More

    ಬೇಲೂರು ಕ್ಷೇತ್ರದಲ್ಲಿ 270 ಮತಗಟ್ಟೆಗಳು

    ಬೇಲೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ(ಮಾ.16) ಮರು ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳಿಗೆ ಅನ್ವಯಿಸುತ್ತದೆ ಎಂದು ಬೇಲೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಎನ್.ಮಂಜುನಾಥ್ ಹೇಳಿದರು.

    ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 1,99,992 ಮತದಾರರಿದ್ದಾರೆ. ಇದರಲ್ಲಿ 1,00,158 ಪುರುಷರು ಹಾಗೂ 99,834 ಮಹಿಳಾ ಮತದಾರರು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮಾ.28ರವರೆಗೆ ಅವಕಾಶವಿದೆ ಎಂದರು.

    ಕ್ಷೇತ್ರದಲ್ಲಿ ಒಟ್ಟು 270 ಮತಗಟ್ಟೆಗಳಿದ್ದು, 81 ಸೂಕ್ಷ್ಮ, 189 ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಈ ಹಿಂದಿನ ಚುನಾವಣೆಯಲ್ಲಿ 80 ವರ್ಷದವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶವಿತ್ತು. ಆದರೆ ಈ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ 2,049 ಮತದಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇವರಲ್ಲಿ 783 ಪುರುಷರು, 1266 ಮಹಿಳೆಯರಿದ್ದಾರೆ. 3,594 ಜನ ಅಂಗವಿಕಲರಿದ್ದು, ಇವರಲ್ಲಿ 2,187ಪುರುಷರು, 1,407 ಮಹಿಳೆಯರಿದ್ದಾರೆ. ಇವರಿಗೂ ಮನೆಯಲ್ಲೇ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

    ತಾಲೂಕಿನ ಚನ್ನಾಪುರ, ಚೀಕನಹಳ್ಳಿ, ಜಾವಗಲ್ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕ್ಷೇತ್ರದೊಳಗೆ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುವುದು. ನೀತಿ ಸಂಹಿತೆಗೆ ಸಂಬಂಧಿಸಿದಂತೆ ದೂರುಗಳನ್ನು ಪರಿಶೀಲಿಸಲು ಒಟ್ಟು 18 ತಂಡಗಳನ್ನು ರಚಿಸಲಾಗಿದೆ. ಎಸ್‌ಎಸ್‌ಟಿ 3 ಹಾಗೂ ಚೆಕ್‌ಪೋಸ್ಟ್ 9 ತಂಡ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲಿದೆ. ಚೆಕ್‌ಪೋಸ್ಟ್‌ನಲ್ಲಿ ಸಿಸಿ ಟಿವಿ ಮತ್ತು ವಿಡಿಯೋ ಮಾಡುವುದಕ್ಕೆ 2 ತಂಡ ನಿಯೋಜಿಸಲಾಗಿದೆ ಎಂದು ವಿವರಿಸಿದರು.

    ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ಮತಗಟ್ಟೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಸಾರ್ವಜನಿಕರು ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಮಾಹಿತಿಗಾಗಿ ಕಂಟ್ರೋಲ್ ರೂಂ 08177-230800 ಕರೆ ಮಾಡಬಹುದು. ಚುನಾವಣಾ ಸಂಬಂಧಿತ ವೆಬ್‌ಪೋರ್ಟ್‌ಲ್‌ಗಳ ನಿರ್ವಹಣೆಗಾಗಿ ತಾಂತ್ರಿಕ ತಂಡ ರಚಿಸಲಾಗಿದ್ದು ಇಲ್ಲಿಯೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸಭೆ, ಸಮಾರಂಭ, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮ ಅಥವಾ ಪ್ರಚಾರಕ್ಕೆ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದರು.ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಈಗಾಗಲೇ ಎಲ್ಲ ಬ್ಯಾನರ್, ಪೋಸ್ಟರ್ಸ್‌, ಫ್ಲೆಕ್ಸ್, ಬಂಟಿಂಗ್ಸ್‌ಗಳನ್ನು ತೆಗೆಯಲು ಆದೇಶವಾಗಿದೆ. ಮೊದಲ ಹಂತದಲ್ಲಿ ತಾಲೂಕಿನ 37 ಗ್ರಾಮ ಪಂಚಾಯಿತಿಯಲ್ಲೂ 37 ತಂಡ ರಚಿಸಲಾಗಿದ್ದು, ಎಲ್ಲವನ್ನೂ ತೆಗೆಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts