More

    1500 ಬಸ್ ಸಂಚಾರಕ್ಕೆ ಸಿದ್ಧತೆ

    ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಕರಸಾ ಸಂಸ್ಥೆಯು 6 ಜಿಲ್ಲೆಗಳ 9 ವಿಭಾಗಗಳ ವ್ಯಾಪ್ತಿಯಲ್ಲಿ ಮಂಗಳವಾರ ಅಂದಾಜು 1500 ಬಸ್​ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಾಂದ್ರತೆಗೆ ಅನುಗುಣವಾಗಿ ಹಂತ ಹಂತವಾಗಿ ಬಸ್​ಗಳ ಓಡಾಟ ಹೆಚ್ಚಳವಾಗಲಿದೆ.

    ಬಸ್ ಸಂಚಾರ ಪುನರಾರಂಭಿಸಲು ರಾಜ್ಯ ಸರ್ಕಾರ ಸೋಮವಾರ ನಿರ್ದೇಶನ ನೀಡಿದ ಬಳಿಕ ಸಂಸ್ಥೆಯು ಸುರಕ್ಷಾ ಕ್ರಮಗಳೊಂದಿಗೆ ಬಸ್​ಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ಸಂಸ್ಥೆಯು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ಸಾಮಾನ್ಯ ದಿನಗಳಲ್ಲಿ ನಿತ್ಯ 4,670 ಅನುಸೂಚಿ (ಶೆಡ್ಯೂಲ್)ಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು.

    ‘ಎಲ್ಲ ಬಸ್ ನಿಲ್ದಾಣಗಳಲ್ಲಿ 10ರಿಂದ 15 ಬಸ್​ಗಳನ್ನು ಸಿದ್ಧ ಸ್ಥಿತಿಯಲ್ಲಿ ನಿಲ್ಲಿಸುತ್ತೇವೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಆಯಾ ಮಾರ್ಗಗಳಲ್ಲಿ ಬಸ್ ಓಡಿಸಲಾಗುವುದು. ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ವಿಜಯವಾಣಿಗೆ ತಿಳಿಸಿದ್ದಾರೆ.

    ‘ಪ್ರತಿ ಬಸ್​ನಲ್ಲಿ ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. 20-25 ಪ್ರಯಾಣಿಕರಿದ್ದರೂ ಬಸ್ ಓಡಿಸಲಾಗುವುದು. ಮಾಸ್ಕ್ ಧರಿಸಿದವರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಹುಬ್ಬಳ್ಳಿಯಿಂದ ಗದಗ, ಬೆಳಗಾವಿ ಹಾಗೂ ಶಿರಸಿಗೆ ಅರ್ಧ ಗಂಟೆಗೊಮ್ಮೆ ಬಸ್ ಓಡಿಸಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು.

    12 ತಾಸು ಮಾತ್ರ ಕಾರ್ಯಾಚರಣೆ

    ಸಾಮಾನ್ಯ ದಿನಗಳಂತೆ ದಿನದ 24 ಗಂಟೆ ಬಸ್​ಗಳು ಸಂಚರಿಸುವುದಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್​ಗಳು ಓಡಲಿವೆ. ಸಂಜೆ 7ರಿಂದ ಮಾರನೇ ದಿನ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಹುಬ್ಬಳ್ಳಿಯಿಂದ ಬೆಂಗಳೂರು, ಮೈಸೂರು ಅಥವಾ ಇನ್ನಿತರ ಊರುಗಳಿಗೆ ತೆರಳುವ ಪ್ರಯಾಣಿಕರು ಸಂಜೆ 7 ಗಂಟೆಗೆ ಮುನ್ನ ಅಲ್ಲಿಗೆ ತಲುಪುವಂತೆ ಬಸ್ ಓಡಿಸಬೇಕಾಗಿದೆ.

    ಬಿಆರ್​ಟಿಎಸ್ ವಿಳಂಬ

    ಹುಬ್ಬಳ್ಳಿ-ಧಾರವಾಡ ನಡುವಿನ ಬಿಆರ್​ಟಿಎಸ್ ಚಿಗರಿ ಬಸ್ ಸಂಚಾರವನ್ನು 2 ದಿನಗಳ ಮಟ್ಟಿಗೆ ತಡೆ ಹಿಡಿಯಲಾಗಿದೆ. ಇವು ಹವಾನಿಯಂತ್ರಿತ (ಎಸಿ) ಬಸ್​ಗಳಾಗಿರುವುದರಿಂದ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸರ್ಕಾರದ ನಿರ್ದೇಶನಕ್ಕೆ ಕಾಯಲಾಗುತ್ತಿದೆ. ಆದರೆ, ಹುಬ್ಬಳ್ಳಿ-ಧಾರವಾಡ ನಡುವೆ ಹಾಗೂ ಅವಳಿ ನಗರದ ಇನ್ನಿತರ ಬಡಾವಣೆಗಳಿಗೆ 50-60 ಬಸ್ ಓಡಿಸಲು ಹುಬ್ಬಳ್ಳಿ ಗ್ರಾಮಾಂತರ ಹಾಗೂ ಧಾರವಾಡ ಗ್ರಾಮಾಂತರ ವಿಭಾಗಗಳು ಸಿದ್ಧತೆ ಮಾಡಿಕೊಂಡಿವೆ.

    3 ಪಾಳಯಲ್ಲಿ ನಿಯೋಜನೆ

    ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಒಂದೇ ಪ್ರವೇಶ ಹಾಗೂ ಒಂದೇ ನಿರ್ಗಮನ ದ್ವಾರ ಮಾಡಲಾಗಿದೆ. ಸುಗಮ ನಿರ್ವಹಣೆಗಾಗಿ ಮೂರು ಪಾಳಯಲ್ಲಿ ಸಿಬ್ಬಂದಿ ಮತ್ತು ಮೇಲ್ವಿಚಾರಣೆಗಾಗಿ ಪ್ರತಿ ಬಸ್ ನಿಲ್ದಾಣಕ್ಕೂ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ. ವಿಭಾಗದಲ್ಲಿ 2166 ಸಿಬ್ಬಂದಿಯಿದ್ದು ಎಲ್ಲರಿಗೂ ಕರ್ತವ್ಯಕ್ಕೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ. ಮಂಗಳವಾರದಿಂದ ದೂರದ ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ವಿಜಯವಾಣಿಗೆ ತಿಳಿಸಿದ್ದಾರೆ.

    ಪ್ರಯಾಣಿಕರ ಗಮನಕ್ಕೆ

    ಬಸ್​ಗಳು ಬೆಳಗ್ಗೆ 7ರಿಂದ ಸಂಜೆ 7ರ ನಡುವೆ ಕಾರ್ಯಾಚರಣೆ ಮಾಡಲಿವೆ.

    * ಸದ್ಯಕ್ಕೆ ಬಸ್​ಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳ (ಪಾಯಿಂಟ್ ಟು ಪಾಯಿಂಟ್) ತನಕ ಮಾತ್ರ ಸಂಚರಿಸುತ್ತವೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ಸಂಚರಿಸುವ ಬಸ್​ನಲ್ಲಿ ಮಾರ್ಗ ಮಧ್ಯೆ ಬಸ್ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವಿರುತ್ತದೆ. ಅಲ್ಲಿಯೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಇತರೇ ಸ್ಥಳಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ಆದರೆ, ಮಾರ್ಗ ಮಧ್ಯೆ ನಿಗದಿತ ನಿಲುಗಡೆ ಸ್ಥಳಗಳಲ್ಲಿ ಪ್ರಯಾಣಿಕರು ಇಳಿದುಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts