಳ ಜೊತೆಗೆ ನೀಡಿದರೆ ತನಿಖೆ ಮಾಡಲು ಅನುಕೂಲವಾಗಲಿದೆ ಎನ್ನುವುದನ್ನು ತಮ್ಮನ್ನು ಭೇಟಿ ಮಾಡಿದವರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಮಿತಿ ತಿಳಿಸಿದೆ.

    ಭಯದಲ್ಲಿರುವ ದೂರುದಾರರು!
    ಸಮಿತಿ ಮುಂದೆ ಬಂದಿರುವ ದೂರುದಾರರಲ್ಲಿ ಕೆಲವರು ಮುಂದೆ ನಮಗೇನಾಗುತ್ತದೆಯೋ? ಎನ್ನುವ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ದೂರು ಕೊಟ್ಟರೆ, ಮುಂದೆ ನಮಗೆ ಗುತ್ತಿಗೆಯನ್ನೆ ಕೊಡದಂತೆ ಮಾಡಲಾಗುತ್ತದೆ ಎನ್ನುವ ಭಯವೂ ಗುತ್ತಿಗೆದಾರರನ್ನು ಅವಲಂಭಿಸಿದೆ. ಮತ್ತೊಂದೆಡೆ ಇಂಥದ್ದೆ ಭಯ ಅಧಿಕಾರಿಗಳು, ಎಂಜಿನೀಯರ್‌ಗಳನ್ನು ಕಾಡುತ್ತಿದೆ. ವಾಸ್ತವವಾಗಿ ಏನು ನಡೆಯುತ್ತಿದೆ ಎನ್ನುವುದನ್ನು ಮುಂದೆ ಬಾಯಿಬಿಟ್ಟರೆ, ವರ್ಗಾವಣೆ ಶಿಕ್ಷೆ ಜೊತೆಗೆ ನಾನಾ ರೀತಿಯ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಎನ್ನುವ ಭಯದಲ್ಲಿ ಅವರು ಬಾಯಿಗೆ ಬೀಗ ಹಾಕಿಕೊಂಡು ಮೌನಕ್ಕೆ ಸರಿದಿದಾರೆ ಎನ್ನುವುದು ಸಮಿತಿಯ ಗಮನಕ್ಕೆ ಬಂದಿದೆ.

    ಡಿಸೆಂಬರ್ ತನಕ ವಿಸ್ತರಣೆ
    ಸಮಿತಿಗೆ ದೂರು ಸಲ್ಲಿಸಲು ಮೊದಲು ಮಾಡಿಕೊಟ್ಟಿದ್ದ ಅವಕಾಶವನ್ನು ಒಮ್ಮೆ ನವೆಂಬರ್ ತನಕ ವಿಸ್ತರಣೆ ಮಾಡಲಾಗಿತ್ತು. ಕೆಲ ಸಂಘ ಸಂಸ್ಥೆ ಮತ್ತು ಸಾರ್ವಜನಿಕರ ಮನವಿ ಮೇರೆಗೆ ಮತ್ತೊಮ್ಮೆ 2ನೇ ಬಾರಿಗೆ ಡಿಸೆಂಬರ್ ತನಕ ವಿಸ್ತರಣೆ ಮಾಡಲಾಗಿದೆ. ರಾಜ್ಯದಾದ್ಯಂತ ಹೆಚ್ಚಿನ ದೂರುಗಳು ಸಲ್ಲಿಕೆಯಾಗಬಹುದು ಎಂದು ಸಮಿತಿ ನಿರೀಕ್ಷಿಸಿದೆ.

    ಸತ್ಯದ ನಿರೀಕ್ಷೆಯಲ್ಲಿ ಸಮಿತಿ
    ಸಮಿತಿಯನ್ನು ಭೇಟಿ ಮಾಡಿ ಈತನಕ ದೂರು ಸಲ್ಲಿಸಿದವರಿಗೆ, ನೀವು ಏನೂ ಹೇಳಿದರೂ ಸ್ವೀಕರಿಸುತ್ತೇವೆ. ಆದರೆ ಅದೆಲ್ಲವೂ ದಾಖಲೆಯಲ್ಲಿರಲಿ. ಅದಕ್ಕಿಂತ ಮುಖ್ಯವಾಗಿ ನೀವು ಸತ್ಯವನ್ನು ಮುಕ್ತವಾಗಿ ಹೇಳಿಕೊಳ್ಳುವುದು ಮಹತ್ವವಾಗಿದೆ ಎನ್ನುವ ಅಂಶವನ್ನು ಮನದಟ್ಟು ಮಾಡಿಕೊಡಲಾಗಿದೆ. ಸಮಿತಿ ನೀಡಿರುವ ಭರವಸೆ ಹಿನ್ನೆಲೆಯಲ್ಲಿ ನಿಧಾನವಾಗಿ ದೂರು ಸಲ್ಲಿಕೆ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

    *ನಾವು ದೂರು ನೀಡಿ ಈ ವ್ಯವಸ್ಥೆಯಲ್ಲಿ ಬದುಕುಳಿಯಲು ಸಾಧ್ಯವೇ? ಮುಂದೆ ಗುತ್ತಿಗೆಯೂ ಸಿಗಲ್ಲ, ಬಿಲ್ ಕೂಡ ಕೊಡಲ ಎನ್ನುವ ಭಯವಿದೆ. ಅದಕ್ಕಾಗಿಯೇ ವೈಯುಕ್ತಿಕವಾಗಿ ದೂರು ನೀಡಲು ಹೋಗಿಲ್ಲ. ಗುತ್ತಿಗೆದಾರರ ಸಂಘದ ಮೂಲಕವೇ ದೂರು ನೀಡಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ.
    ಹೆಸರು ಹೇಳಿಕೊಳ್ಳಲು ಇಚ್ಛಿಸದ ಗುತ್ತಿಗೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts