More

    ಆ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ…; ಕಿಚ್ಚನ ಸಿನಿಪಯಣಕ್ಕೆ 25ರ ಹರೆಯ..

    ‘ಕಿಚ್ಚ’ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಆ ಸಂಭ್ರಮಕ್ಕೆ ‘ವಿಕ್ರಾಂತ್ ರೋಣ’ ಚಿತ್ರತಂಡ ವಿಶ್ವದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಟೈಟಲ್ ಲೋಗೋ ಬಿಡುಗಡೆ ಮಾಡಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಚಿತ್ರತಂಡವು ದುಬೈನಲ್ಲಿ ಬೀಡುಬಿಟ್ಟಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ದುಬೈನಿಂದಲೇ ವರ್ಚುವಲ್ ಸುದ್ದಿಗೋಷ್ಠಿ ಮಾಡಿದ ಸುದೀಪ್, 25 ವರ್ಷಗಳ ಸಿನಿಯಾನವನ್ನು ನೆನಪಿಸಿಕೊಂಡಿದ್ದಾರೆ.

    • 25 ವರ್ಷದ ಪಯಣವನ್ನು ನಾನು ಯಾವತ್ತೂ ರಿವೈಂಡ್ ಮಾಡಲ್ಲ. ಎಲ್ಲವೂ ನಿನ್ನೆ ಮೊನ್ನೆ ನಡೆದಂತಿದೆ. ಕಂಠೀರವದಲ್ಲಿ ಅವತ್ತು ಮೇಕಪ್ ಮಾಡಿದ ಗುರು, ಇವತ್ತೂ ನನಗೆ ಬಣ್ಣ ಹಚ್ಚುತ್ತಿದ್ದಾರೆ. ಇವೆಲ್ಲದರ ನಡುವೆ ಆವತ್ತು ನನ್ನ ಗಮನ ಮಾತ್ರ, ಒಂದು ಹೌಸ್ ಫುಲ್ ಪ್ರದರ್ಶನದತ್ತ ನೆಟ್ಟಿತ್ತು. ಹುಚ್ಚ ಸಿನಿಮಾ ಅದನ್ನು ನನಸು ಮಾಡಿತು. ಮೇನಕಾ ಚಿತ್ರಮಂದಿರದಲ್ಲಿ ಕೇವಲ ಐದು ಜನರಿದ್ದಾಗ ಎಲ್ಲವೂ ಮುಗಿಯಿತು ಅಂದುಕೊಂಡಿದ್ದೆ. ಅದಾದ ಬಳಿಕ ಬಂದ ಜನಸಾಗರ ಒಂದು ಕ್ಷಣ ನನ್ನನ್ನು ಕನಸೋ ನನಸೋ ಎನ್ನುವಂತೆ ಮಾಡಿತು. ಪ್ರೇಕ್ಷಕರ ಜತೆಗೆ ಸಿನಿಮಾ ನೋಡಿ, ಅವರ ಜತೆಗೆ ಕೆಳಗಿಳಿದೆ. ಯಾರೋ ಒಬ್ಬರು ಕಿಚ್ಚ ಕಿಚ್ಚ … ಅಂದ್ರು, ಎಲ್ಲರೂ ಸೇರಿ ಕಾರ್ ಮೇಲೆ ಎತ್ತಿ ಕೂರಿಸಿದರು. ಆ ನೆನಪು ಇನ್ನೂ ಹಾಗೇ ಇದೆ. 10 ಸಾವಿರ ಬುರ್ಜ್ ಖಲೀಫಾ ಕೊಟ್ರೂ ಆ ಒಂದು ಕ್ಷಣವನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಅಂದಿನಿಂದ ಪ್ರಾರಂಭವಾದ ಆ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ. ಅದನ್ನು ನನ್ನ ಜೀವನದ್ದುದ್ದಕ್ಕೂ ಕ್ಯಾರಿ ಮಾಡುತ್ತೇನೆ.
    • ‘ಮೈ ಆಟೋಗ್ರಾಫ್’ ಚಿತ್ರ ರಿಲೀಸ್ ಆದ ದಿನ ಮನೆಯಿಂದ ಹೊರಡುವಾಗ ನಾನು ಪ್ರಿಯಾಗೆ ಹೇಳಿದ್ದೆ. ಒಂದುವೇಳೆ ಈ ಸಿನಿಮಾ ಓಡದೆ ಇದ್ದರೆ, ಸೂಟ್​ಕೇಸ್ ಹಿಡಿದು ರೆಡಿಯಾಗಿರು ಅಂತ. ಏಕೆಂದರೆ,ಏನಾದರೂ ಆ ಸಿನಿಮಾ ಸೋತಿದ್ದರೆ ನಾನು ಇವತ್ತು ಇಲ್ಲಿ ಇರುತ್ತಿರಲಿಲ್ಲ. ಆದರೆ, ಪ್ರಿಯಾ ಮಾತ್ರ ಆವತ್ತು, ‘ನಾವು ಎಲ್ಲಿಯೂ ಹೋಗಬೇಕಿಲ್ಲ. ಸೂಟ್​ಕೇಸ್ ಪ್ಯಾಕ್ ಮಾಡಲ್ಲ, ಒಳ್ಳೇ ಚಿತ್ರ ಮಾಡಿದ್ದೀರಿ’ ಎಂದು ಹೇಳಿದ್ದರು. ಆ ಸಿನಿಮಾ ನನ್ನ ಕರಿಯರ್​ಗೆ ಬೇರೆಯದೇ ಚಹರೆಯನ್ನು ನೀಡಿತು.
    • ಆವತ್ತು ಸಂತೋಷ್ ಥಿಯೇಟರ್​ನಲ್ಲಿ ‘ಮೈ ಆಟೋಗ್ರಾಫ್’ ಚಿತ್ರದ ಮೊದಲ ಶೋ ಕಲೆಕ್ಷನ್ ಪಟ್ಟಿ ಬಂದಾಗ, ಚಿತ್ರಮಂದಿರದ ಮುಂಭಾಗದ ಒಂದು ಬದಿಯಲ್ಲಿ ಬಿಕ್ಕಳಿಸಿ ಅತ್ತಿದ್ದೆ. ಆ ಸಿನಿಮಾ ಸಲುವಾಗಿ ನಾನೊಬ್ಬನೇ ಅಲ್ಲ, ಸಾಕಷ್ಟು ಮಂದಿ ಶ್ರಮ ಹಾಕಿದ್ದರು. ಇವೆಲ್ಲದಕ್ಕಿಂತ ಮುಖ್ಯಾವಾದುದು ಏನೆಂದರೆ, ನಮ್ಮ ತಂದೆಯ ಹೆಸರಿನಲ್ಲಿದ್ದ ಮನೆಯ ಪತ್ರಗಳನ್ನು ಅಡ ಇಟ್ಟು ಸಿನಿಮಾ ಮಾಡಿದ್ದೆ. ಯಾಕೆಂದರೆ, ನನಗೆ ಬೇರೆ ವಿಧಿಯೇ ಇರಲಿಲ್ಲ.
    • ಆರಂಭದಲ್ಲಿ 20 ಅಡಿಯ ಕಟೌಟ್ ನಿಂತರೆ ಸಾಕಪ್ಪ ಎಂದುಕೊಂಡಿದ್ದೆ. ಆ ಕಟೌಟ್​ಗೆ ಹಾರ ಬಿತ್ತು. ಅಲ್ಲೊಂದು ಅಭಿಮಾನಿ ಬಳಗ ಶುರುವಾಯ್ತು. ಆ ಬಳಗ ಕುಟುಂಬವಾಗಿ ಪರಿವರ್ತನೆಯಾಯ್ತು. ನನ್ನ ಶ್ರಮ ಇಷ್ಟು ಸಾಕಾಗುವುದಿಲ್ಲ ಎಂದು ಮತ್ತಷ್ಟು ಶ್ರಮ ಹಾಕಲು ಶುರು ಮಾಡಿದೆ. ಪರಭಾಷೆಗಳಿಂದಲೂ ಅವಕಾಶಗಳು ಸಿಕ್ಕವು. ಇಷ್ಟೆಲ್ಲ ಮಾಡಲು ನನಗೆ ಬೆನ್ನ ಹಿಂದೆ ನಿಂತವರು ನನ್ನ ನಾಡಿನ ಜನರು. ಅವರು ಮೇಲೆತ್ತಲಿಲ್ಲ ಎಂದಿದ್ದರೆ, ಈ ಮಟ್ಟದ ಬೆಳವಣಿಗೆ ಸಾಧ್ಯವಿರಲಿಲ್ಲ.
    • ಸಿನಿಮಾ ವಿಚಾರವಾಗಲಿ, ವೈಯಕ್ತಿಕ ವಿಚಾರವಾಗಲಿ ನಾನು ಯಾವುದನ್ನೂ ಪ್ಲಾನ್ ಮಾಡಲ್ಲ. ಆದರೆ, ಇತ್ತೀಚಿನ ಸಿನಿಮಾ ಬಗ್ಗೆ ಪ್ಲಾನಿಂಗ್ ನಡೆಯುತ್ತಿದೆ. ಮಾರ್ಕೆಟಿಂಗ್ ಸ್ಟ್ರಾಟಜಿ ಸೇರಿ ಕೆಲವನ್ನು ಪ್ಲಾನ್ ಮಾಡುತ್ತಿದ್ದೇನೆ.
    • ನಾಯಕನಾಗಿ ನಟಿಸುವುದರ ಜತೆಗೆ ಖಳ ಪಾತ್ರಗಳೂ ನನ್ನನ್ನು ಅರಸಿ ಬಂದವು. ಹಾಗಂತ ಅದನ್ನು ನಾನು ಕೈ ಬಿಡಲಿಲ್ಲ. ನನ್ನ ದ್ವಿಪಾತ್ರದ ‘ವಾಲಿ’ ಸಿನಿಮಾದಲ್ಲಿ ಖಳನಾಗಿ ಕಾಣಿಸಿಕೊಂಡೆ, ಅದಾದ ಬಳಿಕ ‘ಸ್ವಾತಿಮುತ್ತು’ ಸಿನಿಮಾದಲ್ಲಿ 70 ವರ್ಷದ ವೃದ್ಧನ ಪಾತ್ರವನ್ನೂ ಮಾಡಿದ್ದೇನೆ.
    • ‘ಫ್ಯಾಂಟಮ್ ಸಿನಿಮಾ ವಿಕ್ರಾಂತ್ ರೋಣ ಆಗಿ ಬದಲಾಗಿದೆ. ಏನಾದರೊಂದು ಹೊಸದನ್ನೇ ಮಾಡಬೇಕೆಂದಾಗ ನಮ್ಮ ತಂಡ ಇದನ್ನು ಮುಂದಿಟ್ಟಿತು. ಕೇವಲ ಪ್ಲಾನ್ ಇದ್ದರೆ ಸಾಕಾಗಲ್ಲ. ಅದಕ್ಕೆ ಜಾಕ್ ಮಂಜು ಅವರದ್ದು ದೊಡ್ಡ ಸಪೋರ್ಟ್. 1983ರಿಂದಲೂ ಆತನನ್ನು ನಾನು ಬಲ್ಲೆ. ಇದೀಗ ಅವನ ಮತ್ತು ನಮ್ಮೆಲ್ಲರ ಕನಸು ವಿಕ್ರಾಂತ್ ರೋಣ ಮೂಲಕ ತಯಾರಾಗಿದೆ. 2000 ಅಡಿಯ ಬೃಹತ್ ಕಟ್ಟಡದ ಮೇಲೆ ಚಿತ್ರದ ಟೈಟಲ್ ಲೋಗೋ ಸೇರಿ 180 ಸೆಕೆಂಡ್​ಗಳ ಸ್ನೀಕ್ ಪಿಕ್ ಇಂದು ಬಿತ್ತರವಾಗಲಿದೆ.
    • ಒಂದುವೇಳೆ ‘ಮೈ ಆಟೋಗ್ರಾಫ್’ ಸಿನಿಮಾ ಸೋತಿದ್ದರೆ, ನನ್ನ ಮುಂದಿನ ಸಿನಿಮಾಗಳ ಸ್ಥಿತಿ ಗಂಭೀರ ಆಗುತ್ತಿತ್ತೇನೋ. ಆದರೆ, ಹಾಗೇನೂ ಆಗಲಿಲ್ಲ. ಎಲ್ಲವೂ ಒಳ್ಳೆಯದೇ ಆಯಿತು. ‘ಆಟೋಗ್ರಾಫ್’ ನಂತರ ನನ್ನ ಬಳಿ ಹಲವು ಕಥೆಗಳಿದ್ದವು. ಉಪೇಂದ್ರ, ಪುನೀತ್ ಮತ್ತು ಶಿವಣ್ಣನಿಗೂ ಕಥೆ ಹೇಳಿದ್ದೆ. ದುಡ್ಡು ಹಾಕುವವರೂ ಬೇಕಿತ್ತು. ಹಾಗಾಗಿ ಅದ್ಯಾವುದೂ ಮುಂದುವರಿಯಲಿಲ್ಲ.
    • ಈ ಸುದೀರ್ಘ 25 ವರ್ಷದ ಅವಧಿಯಲ್ಲಿ ನಾನು ನಟಿಸಿರುವ ಸಿನಿಮಾಗಳ ಬಗ್ಗೆ ‘ಯಾಕಪ್ಪ ನಾನು ಈ ಸಿನಿಮಾದಲ್ಲಿ ನಟಿಸಿದೆ…’ ಎಂಬ ಭಾವ ನನ್ನನ್ನು ಕಾಡಿಲ್ಲ. ಯಾಕೆಂದರೆ, ಆ ಸಂದರ್ಭದಲ್ಲಿ ನಾನು ಆ ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟೇ ಸಿನಿಮಾ ಮಾಡಿರುತ್ತೇನೆ. ಹಾಗಾಗಿ ಎಲ್ಲವೂ ನನ್ನಿಷ್ಟದ ಪಾತ್ರಗಳೇ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts