More

    ಬೆಂಗಳೂರಿನಲ್ಲಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಲೋಕಾರ್ಪಣೆಗೆ ಸಿದ್ಧತೆ

    ಬೆಂಗಳೂರು: ರಾಜಾಜಿನಗರದ ಪ್ರವೇಶದ್ವಾರದ ಸಮೀಪ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ಸಿದ್ಧಗೊಂಡಿರುವ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯು ಇದೇ ಜ.30ಕ್ಕೆ ಲೋಕಾರ್ಪಣೆಯಾಗಲಿದೆ.

    ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಗೆ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಬಿಬಿಎಂಪಿ ಅನುಮತಿ ಮೇರೆಗೆ ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಕಂಚಿನ ಮೂರ್ತಿಯನ್ನು ನಿರ್ಮಾಣ ಮಾಡಿದ್ದು, ಜ.30ರಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಮತ್ತು ಶ್ರೀಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ. ನಾಡಿನ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀಶೈಲ ಜಗದ್ಗುರುಗಳ ಪೂಜಾ ಸಮಿತಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ವಿನಂತಿ ಮಾಡಿದ್ದಾರೆ.

    ಶ್ರೀಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿದ ಶ್ರೀರಂಭಾಪುರಿ ವೀರಸಿಂಹಾಸನ ಮಹಾಪೀಠವು ಕರ್ನಾಟಕ ರಾಜ್ಯದ ಬಾಳೆಹೊನ್ನೂರಿನಲ್ಲಿದ್ದು, ನಾಡಿನಾದ್ಯಂತ ಲಕ್ಷಾಂತರ ಭಕ್ತರ ಆರಾಧ್ಯ ಸ್ಥಾನವಾಗಿದೆ. ಮಾತ್ರವಲ್ಲ ನಾಡಿನಾದ್ಯಂತ ಜಗದ್ಗುರು ರೇಣುಕಾಚಾರ್ಯರ ಅಸಂಖ್ಯಾತ ಮಂದಿರಗಳಿವೆ. ಸಮಾಜದಲ್ಲಿ ಮಠ-ಮಂದಿರಗಳಲ್ಲಿ ಮಹಾತ್ಮರ ಮೂರ್ತಿಗಳನ್ನು ಪೂಜಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ಮೂರ್ತಿ ಪ್ರತಿಷ್ಠಾಪಿಸುವ ಪರಂಪರೆ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಮಹಾತ್ಮರ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವುದರ ಹಿಂದೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸದಾ ಪ್ರೇರಣೆಯಾಗಬೇಕೆಂಬ ಸದುದ್ದೇಶವಿದೆ. ಅಂತೆಯೇ ಶ್ರೀಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ, ಸಾಮಾಜಿಕ ಸಂದೇಶಗಳು ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಯುವ ಸಮುದಾಯಕ್ಕೆ ಸಾರುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿ ಪ್ರತಿಷ್ಠಾಪಿಸಬೇಕೆಂಬುದು ಹಲವು ಹಿರಿಯರ ಬಹುದಿನಗಳ ಕನಸಾಗಿತ್ತು.

    ಜಗದ್ಗುರು ರೇಣುಕಾಚಾರ್ಯ ಪರಂಪರೆ: ಸನಾತನ ವೀರಶೈವ ಮತ ಸ್ಥಾಪಕರಾದ ಜಗದ್ಗುರು ಪಂಚಾಚಾರ್ಯರಲ್ಲೋರ್ವರಾದ ಶ್ರೀಜಗದ್ಗುರು ರೇಣುಕಾಚಾರ್ಯರು ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಮಹಾಕ್ಷೇತ್ರದ ಶ್ರೀಸೋಮೇಶ್ವರ ಸ್ವಯಂಭು ಲಿಂಗದಿಂದ ಅವತರಿಸಿ, ಮಲಯಾಚಲದ ಭದ್ರಾ ನದಿ ತೀರದಲ್ಲಿ ವೀರಸಿಂಹಾಸನ ಮಹಾಪೀಠವನ್ನು ಸಂಸ್ಥಾಪಿಸಿದ್ದಾರೆ. ಪಡ್ವಿಡಿ ಸೂತ್ರದ ಆಧಾರದಲ್ಲಿ ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋದಿಸಿದ್ದು, ಶ್ರೀಸಿದ್ಧಾಂತ ಶಿಖಾಮಣಿ ಎಂಬ ಹೆಸರಲ್ಲಿ ಲೋಕಪ್ರಸಿದ್ಧವಾಗಿದೆ. ಜಗತ್ತಿನ ೧೯ ಭಾಷೆಗಳಲ್ಲಿ ಈ ಉದ್ಗ್ರಂಥ ಭಾಷಾಂತರಗೊಂಡಿರುವುದು ಶ್ರೀಜಗದ್ಗುರು ರೇಣುಕಾಚಾರ್ಯರ ಸೈದ್ಧಾಂತಿಕ ವಿಚಾರಧಾರೆಗಳಲ್ಲಿರುವ ಮೌಲ್ಯವನ್ನು ಎತ್ತಿ ಹಿಡಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts