More

    20 ದಿನ ಕಳೆದರೂ ಸುಳಿಯದ ರೈತರು

    ಹೀರಾನಾಯ್ಕ ಟಿ.
    ವಿಜಯಪುರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಸರು ಕಾಳು ಖರೀದಿಗೆ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದರೂ ರೈತರು ಮಾತ್ರ ಅವುಗಳತ್ತ ಸುಳಿದಿಲ್ಲ.

    ಸೆಪ್ಟೆಂಬರ್ 15ರಿಂದ ಹೆಸರು ನೋಂದಾಯಿಸಲು ಸರ್ಕಾರ ಅನುಮತಿ ನೀಡಿದೆ. 20 ದಿನ ಕಳೆದರೂ ರೈತರು ಹೆಸರು ನೋಂದಣಿ ಮಾಡಿಲ್ಲ.

    ಹೆಸರು ನೋಂದಣಿಗೆ ನಿರಾಸಕ್ತಿ
    2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳಿಗೆ (ಕ್ವಿಂಟಾಲ್‌ಗೆ) 7196 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಪ್ರಸ್ತುತ ದರ ಕ್ವಿಂಟಾಲ್‌ಗ 7100-7300 ರೂ. ದರ ಇರುವುದರಿಂದ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದಲ್ಲಿ ಸರ್ಕಾರದಿಂದ ಹಣ ಪಾವತಿಯಾಗುವುದು ತಡವಾಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಹಣ ತಕ್ಷಣವೇ ಕೈಗೆ ಸಿಗುವುದರಿಂದ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿಗೆ ನಿರಾಸಕ್ತಿ ವಹಿಸಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ, ವಿಜಯಪುರ, ತಾಳಿಕೋಟೆಯಲ್ಲಿ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ನವೆಂಬರ್ 15 ನೋಂದಣಿಗೆ ಕೊನೇ ದಿನವಾಗಿದೆ. ರೈತರು ಹೆಸರು ನೋಂದಾಯಿಸದಿರುವುದರಿಂದ ಎಪಿಎಂಸಿ ಅಧಿಕಾರಿಗಳು ಖರೀದಿ ಕೇಂದ್ರದ ಬಾಗಿಲನ್ನು ಇನ್ನೂ ತೆರೆದಿಲ್ಲ.

    ಇಳುವರಿ ಕುಂಠಿತ
    ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 3.8 ಲಕ್ಷ ಹೆಕ್ಟೇರ್‌ನಲ್ಲಿ ಅಂದಾಜು 1.37 ಲಕ್ಷ ಮೆಟ್ರಿಕ್ ಟನ್ ಹೆಸರು ಉತ್ಪಾದನೆ ಗುರಿ ಹೊಂದಲಾಗಿತ್ತು. ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಪ್ರಮುಖವಾಗಿ ಹೆಸರು ಕಾಳು ಬೆಳೆಯಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ 6,712 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 50,340 ಕ್ವಿಂಟಾಲ್ ಇಳುವರಿ ಪಡೆಯುವ ನಿರೀಕ್ಷೆ ಇತ್ತು. ಆದರೆ, ಕೆಲವು ಕಡೆಗಳಲ್ಲಿ ಅತಿವೃಷ್ಟಿ, ಇನ್ನೂ ಕೆಲವೆಡೆ ಅನಾವೃಷ್ಟಿಯಿಂದಾಗಿ ಇಳುವರಿ ಕುಂಠಿತಗೊಂಡಿದೆ. ಹೀಗಾಗಿ ಮಾರುಕಟ್ಟೆಗೆ ಹೆಸರುಕಾಳು ಬರುವುದು ಕಡಿಮೆ ಆಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

    ನೋಂದಣಿಗೆ ತಂತ್ರಾಂಶ ಅಡ್ಡಿ
    ಹೆಸರು ನೋಂದಾಯಿಸಲು ಫ್ರೂಟ್ ತಂತ್ರಾಂಶದಲ್ಲಿ ಮೊದಲಿಗೆ ರೈತರು ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಬೇಕು. ಆದರೆ ಈ ಬಾರಿ ಕರೊನಾ ಮಹಾಮಾರಿ ರೈತರ ಪಾಲಿಗೆ ಹೆಮ್ಮಾರಿ ಆಗಿದೆ. ರೈತರು ಹೊಲ, ಮನೆ ಬಿಟ್ಟು ಕಚೇರಿಗಳಿಗೆ ತೆರಳುವುದು ಕಡಿಮೆ ಆಗಿದೆ. ಅಲ್ಲದೆ, ಬೆಳೆ ಸಮೀಕ್ಷೆ ದತ್ತಾಂಶವನ್ನು ಕೂಡ ತಾಳೆ ಮಾಡಲಾಗುತ್ತದೆ. ಈ ಬಾರಿ ಬೆಳೆ ಸಮೀಕ್ಷೆ ಸ್ವಲ್ಪ ತಡವಾದ ಹಿನ್ನೆಲೆ ಖರೀದಿ ಕೇಂದ್ರದಲ್ಲಿ ನೋಂದಣಿಗೆ ಅಡ್ಡಿಯಾಗಿದೆ ಎಂದು ರೈತರು ಹೇಳುತ್ತಾರೆ.

    ಸರ್ಕಾರ ಹೆಸರುಕಾಳು ಖರೀದಿಗೆ ಅನುಮತಿ ನೀಡಿದೆ. ವಿಜಯಪುರ ಜಿಲ್ಲೆಯಲ್ಲಿ ಆರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ರೈತರು ಇನ್ನೂ ನೋಂದಣಿ ಮಾಡಿಕೊಂಡಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳಿಗೆ ಉತ್ತಮ ದರ ಸಿಗುತ್ತಿರುವುದರಿಂದ ರೈತರು ನೋಂದಣಿಗೆ ಮುಂದಾಗುತ್ತಿಲ್ಲ.
    ಎಂ.ಡಿ.ಚಬನೂರ, ಸಹಾಯಕ ನಿರ್ದೇಶಕ ಕೃಷಿ ಮಾರಾಟ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts