More

    15 ದಿನಕ್ಕೊಮ್ಮೆ ಪರಿಶೀಲನಾ ಸಭೆ

    ಹಾವೇರಿ: 15 ದಿನಕೊಮ್ಮೆ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.

    ನಗರದ ಜಿಪಂ ಸಭಾಭವನದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದರು.

    ರಾಣೆಬೆನ್ನೂರ ನಗರಸಭೆ ಮಳಿಗೆಗಳ ಹರಾಜು ಸೇರಿ ಜಿಲ್ಲೆಯಲ್ಲಿ ಹರಾಜಿಗೆ ಬಾಕಿ ಇರುವ ಮಳಿಗೆಗಳನ್ನು 3 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ವಿಳಂಬವಾದರೆ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಗೊಂಡಿರುವ ಕಾನೂನು ಸಲಹೆಗಾರರಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದವರನ್ನು ಬದಲಾಯಿಬೇಕು ಎಂದರು.

    ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸಬೇಕು. ಒಣಕಸಗಳನ್ನು ಫ್ಯಾಕ್ಟರಿಗಳಿಗೆ ನೀಡಬೇಕು. ಒಣಕಸ ಬರ್ನಿಂಗ್ ಮಾಡಲು ತಾಲೂಕುವಾರು ಘಟಕಗಳನ್ನು ಸ್ಥಾಪಿಸಿ ಯಂತ್ರಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆದಿದೆ. ಒಣಕಸದ ಬರ್ನಿಂಗ್ ಘಟಕಗಳ ಸ್ಥಾಪನೆಗೆ ಸ್ಥಳ ಗುರುತಿಸಿ ವರದಿ ಸಲ್ಲಿಸಿ. ನಗರಗಳಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್​ಗಳನ್ನು ರೀಸೈಕ್ಲಿಂಗ್​ಗೊಳಿಸಿ ಸಗಣಿ ಉಂಡೆ ತರಹ ಮಾಡಿ ಸಿಮೆಂಟ್ ಕಾರ್ಖಾನೆಗಳಿಗೆ ಮಾರಾಟ ಮಾಡಿ. ಇದರ ಘಟಕ ಸ್ಥಾಪನೆ ಹಾಗೂ ಯಂತ್ರಗಳ ಖರೀದಿಗೆ ಅಂದಾಜು ವೆಚ್ಚದೊಂದಿಗೆ ವರದಿ ಸಲ್ಲಿಸಬೇಕು ಎಂದರು.

    ರಾಜ್ಯದಲ್ಲಿ ತರಕಾರಿ, ಮೆಣಸಿನಕಾಯಿ ಸೇರಿ ತೋಟಗಾರಿಕಾ ಉತ್ಪನ್ನಗಳ ಶೇಖರಣೆಗಾಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ 100 ಶಿಥಲೀಕರಣ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಅವಶ್ಯವಿರುವ ಘಟಕಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ತಿಳಿಸಿದರು.

    ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಮಲೆನಾಡು ಅಭಿವೃದ್ಧಿ ಮಂಡಳಿಗೆ ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕಿನ ಅಡಕೆ ಬೆಳೆಗಾರರನ್ನು ಸೇರ್ಪಡೆಗೊಳಿಸುವಂತೆ ಕೋರಿದರು. ಇದಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಯಿತು.

    ರೇಷ್ಮು ಹುಳು ಸಾಕಾಣಿಕೆ ಮನೆ ನಿರ್ವಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಈ ವರ್ಷ 4.6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದಿರುವ 4.41 ಕೋಟಿ ರೂ. ಅನುದಾನವನ್ನು ಶೀಘ್ರವೇ ಒದಗಿಸಲಾಗುವುದು ಎಂದರು.

    ರೇಷ್ಮೆ ಇಲಾಖೆಯಿಂದ ಹೊರತಂದ ರೇಷ್ಮೆ ಬೆಳೆಗಾರರ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಸಿಇಒ ರಮೇಶ ದೇಸಾಯಿ ಇತರರು ಉಪಸ್ಥಿತರಿದ್ದರು.

    ನೂಲು ತೆಗೆಯುವ ಘಟಕ ಸ್ಥಾಪನೆ: ಜಿಲ್ಲೆಯಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯುತ್ತಿದ್ದು, ಪ್ರತ್ಯೇಕವಾದ ರೇಷ್ಮೆ ನೂಲು ತೆಗೆಯುವ ಘಟಕ ಸ್ಥಾಪನೆಗೆ ಶೀಘ್ರವೇ ಮಂಜೂರಾತಿ ನೀಡಲಾಗುವುದು. ಹಾವೇರಿ ಸೇರಿದಂತೆ ಅಕ್ಕಪಕ್ಕದ ನಾಲ್ಕು ಜಿಲ್ಲೆಗಳನ್ನು ಈ ರೇಷ್ಮೆ ನೂಲು ತೆಗೆಯುವ ಘಟಕದ ವ್ಯಾಪ್ತಿಗೆ ತರಲಾಗುವುದು. ಈ ಕುರಿತಂತೆ ಜಮೀನನ್ನು ಗುರುತಿಸುವಂತೆ ಸಚಿವ ನಾರಾಯಣಗೌಡ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts