More

    1,220, ವಿದ್ಯಾರ್ಥಿಗಳಿಗೆ 10 ಬೋಧಕರು

    ವಿಜಯವಾಣಿ ವಿಶೇಷ ಕೂಡ್ಲಿಗಿ
    ತಾಲೂಕಿನ ಅತಿ ದೊಡ್ಡ ಸರ್ಕಾರಿ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿರುವ ಪಟ್ಟಣದ ಸರ್ಕಾರಿ ಪಪೂ ಕಾಲೇಜು ಉತ್ತಮ ಫಲಿತಾಂಶದಿಂದ ಗಮನ ಸೆಳೆದಿದೆ. ಹೀಗಾಗಿ ಈ ವರ್ಷ 1220 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ, ಉಪನ್ಯಾಸಕರು, ಕೊಠಡಿಗಳು ಹಾಗೂ ಮೂಲಸೌಲಭ್ಯಗಳ ಕೊರತೆ ತೀವ್ರ ಬಾಧಿಸುತ್ತಿದ್ದು, ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.

    ಕೂಡ್ಲಿಗಿ ತಾಲೂಕಷ್ಟೇ ಅಲ್ಲ ಪಕ್ಕದ ಸಂಡೂರು, ಹಗರಿಬೊಮ್ಮನಹಳ್ಳಿ ಭಾಗದಿಂದಲೂ ವಿದ್ಯಾರ್ಥಿಗಳು ಈ ಕಾಲೇಜು ಸೇರುತ್ತಿದ್ದಾರೆ. ಪ್ರಸಕ್ತ ವರ್ಷ 1220 ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಂಡಿದ್ದಾರೆ. ಈ ಪೈಕಿ 680 ವಿದ್ಯಾರ್ಥಿನಿಯರು, 540 ವಿದ್ಯಾರ್ಥಿಗಳಿದ್ದು, ಆಸಕ್ತಿ ಇರುವ ಕಲಾ, ವಿಜ್ಞಾನ, ಶಿಕ್ಷಣ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗಗಳಲ್ಲಿ ಓದುತ್ತಿದ್ದಾರೆ. ಹಿಂದುಳಿದ ವರ್ಗದವರಿಗಾಗಿ ಹಾಸ್ಟೆಲ್ ಸೌಲಭ್ಯ ಇರುವುದೇ ಧನಾತ್ಮಕ ಅಂಶ. ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿದ್ದರೂ ಸೌಕರ್ಯ ಮರೀಚಿಕೆಯಾಗಿದೆ.

    ಇದನ್ನೂ ಓದಿ: ಕೊಟ್ಟೂರು ರ್ಯಾಂಕ್ ಕಾಲೇಜಿನಲ್ಲಿ ಅಗತ್ಯ ಸೌಲಭ್ಯಗಳ ಕೊರತೆ

    ಕಾಲೇಜಿನಲ್ಲಿ ಪ್ರಾಚಾರ್ಯ ಸೇರಿ 17 ಉಪನ್ಯಾಸಕರು ಇರಬೇಕು. ಆದರೆ, ಕೇವಲ 10 ಜನ ಬೋಧಕರಿದ್ದು, 6 ಉಪನ್ಯಾಸಕರ ಕೊರತೆ ಕಾಡುತ್ತಿದೆ. ಉಳಿದವರ ಕೆಲಸವನ್ನು ಸರಿದೂಗಿಸುವುದು ಇಲ್ಲಿನ ಸಿಬ್ಬಂದಿಗೆ ಸವಾಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ 300 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕ ಇರಬೇಕು. ಇಲ್ಲಿ 1200 ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೂ ಒಬ್ಬ ಉಪನ್ಯಾಸಕರಿದ್ದಾರೆ. ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಶಿಕ್ಷಣ ಶಾಸ್ತ್ರ, ವಾಣಿಜ್ಯ ಶಾಸ್ತ್ರ ಸೇರಿದಂತೆ ಇತರ ವಿಷಯಗಳಿಗೆ ತಲಾ ಇಬ್ಬರು ಉಪನ್ಯಾಸಕರ ಅವಶ್ಯಕತೆ ಇದೆ. ಕಚೇರಿ ಸಿಬ್ಬಂದಿ ಕೊರತೆಯೂ ಇದೆ. ಆಫೀಸ್ ಸೂಪರಿಂಟೆಂಡೆಂಟ್, ಎಫ್‌ಡಿಎ, ಎಸ್‌ಡಿಎ ಹಾಗೂ ಗುಮಾಸ್ತ, ಕಾವಲುಗಾರ ಹುದ್ದೆ ಖಾಲಿ ಇದೆ. ಕಚೇರಿ ಕೆಲಸಗಳೂ ವಿಳಂಬವಾಗುತ್ತಿದ್ದು, ಸಮಸ್ಯೆಯಾಗಿದೆ.

    ನೆಲದ ಮೇಲೆ ಕುಳಿತು ಪಾಠ ಕೇಳ್ಬೇಕು

    ಕೊಠಡಿಗಳ ಸಮಸ್ಯೆಯೂ ತೀವ್ರವಾಗಿ ಕಾಡುತ್ತಿದೆ. ಕಾಲೇಜಿನಲ್ಲಿ ಪ್ರಾಚಾರ್ಯ, ಸಿಬ್ಬಂದಿ ಕಚೇರಿ ಸೇರಿ 12 ಕೋಣೆಗಳಿದ್ದು, ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇದೆ. ಪ್ರತಿ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 150ಕ್ಕೂ ಹೆಚ್ಚಿರುವ ಕಾರಣ ಕೊಠಡಿಗಳು ಸಾಲುತ್ತಿಲ್ಲ. ಅಗತ್ಯ ಉಪನ್ಯಾಸಕರೂ ಇಲ್ಲದ ಕಾರಣ ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕೂಡಿಸಿ ಬೋಧನೆ ಮಾಡಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಬೋಧಕರು ಹೇಳುವ ಪಾಠಗಳು ಸರಿಯಾಗಿ ಕೇಳಲ್ಲ. ಅದರಲ್ಲೂ ನೆಲದ ಮೇಲೆ ಕುಳಿತು ಗಂಟೆಗಟ್ಟಲೆ ಪಾಠ ಕೇಳಬೇಕಿದೆ. ಜೋರಾಗಿ ಕೂಗಿ ಪಾಠ ಮಾಡಬೇಕಾಗಿದೆ. ಆದ್ದರಿಂದ ಹೆಚ್ಚುವರಿ ಉಪನ್ಯಾಸಕರು ಹಾಗೂ ಕೊಠಡಿಗಳ ವ್ಯವಸ್ಥೆ ಮಾಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಟ್ಟಣಶೆಟ್ಟಿ ಪಂಪಾಪತಿ ಒತ್ತಾಯಿಸಿದ್ದಾರೆ.

    ಇಲ್ಲಿಗೆ ಹೆಚ್ಚುವರಿ ಉಪನ್ಯಾಸಕರ ವರ್ಗ ಮಾಡಿ

    ಕೂಡ್ಲಿಗಿ ಹಾಗೂ ಗುಡೇಕೋಟೆಯಲ್ಲಿ ಸರ್ಕಾರಿ ಕಾಲೇಜು ಇರುವ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಪ್ರವೇಶಾತಿ ಬಯಸಿ ಬರುತ್ತಾರೆ. ಆದರೆ, ಅಗತ್ಯ ಸೌಲಭ್ಯ ಒದಗಿಸಿಲ್ಲ. ಜಿಲ್ಲೆಯ ಬೇರೆ ತಾಲೂಕುಗಳಿಗೆ ನಾಲ್ಕೈದು ಕಾಲೇಜುಗಳನ್ನು ಸರ್ಕಾರ ನೀಡಿದೆ. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ. ಹೆಚ್ಚಿನ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅಲ್ಲಿನ ಹೆಚ್ಚುವರಿ ಬೋಧಕರನ್ನು ಈ ಕಾಲೇಜಿಗೆ ವರ್ಗಾವಣೆ ಮಾಡಿದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎನ್ನುವುದು ಉಪನ್ಯಾಸಕರು, ಪಾಲಕರ ಒತ್ತಾಯವಾಗಿದೆ.

    ಮಹಿಳಾ ವಿದ್ಯಾಲಯ ಅವಶ್ಯ

    ಜಿಲ್ಲೆಯ ಅತಿ ದೊಡ್ಡ ತಾಲೂಕು ಆಗಿರುವ ಕೂಡ್ಲಿಗಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಬಡ ವಿದ್ಯಾರ್ಥಿಗಳೇ ಹೆಚ್ಚಿದ್ದು, ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಸರ್ಕಾರಿ ಕಾಲೇಜುಗಳನ್ನೇ ನೆಚ್ಚಿರುತ್ತಾರೆ. ಅದರಲ್ಲೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ಗಡಿ ಗ್ರಾಮಗಳಿಂದ ವಿದ್ಯಾರ್ಥಿನಿಯರು ಬಂದು ಶಿಕ್ಷಣ ಪೂರೈಸುವುದು ಕಷ್ಟವಾಗಿದೆ. ಇಲ್ಲದಿದ್ದರೆ ಪಾಲಕರು ಅರ್ಧಕ್ಕೆ ಶಿಕ್ಷಣ ಮೊಟುಕುಗೊಳಿಸುತ್ತಿದ್ದಾರೆೆ. ಆದ್ದರಿಂದ ಸರ್ಕಾರ ತಾಲೂಕಿಗೆ ಪ್ರತ್ಯೇಕ ಮಹಿಳಾ ಕಾಲೇಜು ಮಂಜೂರು ಮಾಡಿದರೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವಿದ್ಯಾರ್ಥಿನಿಯರದ್ದಾಗಿದೆ.


    ಹಿಂದುಳಿದ ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಖುದ್ದು ಭೇಟಿ ನೀಡಿ, ಸಮಸ್ಯೆನ ಅರಿತಿದ್ದೇನೆ. ಈ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತಾನಾಡಿ ಸಮಸ್ಯೆ ಬಗೆಹರಿಸುವೆ. ವಿದ್ಯಾರ್ಥಿಗಳ ಹಿತ ಕಾಯುವೆ.


    ಡಾ.ಎನ್.ಟಿ.ಶ್ರೀನಿವಾಸ್

    ಶಾಸಕ, ಕೂಡ್ಲಿಗಿ

    ಈಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಉಪನ್ಯಾಸಕರು ಹಾಗೂ ಕೊಠಡಿಗಳ ಅವಶ್ಯಕತೆ ಹೆಚ್ಚಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೀಘ್ರವಾಗಿ ಬೋಧಕರನ್ನು ನೇಮಿಸಿಕೊಳ್ಳಬೇಕು. ಈ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.


    ಡಾ.ಟಿ.ಕೊತ್ಲಮ್ಮ
    ಪ್ರಾಚಾರ್ಯೆ, ಸರ್ಕಾರಿ ಪಪೂ ಕಾಲೇಜು, ಕೂಡ್ಲಿಗಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts