More

    250 ಕೆರೆಗಳಿಗೆ ಹರಿಯಲಿದೆ ಜೀವಜಲ

    ಹಾನಗಲ್ಲ: ತಾಲೂಕಿನ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗೆ 503 ಕೋಟಿ ರೂ. ಮಂಜೂರಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆ. 24ರಂದು ಚಾಲನೆ ನೀಡಲಿದ್ದಾರೆ.

    ತಾಲೂಕಿನ ಉತ್ತರ ಭಾಗದ 162 ಹಾಗೂ ದಕ್ಷಿಣ ಭಾಗದ 88 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.

    ಬಾಳಂಬೀಡ ಗ್ರಾಮದ ಬಳಿ ಹರಿಯುತ್ತಿರುವ ವರದಾ ನದಿಯಿಂದ ತಾಲೂಕಿನ ಉತ್ತರ ಭಾಗದ 162 ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿದೆ.

    ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶದಿಂದ ಕೂಡಿದ ಈ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸುವ ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುವ ಹಂಬಲದಿಂದ ಶಾಸಕ ಸಿ.ಎಂ. ಉದಾಸಿ ಅವರು ಇದನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಗಳಿಗೆ ಸೇರಿದ 162 ಕೆರೆಗಳನ್ನು ವರ್ಷವಿಡೀ ತುಂಬಿಸಿಡುವ, ತನ್ಮೂಲಕ ಅಂತರ್ಜಲ ವೃದ್ಧಿಸುವ ಚಿಂತನೆ ಇಲ್ಲಿದೆ. ಈ ಪ್ರದೇಶದಲ್ಲಿ ವಾಡಿಕೆಯ ಮಳೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ 8-10 ವರ್ಷಗಳಿಂದ ಕೆರೆಗಳಿಗೆ ನೀರು ಬಾರದ್ದರಿಂದ ರೈತ ಸಮುದಾಯ ಆತಂಕಕ್ಕೀಡಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಗೂ ಕೃಷಿ ಬಳಕೆಗೆ ಸ್ಥಳೀಯವಾಗಿ ಕೆರೆಗಳನ್ನೇ ಅವಲಂಬಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಕೆರೆಗಳನ್ನು ತುಂಬಿಸಲು 386 ಕೋಟಿ ರೂ.ಗಳ ಯೋಜನೆ ರೂಪಿತಗೊಂಡಿದೆ. ಇದರಿಂದ ತಾಲೂಕಿನ 67 ಗ್ರಾಮಗಳ ನೀರಿನ ದಾಹ ತಣಿಯಲಿದೆ. ಈ 162 ಕೆರೆಗಳಲ್ಲಿ 1780 ಸಿಎಫ್​ಟಿ ನೀರಿನ ಪಾತ್ರವಿದ್ದು, ಪ್ರಸ್ತುತವಾಗಿ 1335 ಸಿಎಫ್​ಟಿ ನೀರನ್ನು ಹಿಡಿದಿಡಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

    ಈ ಯೋಜನೆಯಡಿ ತಾಲೂಕಿನ ಬಾಳಂಬೀಡ, ಹಾವಣಗಿ, ಅಕ್ಕಿಆಲೂರ, ಹುಣಸಿಕಟ್ಟಿ, ಬಾಳೂರು, ಹನುಮಾಪುರ, ಡೊಳ್ಳೇಶ್ವರ, ಕಲ್ಲಾಪುರ, ಯತ್ತಿನಹಳ್ಳಿ, ಮಲಗುಂದ ಯಲ್ಲಾಪುರ, ಕೊಂಡೋಜಿ, ವಡಗೇರಿ, ಶ್ಯಾಡಗುಪ್ಪಿ, ಅರಿಶಿಣಗುಪ್ಪಿ, ಶೇಷಗಿರಿ, ಆಡೂರು, ಕಾಲ್ವೆಯಲ್ಲಾಪುರ, ಚನ್ನಾಪುರ, ಕಂಚಿನೆಗಳೂರು, ಜಕ್ಕನಾಯ್ಕನಕೊಪ್ಪ, ನೆಲ್ಲಿಬೀಡು, ಶಂಕ್ರೀಕೊಪ್ಪ, ಹೋತನಹಳ್ಳಿ, ಅಕ್ಕಿವಳ್ಳಿ, ಸುರಳೇಶ್ವರ, ಕಾಡಶೆಟ್ಟಿಹಳ್ಳಿ, ಶಿರಮಾಪುರ, ಕುಂಟನಹೊಸಳ್ಳಿ, ಮಳ್ಳಿಗೇರಿ, ಹಾನಗಲ್ಲ, ನಾಗರವಳ್ಳಿ, ಚಿಕ್ಕೇರಿ, ಹಿರೇಕಣಗಿ, ಬಿದರಕೊಪ್ಪ, ಗೊಟಗೊಡಿ, ಗಾಜಿಪುರ, ಕೊಪ್ಪರಸಿಕೊಪ್ಪ, ನೆಗವಣಿಗಿ, ಕರಗುದರಿ, ಬೆಳಗಾಲಪೇಟ, ಹನಕನಹಳ್ಳಿ, ಯಳವಟ್ಟಿ, ಗುಂಡೂರು, ಮಾಸನಕಟ್ಟಿ, ಆಲದಕಟ್ಟಿ, ಬಿಂಗಾಪುರ, ವಳಗೇರಿ, ಮಹರಾಜಪೇಟ, ಯಳ್ಳೂರು, ಚೀರನಹಳ್ಳಿ, ಬೈಲವಾಳ, ಸಾತೇನಹಳ್ಳಿ, ರಾಮತೀರ್ಥ, ನಿಟಗಿನಕೊಪ್ಪ, ಯಳವಟ್ಟಿ, ನೆಲ್ಲಿಕೊಪ್ಪ, ಬೊಮ್ಮನಹಳ್ಳಿ, ಯಲಿವಾಳ, ಬೈಲವಾಳ, ಹುಲ್ಲತ್ತಿ, ಚೆನ್ನಹಳ್ಳಿ, ಗುಡಗುಡಿ, ಹನುಮಾಪುರ, ಚಂದಾಪುರ, ಬಾದಾಮಗಟ್ಟಿ ಮತ್ತು ದೇವರ ಹೊಸಪೇಟೆ ಗ್ರಾಮಗಳ ಕೆರೆಗಳಿಗೆ ಒಟ್ಟು 22 ಕಿ.ಮೀ.ಗಳ ಪೈಪ್​ಲೈನ್ ಅಳವಡಿಸಿ ರೈಸಿಂಗ್ ಮೇನ್ ಪೈಪ್ ಮೂಲಕ ನೀರು ತುಂಬಿಸಲಾಗುತ್ತದೆ.

    ಬೆಳಗಾವಿಯ ಆದಿತ್ಯ ನಿರ್ಮಾಣ ಸಂಸ್ಥೆಗೆ ಈ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು, 2 ವರ್ಷಗಳ ಕಾಲಮಿತಿ ನಿಗದಿಗೊಳಿಸಲಾಗಿದೆ.

    ದಕ್ಷಿಣ ಭಾಗದಲ್ಲಿ : ತಾಲೂಕಿನ ದಕ್ಷಿಣ ಭಾಗದ ಹಿರೇಕಾಂಶಿ ಏತ ನೀರಾವರಿ ಯೋಜನೆಯಡಿ ಒಂಬತ್ತು ಗ್ರಾಮಗಳ ರೈತರ ಕೃಷಿ ಭೂಮಿ ನೀರಾವರಿಗೊಳಪಡಲಿವೆ. ಈ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ವಾಡಿಕೆ ಮಳೆ 750 ಮಿ.ಮೀ.ಗಳಾಗಿರುವುದರಿಂದ ಕೆರೆಗಳು ತುಂಬಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲಿರುವ ಜಾನುವಾರು, ಜನವಸತಿಗೆ ನೀರು ಅಗತ್ಯವಾಗಿದೆ. ತಾಲೂಕಿನಲ್ಲಿ ಧರ್ವ-ವರದಾ ನದಿಗಳೆರಡು ಹರಿದಿದ್ದರೂ ರೈತರಿಗೆ ಕೃಷಿಗೆ ಪೂರಕವಾಗಿರಲಿಲ್ಲ. ಇದರಿಂದಾಗಿ ರೈತರು ಅಲ್ಪ ಮಳೆಯನ್ನಾಧರಿಸಿ ಬೆಳೆಗಳನ್ನು ಬೆಳೆಯುವ ಅನಿವಾರ್ಯತೆಯಿದೆ.

    ಈ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಗ್ರಾಮವಾದ ಗೊಂದಿಯಲ್ಲಿ ಹರಿದಿರುವ ವರದಾ ನದಿಯಿಂದ ನೀರೆತ್ತಿ ಸುತ್ತಲಿನ 88 ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿ ಮಂಜೂರಾತಿ ಪಡೆಯಲಾಗಿದೆ. ಶಾಸಕ ಸಿ.ಎಂ. ಉದಾಸಿ ಅವರ ಅವಿರತ ಶ್ರಮ, ಕಾಳಜಿಯ ಫಲವಾಗಿ ಇಂದು ಮುಖ್ಯಮಂತ್ರಿಗಳಿಂದ ಈ ಕಾಮಗಾರಿಯ ಶಂಕುಸ್ಥಾಪನೆ ನೆರವೇರಲಿದೆ.

    117 ಕೋಟಿ ರೂ.ಗಳ ಈ ಯೋಜನೆಯಿಂದ 88 ಕೆರೆಗಳ 439 ಸಿಎಫ್​ಟಿ ಕ್ಷೇತ್ರದಲ್ಲಿ ಸದ್ಯ 329 ಸಿಎಫ್​ಟಿ ಕ್ಷೇತ್ರದಲ್ಲಿ ನೀರನ್ನು ಹಿಡಿದಿಡಲು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಡಿ ಗೊಂದಿ, ಹಿರೇಕಾಂಶಿ, ಚಿಕ್ಕಾಂಶಿ ಹೊಸೂರ, ಕ್ಯಾಸನೂರು, ಮಕರವಳ್ಳಿ, ಶಿರಗೋಡ, ಮೂಡೂರು, ಜಂಗಿನಕೊಪ್ಪ ಮತ್ತು ಅಜಗುಂಡಿಕೊಪ್ಪ ಗ್ರಾಮಗಳ ಕೆರೆಗಳು ತುಂಬಿ ನೀರಾವರಿಗೆ ಸದುಪಯೋಗವಾಗಲಿದೆ. ಇದಕ್ಕಾಗಿ ಗೊಂದಿಯ ವರದಾನದಿ ತಟದಲ್ಲಿ ನೀರೆತ್ತುವ ಘಟಕವನ್ನು ಸ್ಥಾಪಿಸಿ, 11 ಕಿ.ಮೀ.ವರೆಗೆ ಪೈಪ್​ಲೈನ್ ಅಳವಡಿಸಲಾಗುತ್ತಿದೆ.

    ಮೆ.ಗ್ರೋಮಾ ಇನ್ಪಾ›ಸ್ಟ್ರಕ್ಚರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಒಂದೂವರೆ ವರ್ಷಗಳಲ್ಲಿ ಕಾಲಮಿತಿ ನೀಡಲಾಗಿದೆ.

    ಬಾಳಂಬೀಡದಲ್ಲಿ ಕಾರ್ಯಕ್ರಮ

    ಹಾನಗಲ್ಲ: ತಾಲೂಕಿನ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಫೆ. 24ರಂದು ಹಾನಗಲ್ಲ ತಾಲೂಕಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಹೆಲಿಕಾಪ್ಟರ್ ಮೂಲಕ ಅಕ್ಕಿಆಲೂರಿಗೆ ಆಗಮಿಸುವರು. ನಂತರ ಬಾಳಂಬೀಡದ ಪ್ರವಾಸಿ ಮಂದಿರದ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ಸಿ.ಎಂ. ಉದಾಸಿ, ನೆಹರೂ ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ವಿಪ ಸದಸ್ಯ ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಜಿಪಂ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಬಾಳಂಬೀಡ ಗ್ರಾಪಂ ಅಧ್ಯಕ್ಷ ಪ್ರಕಾಶ ಪಾಲ್ಗೊಳ್ಳುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts