More

    126 ಗ್ರಾಪಂಗಳಿಗೆ ಮತದಾನ ನಾಳೆ

    ಕಾರವಾರ: ಜಿಲ್ಲೆಯ ಘಟ್ಟದ ಮೇಲಿನ 7 ತಾಲೂಕುಗಳ 126 ಗ್ರಾಪಂಗಳ 1203 ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಡಿ.27 ರಂದು ಮತದಾನ ನಡೆಯಲಿದೆ. ಅದಕ್ಕಾಗಿ ಮತಪೆಟ್ಟಿಗೆಗಳ ಸಿದ್ಧತೆ ಸೇರಿ ವಿವಿಧ ಕಾರ್ಯಗಳು ಡಿ.26 ರಂದು ಆಯಾ ತಾಲೂಕುಗಳಲ್ಲಿ ನಡೆಯಲಿದೆ.

    3452 ಅಭ್ಯರ್ಥಿಗಳು ಕಣದಲ್ಲಿದ್ದು, 664 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅದರಲ್ಲಿ 109 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 72 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಎರಡನೇ ಹಂತದಲ್ಲಿ 398782 ಮತದಾರರಿದ್ದು ಒಟ್ಟಾರೆ 3763 ಚುನಾವಣಾ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತಗಟ್ಟೆಗಳಿಗೆ ತೆರಳಲು 81 ವಾಹನಗಳ ವ್ಯವಸ್ಥೆ ಮಾಡಲಾಗಿದೆ.

    ಶಿರಸಿಯ ಮಾರಿಕಾಂಬಾ ಹೈಸ್ಕೂಲ್, ಸಿದ್ದಾಪುರದ ಹಾಳದಕಟ್ಟಾ ಸರ್ಕಾರಿ ಹೈಸ್ಕೂಲ್, ಯಲ್ಲಾಪುರದ ವಿಶ್ವ ದರ್ಶನ ಎಜುಕೇಶನ್ ಸೊಸೈಟಿ, ಮುಂಡಗೋಡಿನ ಸರ್ಕಾರಿ ಪದವಿಪೂರ್ವ ಕಾಲೇಜ್, ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ದಾಂಡೇಲಿಯ ಜನತಾ ಕಂಪೋಜಿಟ್ ಜೂನಿಯರ್ ಕಾಲೇಜ್, ಜೊಯಿಡಾದ ಸರ್ಕಾರಿ ಪಾಲಿಟೆಕ್ನಿಕ್​ಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.

    ಅಂತಿಮ ಪ್ರಯತ್ನ: ಡಿ.27 ರಂದು ನಡೆಯಲಿರುವ ಗ್ರಾಪಂ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಅಭ್ಯರ್ಥಿಗಳು ಮನೆ, ಮನೆಗೆ ತೆರಳಿ ಅಂತಿಮ ಕ್ಷಣದ ಮತ ಬೇಟೆಗೆ ಇಳಿದಿದ್ದಾರೆ. ಎದುರಾಳಿಗಳ ಪಟ್ಟು ಅರಿತು ಮತ್ತೊಮ್ಮೆ ಮತದಾರರನ್ನು ಸಮಾಧಾನಪಡಿಸುವ, ಮನವೊಲಿಸುವ ಯತ್ನದಲ್ಲಿ ತೊಡಗಿದ್ದಾರೆ.

    ಮದ್ಯ ಮಾರಾಟ ನಿಷೇಧ: ಎರಡನೆ ಹಂತದಲ್ಲಿ ಗ್ರಾಪಂ ಚುನಾವಣೆ ನಡೆಯುವ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕುಗಳ ವ್ಯಾಪ್ತಿಯಲ್ಲಿ ಮದ್ಯ ಸಾಗಣೆ, ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶಿಸಿದ್ದಾರೆ. ಡಿ.25 ರಂದು ಸಾಯಂಕಾಲ 5 ಗಂಟೆಯಿಂದ 27 ರ ಸಾಯಂಕಾಲ 5 ಗಂಟೆವರೆಗೆ ನಿಷೇಧ ಜಾರಿಯಲ್ಲಿರಲಿದೆ.

    ನಿಷೇಧಾಜ್ಞೆ ಜಾರಿ: ಎರಡನೆ ಹಂತದ ಮತದಾನ ನಡೆಯುವ ಜಿಲ್ಲೆಯ ಎಲ್ಲ ಮತಗಟ್ಟೆಗಳ ಸುತ್ತ 200 ಮೀ ವ್ಯಾಪ್ತಿಯಲ್ಲಿ ಡಿ. 27ರಂದು ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಆದೇಶಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಜಾತ್ರೆ ಎಲ್ಲ ಜನಸಂದಣಿ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts