More

    ನಕಲಿ ದಾಖಲೆ ಸಲ್ಲಿಸಿ 60 ಲಕ್ಷ ಸಾಲ ಪಡೆದು ವಂಚನೆ

    ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಪ್ಲ್ಯಾಟ್ ಖರೀದಿಸುವ ನೆಪದಲ್ಲಿ ನಕಲಿ ದಾಖಲೆ ಸಲ್ಲಿಸಿ ಖಾಸಗಿ ಫೈನಾನ್ಸ್ ಕಂಪನಿಯಿಂದ 60.85 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಆರೋಪದಡಿ ದಂಪತಿ ಸೇರಿ ಮೂವರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಜಯನಗರ 8ನೇ ಹಂತ ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಎಲ್.ಗಜೇಂದ್ರ ನೀಡಿದ ದೂರಿನ ಮೇರೆಗೆ ಆರ್‌ಎಂವಿ 2ನೇ ಹಂತದ ರೈಲ್ವೆ ಕಾಲನಿ ನಿವಾಸಿಗಳಾದ ಕೋಮಲ ಮೋಹಿತೆ (33), ಆಕೆಯ ಪತಿ ವಿಜಯಕುಮಾರ್ ಗೋಪಾಲ್ ರಾವ್ (38) ಹಾಗೂ ಉತ್ತರಹಳ್ಳಿಯ ಅನುಸೂಯದೇವಿ(42) ಎಂಬುವವರ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳ ಅಡಿಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2 ವರ್ಷದ ಹಿಂದೆ ಕೋಮಲ ಮೋಹಿತೆ ಮತ್ತು ವಿಜಯ್ ಕುಮಾರ್ ದಂಪತಿ ಜಯನಗರದ ಬಜಾಜ್ ಫೈನಾನ್ಸ್‌ಗೆ ಭೇಟಿ ನೀಡಿದ್ದರು. ಉತ್ತರಹಳ್ಳಿಯ ಬಿಕಾಸಿಪುರ ಗ್ರಾಮದ ಆನಂದಕುಟೀರ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯ ಪ್ಲ್ಯಾಟ್ ಸಂಖ್ಯೆ 202 ಅನ್ನು ಮಾಲೀಕರಾದ ಎಚ್.ಕೆ. ಅನುಸೂಯದೇವಿ ಎಂಬುವವರಿಂದ ಖರೀದಿಸುತ್ತಿದ್ದೇವೆ. ನಿಮ್ಮ ಫೈನಾನ್ಸ್ ಕಂಪನಿಯಿಂದ ಸಾಲಬೇಕು ಎಂದು ಕೇಳಿದ್ದಾರೆ. ಪ್ಲ್ಯಾಟ್ ಖರೀದಿ ಸಂಬಂಧ ದಾಖಲಾತಿಗಳನ್ನೂ ನೀಡಿದ್ದಾರೆ.

    ಫೈನಾನ್ಸ್ ಕಂಪನಿ ಸಿಬ್ಬಂದಿ ದಾಖಲಾತಿಗಳನ್ನು ಪರಿಶೀಲಿಸಿ, 2022ರ ಸೆಪ್ಟೆಂಬರ್ 2ರಂದು ದಂಪತಿಗೆ 60.85 ಲಕ್ಷ ರು. ಸಾಲ ಮಂಜೂರು ಮಾಡಿದ್ದಾರೆ. ಪ್ಲ್ಯಾಟ್‌ನ ಮಾಲೀಕ ಅನುಸೂಯದೇವಿ ಅವರ ಹೆಸರಿಗೆ ಚೆಕ್ ನೀಡಲಾಗಿದೆ. ಅಂತೆಯೆ ಅನುಸೂಯದೇವಿ ಅವರು ಕೋಮಲ ಮತ್ತು ವಿಜಯ ದಂಪತಿ ಹೆಸರಿಗೆ ಸೇಲ್ ಡೀಡ್ ಮಾಡಿಕೊಟ್ಟಿದ್ದಾರೆ. ಅದರಂತೆ ಚೆಕ್ ಹಣವು ಅನುಸೂಯದೇವಿಯ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಬಳಿಕ ಕೋಮಲ ಮತ್ತು ವಿಜಯ್ ದಂಪತಿ ಫೈನಾನ್ಸ್ ಕಂಪನಿಗೆ ಪ್ರತಿ ತಿಂಗಳು 48 ಸಾವಿರ ರು. ಹಣ ಪಾವತಿಸಿದ್ದಾರೆ.

    ಜನವರಿಯಿಂದ ಫೈನಾನ್ಸ್ ಕಂಪನಿಗೆ ಯಾವುದೇ ಹಣದ ಕಂತು ಪಾವತಿಸಿಲ್ಲ.ಈ ಬಗ್ಗೆ ಅನುಮಾನಗೊಂಡ ಫೈನಾನ್ಸ್ ಕಂಪನಿಯವರು ಕೋಮಲ ಮತ್ತು ವಿಜಯ್ ದಂಪತಿ ನೀಡಿದ್ದ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ನಕಲಿ ದಾಖಲೆಗಳು ಎಂಬುದು ಗೊತ್ತಾಗಿದೆ. ಈ ಬಗ್ಗೆ ದಂಪತಿಯನ್ನು ವಿಚಾರಿಸಿದಾಗ, ಪ್ಲ್ಯಾಟ್ ಮಾರಾಟ ಮಾಡಿರುವ ಅನುಸೂಯದೇವಿ ನಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿದಾಗ ಈ ದಂಪತಿ ಇದೇ ಪ್ಲ್ಯಾಟ್‌ನ ಮೇಲೆ ಬೇರೆ ಬೇರೆ ಹೌಸಿಂಗ್ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿರುವುದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts