More

    ಬೆಳಗಾವೀಲಿ 1 ಲಕ್ಷ ಹೊಸ ಮತದಾರರ ನೋಂದಣಿ

    ಬೆಳಗಾವಿ: ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆದಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಒಂದು ಲಕ್ಷಕ್ಕೂ ಅಧಿಕ ಹೊಸ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಅಂಜುಂ ಫರ್ವೇಜ್ ಹೇಳಿದರು.

    ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನೋಂದಾಯಿತ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಮತದಾರರ ಪಟ್ಟಿಯನ್ನು ಈಗಾಗಲೇ ಜ.22 ರಂದು ಪ್ರಕಟಿಸಲಾಗಿದ್ದು, ಎಲ್ಲ ಏಳು ರಾಜಕೀಯ ಪಕ್ಷಗಳಿಗೆ ಸಾಫ್ಟ್ ಕಾಪಿ ನೀಡಲಾಗಿದೆ. ಮುದ್ರಿತ ಪಟ್ಟಿಯನ್ನು ಕೂಡ ಆಯಾ ಪಕ್ಷಗಳ ಕಚೇರಿಗೆ ಕಳಿಸಲಾಗುತ್ತಿದೆ. ಬೆಳಗಾವಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಚ್ಚು ಹೊಸ ಮತದಾರರ ಸೇರ್ಪಡೆಯಾಗಿದೆೆ. 45 ಸಾವಿರಕ್ಕೂ ಅಧಿಕ ಮೃತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಒಟ್ಟಾರೆ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಸಮರ್ಪಕವಾಗಿ ಮಾಡಲಾಗಿದೆ ಎಂದರು.

    ಕಳೆದ ವರ್ಷಕ್ಕಿಂತ ಶೇ.1.46 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪ್ರತಿ ಸಂದರ್ಭದಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಏನಾದರೂ ಲೋಪದೋಷ, ಕೊರತೆಗಳು ಕಂಡುಬಂದರೆ ಮಾಹಿತಿ ನೀಡಬೇಕು ಎಂದರು.

    90 ಹೊಸ ಮತಗಟ್ಟೆ ಸ್ಥಾಪನೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲಾದ್ಯಂತ ಹೊಸದಾಗಿ ಯುವ ಮತದಾರರ ಸೇರ್ಪಡೆಗೆ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗಿತ್ತು. 17 ವಷರ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಂದಲೇ ಆನ್‌ಲೈನ್ ಅರ್ಜಿ ಭರ್ತಿ ಮಾಡುವ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದರು. ಮತದಾರರು 2 ಕಿಮೀಗಿಂತ ದೂರ ಹೋಗಬಾರದು ಎಂಬ ಆಶಯದೊಂದಿಗೆ ಜಿಲ್ಲೆಯಲ್ಲಿ 90 ಹೊಸ ಮತಗಟ್ಟೆ
    ಸ್ಥಾಪಿಸಲಾಗಿದೆ. ಅದಕ್ಕೆ ಚುನಾವಣಾ ಆಯೋಗ ಕೂಡ ಅನುಮೋದನೆ ನೀಡಿದೆ ಎಂದರು.

    ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಎಸಿ ಶ್ರವಣ ನಾಯಕ ಹಾಗೂ ಕಾಂಗ್ರೆಸ್, ಬಿಜೆಪಿ ಸೇರಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts