More

    ಲಂಚಕೋರರ ವಿರುದ್ಧ ಕ್ರಮ ಕೈಗೊಳ್ಳಿ

    ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು 5 ಸಾವಿರ ರೂ. ಲಂಚ ಪಡೆಯುತ್ತಾರೆ. ಇಂತಹ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಯಕ್ಕಂಚಿ ಗ್ರಾಮಸ್ಥರು ಆಗ್ರಹಿಸಿದರು. ತಾಲೂಕಿನ ಯಕ್ಕಂಚಿ ಗ್ರಾಮದ ಅಡವೇಶ್ವರ ಮಠದಲ್ಲಿ ಅಥಣಿ ತಹಸೀಲ್ದಾರ್ ಸುರೇಶ ಮುಂಜೆ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳ ಕುರಿತು ಆಕ್ರೋಶ ಹೊರಹಾಕಿದರು.

    ಯಕ್ಕಂಚಿ ಗ್ರಾಮದ ಕೃಷಿ ಸೇವಾ ಕೇಂದ್ರದಲ್ಲಿ ಬೀಜ, ಗೊಬ್ಬರ ಹಾಗೂ ಕೀಟನಾಶಕಗಳನ್ನು ಹೆಚ್ಚಿನ ದರದಲ್ಲಿ ಮಾರುತ್ತಿದ್ದಾರೆ. ಆದ್ದರಿಂದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ದುರ್ಗಪ್ಪ ಗೊಂದಳೆ ಆರೋಪಿಸಿದರು. ಯಲಿಹಡಲಗಿ ಗ್ರಾಪಂ ಕಂಪ್ಯೂಟರ್ ಆಪರೇಟರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಎನ್.ಆರ್.ಜಿ. ಬಿಲ್ ಆಗುತ್ತಿಲ್ಲ. ತನಗೆ ಬೇಕಾದವರಿಗೆ ಮಾತ್ರ ಬಿಲ್ ಪಾಸ್ ಮಾಡುತ್ತಾನೆ. ಅಂಗವಿಕಲನಾದ ನನಗೆ ಈ ರೀತಿ ಆದರೆ ಉಳಿದ ಜನರ ಪಾಡೇನು? ಕೂಡಲೇ ಆತನನ್ನು ವಜಾಗೊಳಿಸಬೇಕು ಎಂದು ಶ್ರೀಶೈಲ ಗೊಂದಳಿ ಆರೋಪಿಸಿದರು.

    ಪಶುವೈದ್ಯರು ಗ್ರಾಮಕ್ಕೆ ಬರುವಂತೆ ಕ್ರಮ ವಹಿಸಬೇಕು. ದ್ರಾಕ್ಷಿ ಬೆಳೆಗೆ ಸಿಗುವ ಪರಿಹಾರ, ವಿಮೆಗಳು ಕೃಷಿ ಇಲಾಖೆಗೆ ಸಂಬಂಧಪಟ್ಟಂತಹ ಬೆಳೆಗಳಿಗೂ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಸಲ್ಲಿಸಿದ ಅನೇಕ ಅರ್ಜಿಗಳನ್ನು ಪರಿಶೀಲಿಸಿದ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

    ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶ್ವೇತಾ ಹಾಡಕಾರ ಮಾತನಾಡಿ, ಈ ಬಾರಿ ದ್ರಾಕ್ಷಿ ಬೆಳೆಯ ವಿಮೆ ಬೆಳಗಾವಿ ಜಿಲ್ಲೆಗೆ 49.5 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಅದರಲ್ಲಿ, ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರಿಗೆ 46 ಕೋಟಿ ರೂ. ಜಮೆಯಾಗಿದೆ. ಯಾವುದೇ ಬೆಳೆ ಹಾನಿಗೆ ಪರಿಹಾರ ಅಥವಾ ವಿಮೆ ರೈತರಿಗೆ ದೊರೆಯಬೇಕಾದರೆ ಅಧಿಕಾರಿಗಳ, ಸಿಬ್ಬಂದಿ ಕೈವಾಡವಿರುವುದಿಲ್ಲ. ಅದು ಉಪಗೃಹ ಸರ್ವೇ ಆಧಾರದಲ್ಲಿ ಜಮೆ ಆಗುತ್ತವೆೆ ಎಂದು ತಿಳಿಸಿದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ ಮಾತನಾಡಿ, ಮಳೆಯಿಂದ ಹಾನಿಯಾದ ಮೆಕ್ಕೆಜೋಳ, ತೊಗರಿ, ಹೆಸರು, ಸೋಯಾಬೀನ್ ಸೇರಿ ಕೃಷಿ ಇಲಾಖೆಗೆ ಒಳಪಡುವ ಬೆಳೆಗಳ ಮಾಹಿತಿ ಪಡೆದು ಹಾನಿಯಾದ ಬೆಳೆಗಳ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರ ದೊರಕಿಸಿಕೊಡುವ ಭರವಸೆ ವ್ಯಕ್ತಪಡಿಸಿದರು.

    ಜಿಪಂ ಎಇಇ ಈರಣ್ಣ ವಾಲಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಹುಂಡೆಕಾರ, ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ ಗಾಣಿಗೇರ, ತಾಪಂನ ಎಂ.ಆರ್.ಕೋಟ್ಯಾಳ, ಸಿಡಿಪಿಒ ಅಶೋಕ ಕಾಂಬಳೆ, ಎಂ.ವಿ.ಕೊಪ್ಪ, ಉದಯ ಪಾಟೀಲ, ಉಪತಹಸೀಲ್ದಾರ್ ಎಂ.ಎಸ್.ಯತ್ನಟ್ಟಿ, ಆರ್.ಐ ಎಂ.ಎ.ಮುಜಾವರ, ಶರಣಗೌಡ ಗೂಗಲ್, ಕೃಷ್ಣಾ ಸಹಕಾರಿ ನಿರ್ದೇಶಕ ಸಿದ್ಧರಾಯ ನಾಯಿಕ, ಮಹಾದೇವ ನಾಗನೂರ, ಬಸವರಾಜ ಹೊಕ್ಕುಂಡಿ, ಅಕ್ಷಯ ಉಪಾಧ್ಯಾಯ, ವಿಷ್ಣು ಪೂಜಾರಿ, ಕಲ್ಮೇಶ ಕಲಮಡಿ, ಪಿಡಿಒ ಸಂತೋಷ ನಿಡೋಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts