More

    15 ಸಾವಿರ ರೂ. ವೇತನ ಜಾರಿಗೆ ಆಗ್ರಹ

    ಬ್ಯಾಡಗಿ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರಸಕ್ತ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಆಶಾ ಕಾರ್ಯಕರ್ತೆಯರ ಒಕ್ಕೂಟದಿಂದ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

    ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಂಜುಳಾ ಮಾಸೂರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ವೇತನ ಜಾರಿಗೊಳಿಸಬೇಕು. ಆರ್‌ಸಿಎಚ್ (ಆಶಾ ನಿಧಿ) ಪೋರ್ಟಲ್‌ನಲ್ಲಿನ ಸಮಸ್ಯೆಗಳಿಂದ ಹಲವು ಚಟುವಟಿಕೆಗಳ ಹಣ ಬರುತ್ತಿಲ್ಲ. ಪೋರ್ಟಲ್‌ನಲ್ಲಿ ಕೆಲ ದಾಖಲೆಗಳ ಅಪ್‌ಡೇಟ್ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ದಾಖಲೆ ಸಮೇತ ಇಲಾಖೆಗೆ ದೂರು ಸಲ್ಲಿಸಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. 2022 ಡಿಸೆಂಬರ್‌ನಿಂದ ಆರ್‌ಸಿಎಚ್ ಫೋರ್ಟಲ್‌ನಿಂದ ಪ್ರೋತ್ಸಾಹಧನ ಪಾವತಿ ಮಾಡುವುದನ್ನು ಸ್ಥಗಿತಗೊಳಿಸಬೇಕೆಂದು ಮನವಿ ಸಲ್ಲಿಸಿದರೂ ಈವರೆಗೂ ಬದಲಾವಣೆ ಮಾಡಿಲ್ಲ. ರಾಜ್ಯ ಸರ್ಕಾರದ ನಿಶ್ಚಿತ ನಿಧಿ 5 ಸಾವಿರ ರೂ., ನಿಗದಿತ ಚಟುವಟಿಕೆಗಳ ನಿಶ್ಚಿತ ಗೌರವಧನ 2 ಸಾವಿರ ರೂ. ಹಾಗೂ ಆಶಾ ನಿಧಿಯ ವಿವಿಧ ಪ್ರೋತ್ಸಾಹ ಧನ 5 ಸಾವಿರ ರೂ. ಒಟ್ಟಾಗಿ ಸೇರಿಸಿ ಪ್ರತಿ ತಿಂಗಳು 15 ಸಾವಿರ ರೂ. ವೇತನ ನೀಡಬೇಕು ಎಂದು ಒತ್ತಾಯಿಸಿದರು.
    ಆಶಾ ಒಕ್ಕೂಟದ ಕಾರ್ಯದರ್ಶಿ ರೇಖಾ ಕರಿಗಾರ ಮಾತನಾಡಿ, ಮೊಬೈಲ್ ಮೂಲಕ ಎಚ್‌ಎನ್‌ಎಸ್ ಸರ್ವೇ ಮಾಡಿಸುವುದನ್ನು ಕೂಡಲೇ ಕೈಬಿಡಬೇಕು. 2019-20ರಲ್ಲಿ 2 ಸಾವಿರ ರೂ. ವಿಶೇಷ ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಆದೇಶ ಮಾಡಿತ್ತು. ಈವರೆಗೆ ನಯಾಪೈಸೆ ಹಣ ಜಮೆಯಾಗಿಲ್ಲ ಎಂದರು.

    ಫೆಸಿಲಿಟೇಟರ್ ಹುದ್ದೆಯ ಕಾರ್ಯಕರ್ತರಿಗೆ ವೇತನ ಹೆಚ್ಚಳ, ಪ್ರಯಾಣ ಭತ್ಯೆ ಇತ್ಯಾದಿ ಸೌಲಭ್ಯ ಕಲ್ಪಿಸಬೇಕು. 3 ತಿಂಗಳ ಹೆರಿಗೆ ರಜೆ ಘೋಷಣೆ, ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯ ಕಲ್ಪಿಸುವುದು, ಆಶಾ ಕ್ಷೇಮಾಭಿವೃದ್ಧಿ ಸ್ಥಾಪನೆ, ಸೇವಾವಧಿಯಲ್ಲಿ ಮೃತಪಟ್ಟ ಕಾರ್ಯಕರ್ತೆಯರಿಗೆ ಕೊಡುವ ಇಡಗಂಟನ್ನು 3 ಲಕ್ಷ ರೂ. ಏರಿಕೆ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ಮಂಗಳಾ ಚಪ್ಪರದಹಳ್ಳಿಮಠ, ಸವಿತಾ ಪಾಟೀಲ, ವಿನೋದ ಹೊಂಡದ, ಕವಿತಾ ಅಂಗಡಿ, ಜ್ಯೋತಿ ಶಿರಾಳಕೊಪ್ಪ, ಸರಸ್ವತಿ ಕಾಕೋಳ, ಲಕ್ಷವ್ವ ಸುಣಗಾರ, ನಿರ್ಮಲಾ ಕುರಕುಂದಿ, ಲಲಿತಾ ಸಾರಂಗಮಠ, ಬಸಮ್ಮ ಕುರಿ, ಪುಷ್ಟಾ ಹಾವೇರಿ, ಜ್ಯೋತಿ ಕಾರ್ಗೇರ, ಕಾಂಗ್ರೆಸ ಘಟಕದ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಡಿ.ಬಿ. ಬುಡ್ಡನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts