More

    ಇಂದು 2ನೇ ಏಕದಿನ, ಆಂಗ್ಲರೆದುರು ಹ್ಯಾಟ್ರಿಕ್ ಸರಣಿ ಗೆಲುವಿನ ತವಕದಲ್ಲಿ ಭಾರತ

    ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ20 ಸರಣಿಗಳಲ್ಲಿ ದಿಟ್ಟ ತಿರುಗೇಟು ನೀಡಿ ಜಯಿಸಿರುವ ಭಾರತ ತಂಡ ಇದೀಗ ಏಕದಿನದಲ್ಲಿ ಆರಂಭಿಕ ಮೇಲುಗೈಯನ್ನು ಏಕದಿನ ಸರಣಿ ಗೆಲುವಾಗಿ ಬದಲಾಯಿಸುವ ಅವಕಾಶ ಹೊಂದಿದೆ. 2ನೇ ಏಕದಿನ ಪಂದ್ಯ ಎಂಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿದ್ದು, ವಿರಾಟ್ ಕೊಹ್ಲಿ ಪಡೆ ಆಂಗ್ಲರೆದುರು ಹ್ಯಾಟ್ರಿಕ್ ಸರಣಿ ಗೆಲುವಿನ ಸಾಧನೆ ಮಾಡಲು ಹಂಬಲಿಸಿದೆ.

    ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವಿನ ನಡುವೆ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ ಗಾಯ ಭಾರತಕ್ಕೆ ಹೊಡೆತ ನೀಡಿತ್ತು. ಭುಜದ ಕೀಲು ತಪ್ಪಿದ್ದರಿಂದ ಶ್ರೇಯಸ್ ಇನ್ನು ಸುಮಾರು 4 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದು, ಐಪಿಎಲ್‌ನಿಂದಲೂ ಹೊರಗುಳಿಯಲಿದ್ದಾರೆ. 26 ವರ್ಷದ ಶ್ರೇಯಸ್ ಏಕದಿನ ತಂಡದಲ್ಲಿ 4ನೇ ಕ್ರಮಾಂಕವನ್ನು ಬಹುತೇಕ ಭದ್ರ ಪಡಿಸಿಕೊಂಡಿದ್ದರು. ಇದೀಗ ಅವರ ಗೈರಿನಲ್ಲಿ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಹೊಸ ಬ್ಯಾಟ್ಸ್‌ಮನ್‌ಗೆ ಅವಕಾಶ ಕಲ್ಪಿಸಬೇಕಾಗಿದೆ.

    ಆರಂಭಿಕ ಶಿಖರ್ ಧವನ್ ಮೊದಲ ಪಂದ್ಯದಲ್ಲಿ 98 ರನ್ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ಸಮಾಧಾನಕರ ವಿಚಾರವಾಗಿದೆ. ಟಿ20 ಸರಣಿಯಲ್ಲಿ ಪರದಾಡಿದ್ದ ಕನ್ನಡಿಗ ಕೆಎಲ್ ರಾಹುಲ್ ಕೂಡ ಬಿರುಸಿನ ಅರ್ಧಶತಕ ಸಿಡಿಸಿ ಲಯ ಕಂಡುಕೊಂಡಿದ್ದಾರೆ. ತ್ರಿವಳಿ ವೇಗಿಗಳಾದ ಭುವನೇಶ್ವರ್ ಕುಮಾರ್, ಪ್ರಸಿದ್ಧಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಇಂಗ್ಲೆಂಡ್‌ನ 10ರಲ್ಲಿ 9 ವಿಕೆಟ್‌ಗಳಲ್ಲಿ ಕಬಳಿಸಿದ್ದು ಅಪೂರ್ವ ಸಾಧನೆ. ಆಂಗ್ಲರಿಗೆ ಆರಂಭದಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದು ಕಳವಳಕಾರಿ. 2020ರಿಂದ ಭಾರತ ತಂಡ 10 ಏಕದಿನ ಪಂದ್ಯವಾಡಿದ್ದು, ಈ ಪೈಕಿ ಇನಿಂಗ್ಸ್‌ನ ಮೊದಲ 10 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಬಳಿಸಿದೆ. ಇದು ಭಾರತೀಯ ಬೌಲರ್‌ಗಳ ಆರಂಭಿಕ ಪರದಾಟವನ್ನು ಪ್ರತಿಬಿಂಬಿಸುತ್ತಿದೆ. ಹೀಗಾಗಿ ಈ ಬಾರಿ ಆಂಗ್ಲರಿಗೆ ಆರಂಭದಿಂದಲೇ ಆಘಾತಗಳನ್ನು ನೀಡಬೇಕಾಗಿದೆ.

    ಇದನ್ನೂ ಓದಿ: PHOTO | ಪುಣೆಯಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸಲು ಬೆಟ್ಟ ಏರಿದ ಕ್ರಿಕೆಟ್ ಪ್ರೇಮಿ!

    ಇಂಗ್ಲೆಂಡ್‌ಗೆ ಬಟ್ಲರ್ ಹಂಗಾಮಿ ನಾಯಕ
    ಆಂಗ್ಲರಿಗೆ ಪ್ರವಾಸದಲ್ಲಿ ಒಂದಾದರೂ ಸರಣಿ ಜಯಿಸುವ ಆಸೆ ಜೀವಂತ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ‌್ಯವಾಗಿದೆ. ಮೊದಲ ಏಕದಿನದ ವೇಳೆ ಗಾಯಗೊಂಡ ನಾಯಕ ಇವೊಯಿನ್ ಮಾರ್ಗನ್ ಸರಣಿಯಿಂದ ಹೊರಬಿದ್ದಿದ್ದರೆ, ಸ್ಯಾಮ್ ಬಿಲ್ಲಿಂಗ್ಸ್ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮಾರ್ಗನ್ ಗೈರಿನಲ್ಲಿ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

    ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಪಡೆದ ಭರ್ಜರಿ ಆರಂಭವನ್ನು ನೋಡಿದಾಗ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡಿಯೇ ಬಿಡುವಂತೆ ಕಂಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಕೈಕೊಟ್ಟಿದ್ದರು. ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಯಾವುದೇ ಕ್ಷಣದಲ್ಲಿ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿರುವುದರಿಂದ ಭಾರತ ಎಚ್ಚರಿಕೆಯಿಂದ ಆಡಬೇಕಾಗಿದೆ.

    ಟೀಮ್ ನ್ಯೂಸ್:
    ಭಾರತ: ಮೊದಲ ಪಂದ್ಯದಲ್ಲಿ ರೋಹಿತ್ ಬಲ ಮೊಣಕೈಗೆ ಗಾಯಗೊಂಡಿದ್ದರೂ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆ ಇದೆ. ಇಲ್ಲದಿದ್ದರೆ ಶುಭಮಾನ್ ಗಿಲ್ ಅವಕಾಶ ಪಡೆಯಬಹುದು. ಶ್ರೇಯಸ್ ಅಯ್ಯರ್ ಸ್ಥಾನ ತುಂಬಲು ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ನಡುವೆ ಪೈಪೋಟಿ ಇದೆ. ರಿಷಭ್ ಪಂತ್ ಕಣಕ್ಕಿಳಿದರೂ, ಕೆಎಲ್ ರಾಹುಲ್ ಅವರೇ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ. ಸೂರ್ಯಕುಮಾರ್ ಆಡಿದರೆ ಭಾರತ ಪರ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದಂತಾಗುತ್ತದೆ. ಮೊದಲ ಪಂದ್ಯದಲ್ಲಿ 9 ಓವರ್‌ಗಳಲ್ಲಿ 68 ರನ್ ನೀಡಿ ದುಬಾರಿಯಾದ ಕುಲದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಾಹಲ್ ಕಣಕ್ಕಿಳಿಯಬಹುದು. ಶಾರ್ದೂಲ್‌ಗೆ ವಿಶ್ರಾಂತಿ ನೀಡಿ, ಟಿ. ನಟರಾಜನ್ ಅಥವಾ ಮೊಹಮದ್ ಸಿರಾಜ್ ಕಣಕ್ಕಿಳಿದರೂ ಅಚ್ಚರಿ ಇಲ್ಲ.
    ಇಂಗ್ಲೆಂಡ್: ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ನಾಯಕ ಇವೊಯಿನ್ ಮಾರ್ಗನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಡೇವಿಡ್ ಮಲಾನ್ ಇವರಿಬ್ಬರ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ. ಇನ್ನು ಬೌಲಿಂಗ್ ವಿಭಾಗಕ್ಕೆ ವೈವಿಧ್ಯತೆ ತುಂಬಲು ಬಯಸಿದರೆ, ಎಡಗೈ ವೇಗಿ ರೀಸ್ ಟಾಪ್ಲೆ ಕಣಕ್ಕಿಳಿಯಬಹುದು.

    *ಪಂದ್ಯ ಆರಂಭ: ಮಧ್ಯಾಹ್ನ 1.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಪಿಚ್ ರಿಪೋರ್ಟ್
    ಭಾರತ ತಂಡ ಮೊದಲ ಏಕದಿನದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿದ್ದರೂ, ಎಂಸಿಎ ಕ್ರೀಡಾಂಗಣದ ಪಿಚ್ ಚೇಸಿಂಗ್‌ಗೆ ಹೆಚ್ಚು ಸೂಕ್ತವಾದುದು. ಹೀಗಾಗಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವುದೇ ಉತ್ತಮವೆನಿಸಿದೆ. 2ನೇ ಸರದಿಯ ಬೌಲಿಂಗ್ ವೇಳೆ ಇಬ್ಬನಿ ಸಮಸ್ಯೆ ಕಾಡುವ ಭೀತಿಯೂ ಇದೆ.

    ಶತಕದ ಬರ ನೀಗುವರೇ ಕೊಹ್ಲಿ?
    ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ 42 ಇನಿಂಗ್ಸ್‌ಗಳಿಂದ (ಟೆಸ್ಟ್‌ನಲ್ಲಿ 12, ಏಕದಿನದಲ್ಲಿ 13, ಟಿ20ಯಲ್ಲಿ 17) ಶತಕದ ಬರ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಒಮ್ಮೆಯೂ ಅವರು 90ರ ಗಡಿಯನ್ನೂ ದಾಟಿಲ್ಲ. 2 ಬಾರಿ 89 ರನ್ ಗಳಿಸಿ ಔಟಾಗಿದ್ದು ಗರಿಷ್ಠವೆನಿಸಿದೆ. 2019ರ ನವೆಂಬರ್‌ನಲ್ಲಿ ಕೋಲ್ಕತ ಟೆಸ್ಟ್‌ನಲ್ಲಿ ಅವರ ಕೊನೆಯ ಶತಕ ಸಿಡಿದಿತ್ತು. ಏಕದಿನದಲ್ಲೂ ಕಳೆದ 13 ಇನಿಂಗ್ಸ್‌ಗಳಿಂದ ಅವರು ಶತಕ ಸಿಡಿಸಿಲ್ಲ. 2019ರ ಆಗಸ್ಟ್‌ನಲ್ಲಿ ವಿಂಡೀಸ್ ವಿರುದ್ಧ ಏಕದಿನದಲ್ಲಿ ಅವರ ಕೊನೇ ಶತಕ ಸಿಡಿದಿತ್ತು. ಇದೀಗ ಐಪಿಎಲ್ 14ನೇ ಆವೃತ್ತಿಗೆ ಮುನ್ನ ಶತಕದ ಬರ ನೀಗಿಸಿಕೊಳ್ಳಲು ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೇ 2 ಇನಿಂಗ್ಸ್‌ಗಳು ಬಾಕಿ ಉಳಿದಿವೆ.

    *5: ಐಪಿಎಲ್ 13ನೇ ಆವೃತ್ತಿಯ ಬಳಿಕ ಭಾರತ ತಂಡ ಆಡಿರುವ ಹಿಂದಿನ 5 ಸರಣಿಗಳಲ್ಲಿ 4ರಲ್ಲಿ ಜಯಿಸಿದ್ದು, ಹಾಲಿ ಏಕದಿನ ಸರಣಿಯಲ್ಲೂ ಗೆದ್ದರೆ 5ನೇ ಗೆಲುವು ಒಲಿಯಲಿದೆ. ಆಸೀಸ್‌ನಲ್ಲಿ ಏಕದಿನ ಸರಣಿ ಸೋತಿದ್ದ ಭಾರತ, ಟಿ20, ಟೆಸ್ಟ್ ಸರಣಿ ಜಯಿಸಿತ್ತು. ಇಂಗ್ಲೆಂಡ್ ವಿರುದ್ಧವೂ ಈಗಾಗಲೆ ಟೆಸ್ಟ್, ಟಿ20 ಸರಣಿ ಜಯಿಸಿದೆ.

    *79: ವಿರಾಟ್ ಕೊಹ್ಲಿ ಇನ್ನು 79 ರನ್ ಗಳಿಸಿದರೆ ಭಾರತದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 5 ಸಾವಿರ ರನ್ ಪೂರೈಸಿದ 2ನೇ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ ಮೊದಲಿಗರಾಗಿದ್ದಾರೆ.

    *106: ಶಿಖರ್ ಧವನ್ ಇನ್ನು 106 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ 14ನೇ ಭಾರತೀಯರೆನಿಸಲಿದ್ದಾರೆ.

    *9: ಶಿಖರ್ ಧವನ್ ಇನ್ನು 94 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಗಳಿಸಿದ 9ನೇ ಬಾರತೀಯರೆನಿಸಲಿದ್ದಾರೆ.

    ಕಳೆದ 4 ತಿಂಗಳಲ್ಲಿ ಪದಾರ್ಪಣೆ ಸೂಪರ್‌ಹಿಟ್!
    ಐಪಿಎಲ್ 13ನೇ ಆವೃತ್ತಿಯ ಬಳಿಕ ಭಾರತ ತಂಡದ ಪರ ವಿವಿಧ ಕ್ರಿಕೆಟ್ ಪ್ರಕಾರಗಳಲ್ಲಿ ಪದಾರ್ಪಣೆ ಮಾಡಿರುವ ಎಲ್ಲ 10 ಆಟಗಾರರೂ ಭರ್ಜರಿ ನಿರ್ವಹಣೆಯ ಮೂಲಕ ಗಮನಸೆಳೆದಿರುವುದು ವಿಶೇಷವಾಗಿದೆ. ಅವರೆಂದರೆ ಟಿ. ನಟರಾಜನ್ (ಟೆಸ್ಟ್, ಏಕದಿನ, ಟಿ20), ಶುಭಮಾನ್ ಗಿಲ್ (ಟೆಸ್ಟ್), ಮೊಹಮದ್ ಸಿರಾಜ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ (ಎಲ್ಲರೂ ಟೆಸ್ಟ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ಇಬ್ಬರೂ ಟಿ20), ಕೃನಾಲ್ ಪಾಂಡ್ಯ, ಪ್ರಸಿದ್ಧಕೃಷ್ಣ (ಇಬ್ಬರೂ ಏಕದಿನ).

    *ಮೊದಲ ಪಂದ್ಯದಲ್ಲಿ ಪ್ರಸಿದ್ಧಕೃಷ್ಣ ತೋರಿದ ನಿರ್ವಹಣೆಯಿಂದ ನನಗೆ ಯಾವುದೇ ಅಚ್ಚರಿಯಾಗಿಲ್ಲ. ಯಾಕೆಂದರೆ ಕರ್ನಾಟಕದಿಂದ ಭಾರತ ತಂಡದ ಪರ ಆಡುವ ಮುಂದಿನ ಆಟಗಾರ ಪ್ರಸಿದ್ಧಕೃಷ್ಣ ಎಂಬ ಬಗ್ಗೆ ನನಗೆ ವಿಶ್ವಾಸವಿತ್ತು. ನಾವಿಬ್ಬರು ಒಂದೇ ಬ್ಯಾಚ್‌ನವರಲ್ಲ. ಆದರೆ ಜೂನಿಯರ್ ಕ್ರಿಕೆಟ್ ಮತ್ತು ನೆಟ್ಸ್‌ನಲ್ಲಿ ಅವರ ಬೌಲಿಂಗ್ ಸಾಕಷ್ಟು ಬಾರಿ ನನ್ನ ಗಮನಸೆಳೆದಿದೆ. ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಜತೆಗೆ ಆಡಿದಾಗ ಅವರೊಬ್ಬ ಧೈರ್ಯಶಾಲಿ ಹುಡುಗ ಎಂಬುದನ್ನು ಅರಿತಿರುವೆ.
    | ಕೆಎಲ್ ರಾಹುಲ್

    ಮದುವೆ ಕಾರಣ ನೀಡಿ ಆರ್‌ಸಿಬಿ ತಂಡದ ಆರಂಭಿಕ ಪಂದ್ಯಕ್ಕೆ ಈ ಸ್ಪಿನ್ನರ್ ಗೈರು

    ‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts