More

    ವಿಜೃಂಭಣೆಯ ದೊಡ್ಡ ತೇರು

    ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವದ ನಂತರ ಭಾನುವಾರ ನಾಡಿನ ದಿವ್ಯ ರಥೋತ್ಸವವು (ದೊಡ್ಡ ತೇರು)ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

    ದೊಡ್ಡ ತೇರು ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಸಂಬಂಧಿಸಿದ ನಾಡ ಪಟೇಲರು, ದೇವರ ತನದ ಪಟೇಲರು ಹಾಗೂ ವಿವಿಧ ಗ್ರಾಮಗಳ ಪಟೇಲರುಗಳನ್ನು ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿಯಿಂದ ಪಟ್ಟಣ ಸಮೀಪದ ವಿಷ್ಣು ಸಮುದ್ರ ಕಲ್ಯಾಣಿ ಸಮೀಪ ಸ್ವಾಗತಿಸಿ ಮೆರವಣಿಗೆಯಲ್ಲಿ ರಥದವರೆಗೂ ಕರೆ ತರಲಾಯಿತು.

    ನಾಡ ಪಟೇಲರು ಮಂಗಳವಾದ್ಯದೊಂದಿಗೆ ಸಂಪ್ರದಾಯದಂತೆ ಗೌರವ ವಂದನೆ ಸ್ವೀಕರಿಸಿದ ನಂತರ ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥವನ್ನು ಎಳೆದು ಕೃತಾರ್ಥರಾದರು.

    ಶನಿವಾರ ದಿವ್ಯ ಬ್ರಹ್ಮ ರಥೋತ್ಸವದಂದು ರಥವನ್ನು ಮೋಹಿನಿ ಭಸ್ಮಾಸುರ ಮೂಲೆವರೆಗೂ ಭಕ್ತರು ಎಳೆದು ನಿಲ್ಲಿಸಿದ್ದರು. ಆದರೆ ಭಾನುವಾರ ನಾಡಿನ ದಿವ್ಯ ರಥೋತ್ಸವದ ಅಂಗವಾಗಿ ರಥವನ್ನು ದೇಗುಲದ ಮೂರು ದಿಕ್ಕುಗಳಲ್ಲೂ ಎಳೆದು ಮೂಲ ಸ್ಥಾನಕ್ಕೆ ತಂದು ನಿಲ್ಲಿಸಿ ದೇವರಿಗೆ ಘೋಷಣೆಗಳನ್ನು ಕೂಗಿ ಭಕ್ತರು ಹರ್ಷ ವ್ಯಕ್ತಪಡಿಸಿದರು.

    ದಿವ್ಯ ರಥೋತ್ಸವ ಸಂದರ್ಭ ಸ್ವಲ್ಪಮಟ್ಟಿಗೆ ನೂಕು ನುಗ್ಗಲು ಉಂಟಾಯಿತು. ಕೆಲ ಭಕ್ತರು ಹರಕೆ ರೂಪದಲ್ಲಿ ರಥದ ಮೇಲೆ ಬಾಳೆ ಹಣ್ಣು, ದವನ ಹಾಗೂ ಕಾಳು ಮೆಣಸು ಎಸೆದು ಭಕ್ತಿ ಪ್ರದರ್ಶಿಸಿದರು. ರಥೋತ್ಸವ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
    ರಥೋತ್ಸವದಲ್ಲಿ ಶಾಸಕ ಎಚ್.ಕೆ.ಸುರೇಶ್, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ಯೋಗಿಶ್ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು.

    ಭಕ್ತರಿಗೆ ಪ್ರಸಾದ: ಕಳೆದ 26 ವರ್ಷದಿಂದ ಭಕ್ತರಿಗೆ ಪ್ರಸಾದ ವಿತರಿಸಿಕೊಂಡು ಬರುತ್ತಿದ್ದ ಅಡುಗೆ ಕಂಟ್ರಾಕ್ಟರ್ ನಂದಕುಮಾರ್ ಈ ವರ್ಷವೂ ಮೊಸರನ್ನ, ಪೊಂಗಲ್ ವಿತರಿಸಿದರು. ದೇಗುಲ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಸಂಘ- ಸಂಸ್ಥೆಗಳಿಂದ ಪಾನಕ, ಮಜ್ಜಿಗೆ, ಪ್ರಸಾದ ವಿತರಿಸಲಾಯಿತು. ರಥ ಮೂಲ ಸ್ಥಾನಕ್ಕೆ ಬಂದು ನಿಂತ ನಂತರ ನಾಡ ಪಟೇಲರು ಸೇರಿದಂತೆ ಇನ್ನಿತರ ಗಣ್ಯರಿಗೆ, ಪ್ರಮುಖರಿಗೆ ದೇಗುಲದ ವತಿಯಿಂದ ಗೌರವ ಸಮರ್ಪಿಸಲಾಯಿತು. ರಥೋತ್ಸವ ಸಂದರ್ಭ ರಥದ ಮೇಲೆ ಎಸೆದ ಬಾಳೆ ಹಣ್ಣು, ದವನ ಸೇರಿದಂತೆ ಸ್ಥಳದಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಪುರಸಭೆ ಸಿಬ್ಬಂದಿ ತಕ್ಷಣವೇ ಸ್ವಚ್ಛಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts