More

    ಇವಿಎಂ ಹೊತ್ತು ಮತಗಟ್ಟೆಗಳತ್ತ ಪಯಣ

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

    ಮತದಾನದ ಸಮಯದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. ಚುನಾವಣೆ ಕಾರ್ಯಕ್ಕೆ 12 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 205 ಮೈಕ್ರೋ ಅಬ್ಸರ್ವರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.
    ಒಟ್ಟು 2,039 ಬೂತ್‌ಗಳ ಪೈಕಿ ಸಾವಿರಕ್ಕೂ ಅಧಿಕ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ವೆಬ್ ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದ್ದು, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ವ್ಯವಸ್ಥೆಯಾಗಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
    ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಓರ್ವ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 2,021 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳನ್ನೂ ಗುರುತಿಸಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.
    ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಎನ್‌ಎಫ್ ಹಾಗೂ ಎಎನ್‌ಎಸ್ ಪಡೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ಸಶಸ್ತ್ರ ತುಕಡಿಗಳನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಮತಗಟ್ಟೆ, ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
    ಮತದಾನ ಬಹಿಷ್ಕಾರವಿಲ್ಲ: ಕ್ಷೇತ್ರದಲ್ಲಿ ಎಲ್ಲೂ ಮತದಾನ ಬಹಿಷ್ಕಾರವಿಲ್ಲ. ಬಹಿಷ್ಕಾರಕ್ಕೆ ನಿರ್ಧರಿಸಿದವರೊಂದಿಗೆ ಸಮಾಲೋಚನೆ ನಡೆಸಿ ಅವರ ಮನವೊಲಿಸಲಾಗಿದೆ. ಮತದಾನ ಬಹಿಷ್ಕಾರದಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು. ಚುನಾವಣೆ ಸಂದರ್ಭ ಮತದಾನ ಬಹಿಷ್ಕಾರ ಮಾಡುತ್ತೇವೆಂದು ಹೇಳುವುದರ ಬದಲು ಬೇರೆ ಸಂದರ್ಭಗಳಲ್ಲಿ ಆಡಳಿತ ಯಂತ್ರದ ಗಮನಸೆಳೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
    30 ನಿಮಿಷಗಳಲ್ಲಿ ಹೊಸ ಇವಿಎಂ: ತಾಂತ್ರಿಕ ದೋಷಗಳಿಂದ ಇವಿಎಂ ಇಲ್ಲವೇ ವಿವಿ ಪ್ಯಾಟ್ ಕಾರ್ಯನಿರ್ವಹಿಸದಿದ್ದರೆ ಬದಲಿ ವ್ಯವಸ್ಥೆಗೆ ಹೆಚ್ಚುವರಿಯಾಗಿ ಬ್ಯಾಲೆಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದರೆ ಸ್ಥಳದಲ್ಲೇ ಅದನ್ನು ಸರಿಪಡಿಸಲಾಗುವುದು. ತಾಂತ್ರಿಕ ಸಮಸ್ಯೆ ಸರಿಯಾಗದೇ ಇದ್ದರೆ 30 ನಿಮಿಷಗಳಲ್ಲಿ ಇವಿಎಂ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts