More

    ಪೈಲಟ್‌ಗೆ 73 ಲಕ್ಷ ರೂ. ಧೋಖಾ…!

    ಬೆಂಗಳೂರು: ಕೈತುಂಬ ವೇತನ ಕೊಡುವ ಅರೆಕಾಲಿಕ ನೌಕರಿ ಆಮಿಷವೊಡ್ಡಿ ಪೈಲಟ್‌ಗೆ ಬರೋಬ್ಬರಿ 73 ಲಕ್ಷ ರೂ.ಗೆ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
    ವೈಟ್‌ಫೀಲ್ಡ್ ನಿವಾಸಿ 39 ವರ್ಷದ ಪೈಲಟ್ ವಂಚನೆಗೆ ಒಳಗಾದವ. ಈತ ಕೊಟ್ಟ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ವಿಭಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಪೈಲಟ್‌ಯೊಬ್ಬರ ಮೊಬೈಲ್‌ಗೆ ಸಂದೇಶ ಬಂದಿದ್ದು, ಮನೆಯಲ್ಲಿ ಇದ್ದುಕೊಂಡೇ ಪಾರ್ಟ್‌ಟೈಮ್ ಕೆಲಸ ಇದ್ದು, ಕೈತುಂಬ ವೇತನ ಸಿಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಿತ ಹೋಟೆಲ್‌ಗಳಿಗೆ ಉತ್ತಮ ರಿವ್ಯೆವ್ ಕೊಟ್ಟರೇ ಒಂದಕ್ಕೆ 150 ರೂ. ಸಿಗಲಿದೆ ಎಂದು ಆಮಿಷವೊಡ್ಡಿದ್ದರು.

    ಅದನ್ನು ಗಮನಿಸಿದ ಪೈಲಟ್, ಸಂದೇಶದಲ್ಲಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಜಾಯಿನ್ ಆಗಿದ್ದಾರೆ. ಅದರಲ್ಲಿ ಮತ್ತೆ 10 ಸಾವಿರ ರೂ. ಪಾವತಿ ಮಾಡಿ ಖಾತೆ ತೆರೆದುಕೊಳ್ಳಬೇಕೆಂದು ಷರತ್ತು ವಿಧಿಸಲಾಗಿತ್ತು. ಶುಲ್ಕ ಪಾವತಿ ಮಾಡಿದ ಪೈಲಟ್, ನೋಂದಣಿ ಮಾಡಿಕೊಂಡು ರಿವ್ಯೆವ್ ಬರೆದಾಗ ಒಂದಿಷ್ಟು ಇವರ ಖಾತೆಗೆ ಹಣ ಜಮೆ ಆಗುತ್ತಿತ್ತು. ಇದರ ನಡುವೆ 9,500 ರೂ. ಅನ್ನು ಪೈಲಟ್ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ಜಮೆ ಮಾಡಿ ಇದು ಕಂಪನಿ ಲಾಭಾಂಶದಲ್ಲಿ ನಿಮ್ಮ ಪಾಲು ಎಂದು ಹೇಳಿದ್ದರು. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಬರಲಿದೆ ಎಂದು ಆಮಿಷವೊಡ್ಡಿದ್ದರು.

    ಆಸೆಗೆ ಒಳಗಾದ ಪೈಲಟ್, ಆರೋಪಿಗಳು ಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 73 ಲಕ್ಷ ರೂ. ಜಮೆ ಮಾಡಿದ್ದರು. ಇತ್ತೀಚೆಗೆ ಲಾಭಾಂಶ ಡ್ರಾ ಮಾಡಲು ಪ್ರಯತ್ನಿಸಿದ್ದರು. ಆಗ ಕೇವಲ ಒಂದೂವರೆ ಲಕ್ಷ ರೂ. ಮಾತ್ರ ವಾಪಸ್ ಪೈಲಟ್ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು. ಉಳಿದ ಹಣ ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ. ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಕರೆ ಮಾಡಿ ಪೈಲಟ್ ಪ್ರಶ್ನಿಸಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts