

ಮೈಸೂರು : ಉತ್ತರಾಖಂಡದ ಕೇದಾರನಾಥದಲ್ಲಿ ಸ್ಥಾಪನೆಯಾಗಲಿರುವ 12 ಅಡಿ ಎತ್ತರದ ಆದಿಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರು ನಗರದ ಶಿಲ್ಪಿಗಳು ಸಿದ್ಧಗೊಳಿಸಿದ್ದಾರೆ. ಕಲಾವಿದ ಅರುಣ ಯೋಗಿರಾಜ್ ಮತ್ತು ಅವರ 9 ಸಹಾಯಕರು ಕೆತ್ತಿರುವ ಈ ಪ್ರತಿಮೆಯನ್ನು ಜೂನ್ 17 ರಂದು ಟ್ರಕ್ನಲ್ಲಿ ಕೇದಾರನಾಥಕ್ಕೆ ಸಾಗಿಸಲಾಗುವುದು.
ಕೇದಾರನಾಥದಲ್ಲಿರುವ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ 'ಶ್ರೀ ಶಂಕರಾಚಾರ್ಯ ಅಧ್ಯಯನ ಪೀಠ ಮತ್ತು ಸಂಗ್ರಹಾಲಯ'ವನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ. ಈ ಸ್ಥಳದಲ್ಲಿ ಈ ಮೂರ್ತಿಯನ್ನು ಸ್ಥಾಪಿಸಲಾಗುವುದು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಕರ್ನಾಟಕದ ನಾಲ್ಕು ಆಸಕ್ತ ಶಿಲ್ಪಿಗಳಲ್ಲಿ ಯೋಗಿರಾಜ್ ಅವರನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. ಸೆಪ್ಟೆಂಬರ್ 2020 ರಲ್ಲಿ ವರ್ಕ್ ಆರ್ಡರ್ ಬಂದ ಮೇಲೆ ಕೆತ್ತನೆ ಆರಂಭವಾಯಿತು ಎನ್ನಲಾಗಿದೆ.
ಆದಿ ಶಂಕರಾಚಾರ್ಯರು ಪದ್ಮಾಸನದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿರುವ ಈ ಮೂರ್ತಿಯ ಕೆಲಸ, ಕಳೆದ 7 ತಿಂಗಳಿಂದ ನಡೆಯುತ್ತಿದೆ. ಬೇಲೂರು-ಹಳೇಬೀಡು ದೇವಾಲಯಗಳಲ್ಲಿ ಬಳಸಲಾಗಿರುವ ಕೃಷ್ಣಶಿಲೆಯನ್ನು ಬಳಸಿ ಈ ಮೂರ್ತಿಯನ್ನು ಕೆತ್ತಲಾಗಿದ್ದು, ಬಿಸಿಲು-ಮಳೆಗಳಿಂದ ಹಾನಿಯಾಗುವುದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)