More

    ದಲಿತ ಶಾಸಕನ ಅಂತರ್ಜಾತಿ ವಿವಾಹ: ತನಗಿಂತ 16 ವರ್ಷ ದೊಡ್ಡವನ ಪ್ರೀತಿಯ ಬಲೆಯಲ್ಲಿ ಯುವತಿ ಬಿದ್ದಿದ್ದೆ ರೋಚಕ!

    ಚೆನ್ನೈ: ಎಐಎಡಿಎಂಕೆ ಪಕ್ಷದ ದಲಿತ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಕುರಿತು ತಮಿಳುನಾಡಿನಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಮಗಳನ್ನು ಅಪಹರಿಸಿ, ಬಲವಂತವಾಗಿ ಮದುವೆ ಮಾಡಿದ್ದಾರೆಂದು ಯುವತಿಯ ತಂದೆ ಗಂಭೀರ ಆರೋಪ ಮಾಡಿದ್ದರೆ, ನಮ್ಮಿಬ್ಬರದ್ದು ಪ್ರೇಮ ವಿವಾಹ ಎಂದು ಶಾಸಕ ಪ್ರಭು ಸ್ಪಷ್ಟನೆ ನೀಡಿದ್ದಾರೆ. ಇದೀಗ ಪ್ರಕರಣ ಕೋರ್ಟ್​ ಮೆಟ್ಟಿಲೇರಿದೆ.

    ಅಕ್ಟೋಬರ್​ 5ರಂದು ಶಾಸಕ ಪ್ರಭು ಮತ್ತು ಯುವತಿ ಸೌಂದರ್ಯ ನಡುವೆ ವರನ ನಿವಾಸದಲ್ಲೇ ಮದುವೆ ನಡೆಯಿತು. ಮದುವೇ ದಿನವೇ ನಿವಾಸಕ್ಕೆ ಆಗಮಿಸಿದ ಸೌಂದರ್ಯ ತಂದೆ ಎಸ್​. ಸ್ವಾಮಿನಾಥನ್​ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದ್ದರು. ಅಲ್ಲದೆ, ಮೇಲ್ಜಾತಿಯವರಾದ ಸ್ವಾಮಿನಾಥನ್​ ಇಲ್ಲಿ ಜಾತಿಯ ಸಮಸ್ಯೆಯಿಲ್ಲ. ಮಗಳು ಮತ್ತು ಶಾಸಕನ ನಡುವಿನ ವಯಸ್ಸಿನ ಅಂತರವೇ ನಮ್ಮ ಕಳವಳಕ್ಕೆ ಕಾರಣ ಎಂದು ಕಣ್ಣೀರಿಟ್ಟಿದ್ದರು.

    ವಯಸ್ಸಿನ ಅಂತರ 16 
    ಅಂದಹಾಗೆ ಯುವತಿ ಸೌಂದರ್ಯ ವಯಸ್ಸು 19. ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಶಾಸಕ ಪ್ರಭು ಅವರಿಗೆ 35 ವರ್ಷ ವಯಸ್ಸಾಗಿದ್ದು, ಬಿಟೆಕ್​ ಪದವೀಧರರಾಗಿದ್ದಾರೆ. ಇಬ್ಬರ ನಡುವೆ 16 ವರ್ಷ ವಯಸ್ಸಿನ ಅಂತರವಿದೆ.

    ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಯುವತಿ ಸೌಂದರ್ಯ..!

    ಲಾಕ್​ಡೌನ್​ನಲ್ಲಿ ಲವ್​
    ಕಲಕುರಚಿಯ ಎಐಎಡಿಎಂಕೆ ಶಾಸಕ ಪ್ರಭು ಮತ್ತು ತಮ್ಮದೇ ಪಕ್ಷದ ಸದಸ್ಯ ಎಸ್​. ಸ್ವಾಮಿನಾಥನ್​ ನಡುವಿನ ಪರಿಚಯ 10 ಹಳೆಯದ್ದು. ಮನೆಗೆ ಬಂದಾಗಲೆಲ್ಲಾ ಸ್ವಾಮಿನಾಥನ್​ ಆತ್ಮೀಯವಾಗಿ ಪ್ರಭು ಅವರನ್ನು ಬರಮಾಡಿಕೊಳ್ಳುತ್ತಿದ್ದರು. ಪ್ರಭು ದಲಿತನಾಗಿದ್ದು, ಸ್ವಾಮಿನಾಥನ್​ ಮೇಲ್ಜಾತಿಯವರು. ಹೀಗಿದ್ದರೂ, ಇಬ್ಬರ ನಡುವೆ ಒಳ್ಳೆಯ ಬಾಂದವ್ಯ ಇತ್ತು. ಹೀಗೆ ಮನೆ ಹೋಗಿ ಬರುತ್ತಿದ್ದ ಪ್ರಭುಗೆ ಸೌಂದರ್ಯ ಫ್ರೆಂಡ್ಸ್​ ಆಗಿದ್ದರು. ಇದರ ನಡುವೆ ಮಾರ್ಚ್​ನಲ್ಲಿ ಲಾಕ್​ಡೌನ್​ ಆರಂಭವಾದ ಬಳಿಕ ಇಬ್ಬರಲ್ಲಿ ಪೇಮಾಂಕುರವಾಗಿದೆ. ಪ್ರೀತಿ ಶುರುವಾಗಿ ಕೆಲವೇ ತಿಂಗಳಾಗಿದ್ದರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದೇವೆಂದು ಸ್ವತಃ ಪ್ರಭು ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಬೆದರಿಸಿ ಬಲವಂತವಾಗಿ ಮದುವೆಯಾಗಿದ್ದಾರೆ
    ಮಗಳ ಮದುವೆ ವಿರೋಧಿಸಿ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿರುವ ಸ್ವಾಮಿನಾಥನ್​, ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದಾರೆ. ಪ್ರಭು ನನ್ನ ಮಗಳನ್ನು ಅಪಹರಿಸಿದ್ದಾರೆ. ಮೂರು ವರ್ಷಗಳಿಂದ ಅವಳೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು. ಆವಾಗಿನ್ನೂ ಆಕೆ ಅಪ್ರಾಪ್ತೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಮಗಳು ಮತ್ತು ಪ್ರಭು ನಡುವಿನ ವಯಸ್ಸಿನ ಅಂತರ ತುಂಬಾ ಇದೆ. ಹೀಗಾಗಿ ನಮಗೆ ಮದುವೆ ಇಷ್ಟವಿಲ್ಲ ಎಂದು ಸ್ವಾಮಿನಾಥ್​ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಮಗಳನ್ನು ಅಪಹರಿಸಿ, ಬೆದರಿಸಿ, ಆಮಿಷವೊಡ್ಡಿ ಮದುವೆಯಾಗಿದ್ದಾರೆಂದು ಆರೋಪ ಮಾಡಿದ್ದಾರೆ.

    ಯಾರು ಕೂಡ ನನ್ನನ್ನು ಅಪಹರಿಸಿಲ್ಲ
    ಮಂಗಳವಾರವಷ್ಟೇ ಪ್ರತಿಕ್ರಿಯೆ ನೀಡಿದ್ದ ಪ್ರಭು, ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದೇವೆ ಎಂದಿದ್ದರು. ಆದರೆ, ಸೌಂದರ್ಯ ಮಾತನಾಡಿರಲಿಲ್ಲ. ಇದೀಗ ಸೌಂದರ್ಯ ಸಹ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾರು ಕೂಡ ನನ್ನನ್ನು ಅಪಹರಿಸಿಲ್ಲ. ನಾವಿಬ್ಬರು ಪ್ರೀತಿಸುತ್ತಿದೆವು. ನಮ್ಮ ಪಾಲಕರು ಮದುವೆಗೆ ಒಪ್ಪದಿದ್ದಕ್ಕೆ ಮನೆ ಬಿಟ್ಟು ಬರಬೇಕಾಯಿತು. ನನ್ನ ಹೃದಯ ಬಯಸಿದಂತೆ ನನ್ನದೇ ಸ್ವಂತ ಭವಿಷ್ಯವನ್ನು ಹುಡುಕಿದೆ ಎಂಬ ಸಂತೋಷ ನನ್ನಲ್ಲಿದೆ. ನನ್ನ ತಂದೆಯ ಸಂಕಟದ ಬಗ್ಗೆಯೂ ನನಗೆ ನೋವಾಗಿದೆ. ನಮ್ಮ ಪಾಲಕರು ಅವರನ್ನು ಸಮಾಧಾನ ಪಡಿಸುತ್ತಾರೆಂಬ ಭರವಸೆ ಇದೆ ಎಂದು ಸೌಂದರ್ಯ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

    ಇದನ್ನೂ ಓದಿ: ಬಾಲ್ಯವಿವಾಹ ತ್ಯಜಿಸಿ ಪ್ರಿಯಕರನ ಕೈಹಿಡಿದ ಯುವತಿ: ನನ್ನ ಮಗಳನ್ನು ಬಿಟ್ಬಿಡು ಎಂದು ಕಾಲಿಗೆ ಬಿದ್ದು ಗೋಗರೆದ ತಂದೆ!

    ಪ್ರಭುಗೆ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿದೆ
    ಇನ್ನು ಸ್ವಾಮಿನಾಥನ್​ ನ್ಯಾಯಾಲಯಕ್ಕೆ ಸಲ್ಲಿಸಿರುವು ಅರ್ಜಿಯಲ್ಲಿ ಪ್ರಭು ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದು, ಪ್ರಭುಗೆ ತುಂಬಾ ಮಹಿಳೆಯರು ಜತೆ ಅಕ್ರಮ ಸಂಬಂಧ ಇದೆ. ತನ್ನ ಅಸಭ್ಯ ಹವ್ಯಾಸಗಳಿಂದ ಮುಕ್ತಿ ಹೊಂದಲು ಅಂದಿನಿಂದ ಪೂಜಾ ಪರಿಹಾರಕ್ಕಾಗಿ ನನ್ನ ಬಳಿ ಬರುತ್ತಿದ್ದ. ಅವರ ಕುಟುಂಬದವರ ಮನವಿಯಿಂದ ಪೂಜೆಯ ಮೂಲಕ ಪ್ರಭುಗೆ ನೆರವಾಗುತ್ತಿದ್ದೆ. ಒಮ್ಮೆ ನನ್ನ ಮಗಳೆಲ್ಲಿ ಎಂದು ಕೇಳಿದ್ದಕ್ಕೆ ಪ್ರಭು ತಂದೆ ನನಗೆ ಬೆದರಿಕೆ ಹಾಕಿ, ಸುಮ್ಮನೇ ಇರುವಂತೆ 1 ಕೋಟಿ ರೂ. ಹಣ ನೀಡಲು ಬಂದರು ಎಂದು ಆರೋಪಿಸಿದ್ದಾರೆ.

    ಕಾನೂನಿ ಮೂಲಕವೇ ಹೋರಾಡುತ್ತೇವೆ
    ಆರೋಪ ತಳ್ಳಿ ಹಾಕಿರುವ ಪ್ರಭು ಇದ್ಯಾವುದು ಸತ್ಯವಲ್ಲ. ಇನ್ನೊಬ್ಬರ ಚಾರಿತ್ರ್ಯ ವಧೆ ಮಾಡುವ ಕುತಂತ್ರವಾಗಿದೆ. ನಾನು ಅವರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆಕೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ. ನಾವಿಬ್ಬರು ಸಮುದಾಯ, ಜಾತಿ ಮತ್ತು ವಯಸ್ಸನ್ನು ನೋಡಿ ಲವ್​ ಮಾಡಲಿಲ್ಲ. ನಾನು 15 ವರ್ಷ ದೊಡ್ಡವನು ಎಂಬುದು ಅವಳಿಗೂ ಗೊತ್ತಿದೆ ಎಂದು ಪ್ರಭು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಲಯದಲ್ಲಿ ಹೋರಾಡಲು ಸಿದ್ಧನಿದ್ದೇನೆ. ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಆದರೆ, ಈ ವಿಚಾರವು ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿರುವುದರಿಂದ ನೋವಿದೆ ಎಂದಿದ್ದಾರೆ.

    ಇದನ್ನೂ ಓದಿ: ಈ ಊರಲ್ಲಿ ಒಕ್ಕಲಿಗರು ಬಿಟ್ಟು ಬೇರೆ ಸಮುದಾಯ ವಾಸಕ್ಕೆ ಬಂದ್ರೆ ಆಪತ್ತು ಖಚಿತ: ಇದು ನಿಗೂಢ ಗ್ರಾಮವಂತೆ..!?

    ಶಾಸಕನಾಗಿದ್ದರೂ ಜಾತಿ ವ್ಯವಸ್ಥೆ ಬಿಡಲಿಲ್ಲ
    ತುಂಬಾ ಕನಸುಗಳನ್ನು ಕಟ್ಟಿಕೊಂಡು ನಾನು ಸೌಂದರ್ಯ ಮದುವೆ ಆಗಿದ್ದೇವೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಬ್ಬರು ಸುಂದರ ವೈವಾಹಿಕ ಜೀವನ ನಡೆಸುತ್ತೇವೆ. ಆದರೆ, ಅವರ ಕುಟುಂಬದಿಂದಲೇ ಆಕೆಯ ವಿರುದ್ಧ ಮಾತುಗಳು ಕೇಳಿಬರುತ್ತಿರುವುದರಿಂದ ನಾನೀಗ ಅಸಹಾಕನಾಗಿದ್ದೇನೆ. ಜಾತಿ ವ್ಯವಸ್ಥೆಯ ಕಠಿಣತೆಯಿಂದ ಪಾರಾಗಲು ನನ್ನ ರಾಜಕೀಯ ಸ್ಥಾನಮಾನವೂ ಸಹ ಸಾಕಾಗಲಿಲ್ಲ ಎಂದು ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ತಮಿಳುನಾಡಿನಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದೆ ದಲಿತ ಶಾಸಕನ ಅಂತರ್ಜಾತಿ ವಿವಾಹ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts