More

    26.74 ಲಕ್ಷ ಆಭರಣ, ನಗದು ವಶ, 14 ಆರೋಪಿಗಳ ಬಂಧನ ನೆಲಮಂಗಲ ಉಪವಿಭಾಗದ ಪೊಲೀಸರ ಕಾರ್ಯಾಚರಣೆ

    ನೆಲಮಂಗಲ: ನೆಲಮಂಗಲ ಪೊಲೀಸ್ ಉಪವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು, ರಸ್ತೆ ದರೋಡೆ ಸೇರಿ ಹಲವು ಪ್ರಕರಣ ಭೇದಿಸಿರುವ ಪೊಲೀಸರು 14 ಆರೋಪಿಗಳನ್ನು ಬಂಧಿಸಿ, 26.74 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿರುವುದಾಗಿ ಎಸ್‌ಪಿ ಡಾ.ಕೆ. ಕೋನ ವಂಶಿಕೃಷ್ಣ ತಿಳಿಸಿದರು. ನಗರ ಠಾಣಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಉಪವಿಭಾಗದ ವ್ಯಾಪ್ತಿಯ ನೆಲಮಂಗಲ ನಗರ, ಗ್ರಾಮಾಂತರ, ದಾಬಸ್‌ಪೇಟೆ ಹಾಗೂ ಮಾದನಾಯನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 10 ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ 14 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಬೆಂಗಳೂರು ಡಿಜೆ ಹಳ್ಳಿ ನಿವಾಸಿ ಸಯ್ಯದ್ ಅಮಾನ್ (28), ಜಹೀರ್ ಅಬ್ಬಾಸ್ (29), ಅಲ್ಲಾಭಕ್ಷ್ (26), ಇಮ್ರಾನ್ ಖಾನ್ (32) ಬಂಧಿತರಲ್ಲಿ ಪ್ರಮುಖರು. ಈ ತಂಡ 20ಕ್ಕೂ ಹೆಚ್ಚು ಮನೆಗಳ್ಳತನ, ಸುಲಿಗೆ, ಗಾಂಜಾ ಮಾರಾಟ, ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿತ್ತು.

    8 ಲಕ್ಷ ರೂ. ನಗದು ದೋಚಿದ್ದ ತಂಡ: ಇತ್ತೀಚೆಗೆ ಕನಕಪುರ ನಿವಾಸಿ ಜಾವೀದ್ ಎಂಬುವವರು ಎಮ್ಮೆ ತರಲೆಂದು 8 ಲಕ್ಷ ರೂ. ತೆಗೆದುಕೊಂಡು ಕ್ಯಾಂಟರ್‌ನಲ್ಲಿ ತೆರಳುತ್ತಿದ್ದರು. ಜೂ.14ರಂದು ಇವರ ವಾಹನ ಅಡ್ಡಗಟ್ಟಿದ್ದ ಡಿಜೆ ಹಳ್ಳಿ ತಂಡ, ಮಾರಕಾಸಗಳನ್ನು ತೋರಿಸಿ, ಬೆದರಿಸಿ 8 ಲಕ್ಷ ರೂ. ನಗದು ದೋಚಿತ್ತು. ಈಗ ತಂಡವನ್ನು ಬಂಧಿಸಿ, 8 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

    ಗಾಂಜಾ ಮಾರಾಟಗಾರರ ಬಂಧನ: ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಡಿಶಾದಿಂದ ಗಾಂಜಾ ತರಿಸಿಕೊಂಡು ಮಾರುತ್ತಿದ್ದ ಬೆಂಗಳೂರಿನ ಹೇರೋಹಳ್ಳಿ ನಿವಾಸಿ ಸುದರ್ಶನ್ (22), ಬೆಂಗಳೂರಿನ ಮುದ್ದಿನಪಾಳ್ಯದ ವಿಶ್ವನಾಥ್ ಜತೆಗೆ ಒಡಿಶಾದಿಂದ ಗಾಂಜಾ ರವಾನಿಸುತ್ತಿದ್ದ ದಿವಾಕರ ದಳಪತಿಯನ್ನು ಬಂಧಿಸಲಾಗಿದೆ. ಇವರಿಂದ 3 ಲಕ್ಷ ರೂ. ಮೌಲ್ಯದ 12 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಡಾ.ಕೋನ ವಂಶಿಕೃಷ್ಣ ವಿವರಿಸಿದರು.

    ಚೆಕ್‌ಪೋಸ್ಟ್ ನಿರ್ಮಾಣ: ರಾಜ್ಯದ ವಿವಿಧ ಭಾಗಗಳಿಂದ ಕಸಾಯಿಖಾನೆಗೆ ಹಸುಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ 21 ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ತಾಲೂಕಿನಾದ್ಯಂತ 5 ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಕಸಾಯಿಖಾನೆಗೆ ಹಸುಸಾಗಣೆ ಮಾಡುತ್ತಿದ್ದ 3 ಪ್ರಕರಣಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. 33 ಹಸುಗಳನ್ನು ರಕ್ಷಿಸಿ, ಗೋಶಾಲೆಗೆ ಬಿಡಲಾಗಿದೆ ಎಂದು ಎಸ್‌ಪಿ ಹೇಳಿದರು.

    ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ: ಡಿವೈಎಸ್‌ಪಿ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಹರೀಶ್, ಎ.ವಿ. ಕುಮಾರ್, ಬಿ.ಎಸ್. ಮಂಜುನಾಥ್ ನೇತೃತ್ವದಲ್ಲಿ ಎಸ್‌ಐಗಳಾದ ಎಚ್.ಟಿ. ವಸಂತ್, ಎನ್.ಸುರೇಶ್, ದಾಳೇಗೌಡ, ಡಿ.ಆರ್. ಮಂಜುನಾಥ್ ಅವರಿದ್ದ ತಂಡ 10 ಪ್ರಕರಣಗಳನ್ನು ಭೇದಿಸಿ ನಗದು, ಆಭರಣ ವಶಪಡಿಸಿಕೊಂಡಿದ್ದಕ್ಕಾಗಿ ತಂಡದ ಸಿಬ್ಬಂದಿಯನ್ನು ಎಸ್‌ಪಿ ಡಾ. ಕೋನ ವಂಶಿಕೃಷ್ಣ ಶ್ಲಾಸಿದರು.

    ನೂತನ ಠಾಣಾ ಕಟ್ಟಡಕ್ಕೆ ಅನುದಾನ: ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ, ಗ್ರಾಮಾಂತರ, ಸಂಚಾರ ಠಾಣೆ, ಡಿವೈಎಸ್‌ಪಿ ಕಚೇರಿಗಳು ಬಾಡಿಗೆಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಕೇಂದ್ರ ವಲಯದ ಪೊಲೀಸ್ ಮಹಾನಿರ್ದೇಶಕ ಎಂ. ಚಂದ್ರಶೇಖರ್ ಗಮನಸೆಳೆದಿದ್ದು, ಕೇಂದ್ರ ವಲಯ ವ್ಯಾಪ್ತಿಯಲ್ಲಿ 100 ಠಾಣೆಗಳಿಗೆ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಈ ಕಾರ್ಯಕ್ಕಾಗಿ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ನೆಲಮಂಗಲ ಉಪವಿಭಾಗ ವ್ಯಾಪ್ತಿಯ ಗ್ರಾಮಾಂತರ ಠಾಣೆ ಹಾಗೂ ಸಂಚಾರ ಠಾಣೆಗಳ ಕಟ್ಟಡಕ್ಕೂ ಅನುದಾನ ಬಿಡುಗಡೆಯಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.
    ಎಸ್‌ಐಗಳಾದ ಎಚ್.ಟಿ. ವಸಂತ್, ಎನ್. ಸುರೇಶ್, ದಾಳೇಗೌಡ, ಡಿ.ಆರ್. ಮಂಜುನಾಥ್, ವಿ. ಅಂಜನ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts