More

    2 ಸಾವಿರ ಪೌತಿ ಖಾತೆಗಳ ಬದಲಾವಣೆಗೆ ಕ್ರಮ : ಇದೊಂದು ಗಮನಾರ್ಹ ದಾಖಲೆಯಾಗಿದೆ ಎಂದು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಹೇಳಿಕೆ

    ಹಾಸನ : ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಪೌತಿ ಖಾತೆ ಆಂದೋಲನದಲ್ಲಿ ಎರಡು ಸಾವಿರ ಪೌತಿ ಖಾತೆಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದ್ದು ಇದೊಂದು ಗಮನಾರ್ಹ ದಾಖಲೆಯಾಗಿದೆ ಎಂದು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ತಿಳಿಸಿದರು.

    ಅರಕಲಗೂಡು ಪಟ್ಟಣದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಗೌರವಿಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳ ಅಲ್ಪ ಕಾಲದಲ್ಲಿ ಎರಡು ಸಾವಿರ ಪೌತಿ ಖಾತೆಗಳನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲೇ ಇದೊಂದು ದಾಖಲೆ ಎಂದರೂ ತಪ್ಪಾಗಲಾರದು ಎಂದರು.

    ರೈತರು ಕೃಷಿ ಕಾರ್ಯಕ್ಕೆ ತೆರಳಿದರೆ ಕೈಗೆ ಸಿಗುವುದಿಲ್ಲ ಎಂದು ಕಂದಾಯ ಇಲಾಖೆ ಸಿಬ್ಬಂದಿ ಬೆಳಗ್ಗೆ 7 ಗಂಟೆಗೆ ರೈತರ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿ ಪ್ರಸ್ತುತ ವಾರಸುದಾರರ ಹೆಸರಿಗೆ ಜಮೀನಿನ ಖಾತೆ ಬದಲಾವಣೆ ಮಾಡಿಕೊಡುವ ಕಾರ್ಯ ನಡೆಸಿದೆ. ಕೆಲವು ಗ್ರಾಮಗಳಲ್ಲಿ ಎರಡು ಮೂರು ತಲೆ ಮಾರುಗಳಿಂದ ಖಾತೆ ಬದಲಾವಣೆ ಆಗಿರಲಿಲ್ಲ. ಮರಣ ಪ್ರಮಾಣ ಪತ್ರ ತರಲು ನ್ಯಾಯಾಲಯಕ್ಕೆ ಅಲೆಯ ಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಿ ಬಡ ರೈತರಿಗೆ ಅನುಕೂಲ ಮಾಡಲು ಗ್ರಾಮಸ್ಥರ ಸಮ್ಮುಖದಲ್ಲಿ ಮಹಜರ್ ನಡೆಸಿ ವಂಶವೃಕ್ಷ ತಯಾರಿಸಿ ಪೌತಿ ಖಾತೆಯ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಪೌತಿ ಖಾತೆ ಬದಲಾಗದ ಕಾರಣ ರೈತರು ಕೃಷಿ ಸಾಲ ಪಡೆಯಲು, ಪಿಎಂ. ಕಿಸಾನ್ ಯೋಜನೆ ಸೇರಿದಂತೆ ವಿವಿಧ ಅನುದಾನಗಳನ್ನು ಪಡೆದುಕೊಳ್ಳಲು ತೀವ್ರ ತೊಂದರೆಯಾಗಿತ್ತು. ತಮ್ಮ ಕಚೇರಿಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಪೌತಿ ಖಾತೆ ಆಂದೋಲನದಲ್ಲಿ ಶ್ರಮಿಸಿದ್ದು ಅಭಿನಂದಿಸುವುದಾಗಿ ಹೇಳಿದರು. ಕಂದಾಯ ಇಲಾಖೆ ಸಿಬ್ಬಂದಿ ಅಂಕೇಗೌಡ, ಭಾಸ್ಕರ್, ಕೇಶವ ಮೂರ್ತಿ, ಮಾಲಾಶ್ರೀ, ಕಾವ್ಯ ಅವರನ್ನು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಅಭಿನಂದಿಸಿ ಗೌರವಿಸಿದರು. ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್. ರಮೇಶ್ ಕುಮಾರ್, ರಾಜಸ್ವ ನಿರೀಕ್ಷಕರಾದ ರಾಘವೇಂದ್ರ, ಶಶಿಧರ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts