More

    12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 27ರಿಂದ

    ಹಾವೇರಿ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. 27 ಹಾಗೂ 28ರಂದು ನಗರದ ರಜನಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ. 27ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ ಪರಿಷತ್ ಧ್ವಜಾರೋಹಣ, ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8.30ಕ್ಕೆ ಪುರಸಿದ್ಧೇಶ್ವರ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಹಾಗೂ ಭುವನೇಶ್ವರಿದೇವಿ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಜಿ.ಪಂ. ಸಿಇಒ ರಮೇಶ ದೇಸಾಯಿ ಉದ್ಘಾಟಿಸುವರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ಅತಿಥಿಗಳಾಗಿ ಪಾಲ್ಗೊಳ್ಳುವರು. ಡೊಳ್ಳು ಕುಣಿತ, ಝಾಂಜ್​ವೆುೕಳ, ಓಲಗ, ವಿವಿಧ ಕಲಾ ತಂಡಗಳು ಪಾಲ್ಗೊಳ್ಳುವವು ಎಂದರು.

    ಉಸ್ತುವಾರಿ ಸಚಿವರಿಂದ ಚಾಲನೆ: ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ವಿಮರ್ಶಕ ಡಾ. ರಾಜೇಂದ್ರ ಚನ್ನಿ ಉಪನ್ಯಾಸ ನೀಡುವರು. ನಂತರ ಪುಸ್ತಕ ಬಿಡುಗಡೆ, ಮಳಿಗೆಗಳ ಉದ್ಘಾಟನೆ, ವಿಶೇಷ ಸನ್ಮಾನ ಜರುಗುವುದು ಎಂದರು.

    ಮಧ್ಯಾಹ್ನ 1 ಗಂಟೆಗೆ ಸಾಹಿತ್ಯ ಪಥ ಗೋಷ್ಠಿಯಲ್ಲಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸುವರು. ಜೀವರಾಜ ಛತ್ರದ ಆಶಯ ನುಡಿಗಳನ್ನಾಡುವರು. ‘ಮಾನವ ಕುಲಂ ತಾನೊಂದೆ ವಲಂ’ ಕುರಿತು ಡಾ. ಬಿ.ಎ. ಅನ್ನದಾನೇಶ, ‘ಶರಣರ ಅನುಭಾವ ಸಾಹಿತ್ಯ’ ಕುರಿತು ನಾಗರಾಜ ದ್ಯಾಮನಕೊಪ್ಪ, ‘ಸಾಹಿತ್ಯ ಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಜನಪದರ ಕೊಡುಗೆ’ ಕುರಿತು ಡಾ. ಬಿ.ಎಂ. ಯಾಕೊಳ್ಳಿ ವಿಷಯ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ಕನ್ನಡ ಪಥ ಗೋಷ್ಠಿಯಲ್ಲಿ ಡಾ. ಎಸ್.ಜಿ. ವೈದ್ಯ ಅಧ್ಯಕ್ಷತೆ ವಹಿಸುವರು. ಲಿಂಗರಾಜ ಸೊಟ್ಟಪ್ಪನವರ ಆಶಯನುಡಿಗಳನ್ನಾಡುವರು. ‘ಬಾರಿಸು ಕನ್ನಡ ಡಿಂಡಿಮವ’ ವಿಷಯ ಕುರಿತು ಎಲ್.ಎನ್. ಮುಕುಂದರಾಜ, ‘ಜಾಗತೀಕರಣ ತಂದ ಕನ್ನಡದ ಸ್ಥಿತ್ಯಂತರ’ ಕುರಿತು ಕೆ. ರಾಜಕುಮಾರ, ‘ಕನ್ನಡ ಶಾಲೆಗಳಲ್ಲಿ ಕನ್ನಡಕ್ಕೆ ಕುತ್ತು’ ಕುರಿತು ಪ್ರೊ. ಮಾರುತಿ ಶಿಡ್ಲಾಪುರ ವಿಷಯ ಮಂಡಿಸುವರು. 4 ಗಂಟೆಗೆ ‘ನಮ್ಮ ಜಿಲ್ಲೆ ನಮ್ಮ ಹೆಮ್ಮೆ’ ಗೋಷ್ಠಿಯಲ್ಲಿ ಡಾ. ಎಸ್.ಪಿ. ಗೌಡರ ಅಧ್ಯಕ್ಷತೆ ವಹಿಸುವರು. ವಿರೂಪಾಕ್ಷಪ್ಪ ಪಡಿಗೋದಿ ಆಶಯನುಡಿಗಳನ್ನಾಡುವರು. ‘ಜಿಲ್ಲೆಯ ದಾರ್ಶನಿಕರ ಪರಂಪರೆ’ ಕುರಿತು ಹನುಮಂತಗೌಡ ಗೊಲ್ಲರ, ‘ಜಿಲ್ಲೆಯ ಪ್ರಾಚೀನ ಕನ್ನಡ ಸಾಹಿತ್ಯ’ ಕುರಿತು ಡಾ. ಪುಷ್ಪಾ ಶೆಲವಡಿಮಠ, ‘ಜಿಲ್ಲೆಯ ಅಭಿವೃದ್ಧಿ ಅವಕಾಶಗಳ’ ಕುರಿತು ಷಣ್ಮುಖಪ್ಪ ಮುಚ್ಚಂಡಿ ವಿಷಯ ಮಂಡಿಸುವರು. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

    ಜ. 28ರಂದು ಬೆಳಗ್ಗೆ 9 ಗಂಟೆಗೆ ಕವಿಗೋಷ್ಠಿಯಲ್ಲಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಪ್ರೊ. ರಂಜಾನ ಕಿಲ್ಲೇದಾರ ಆಶಯನುಡಿಗಳನ್ನಾಡುವರು. ಮಧ್ಯಾಹ್ನ 11.30ಕ್ಕೆ ‘ವರ್ತಮಾನದ ವ್ಯವಸ್ಥೆಯಲ್ಲಿ ಸ್ತ್ರೀಪರ ಚಿಂತನೆಗಳು’ ಗೋಷ್ಠಿ, 1.30ಕ್ಕೆ ಸಂಕೀರ್ಣಗೋಷ್ಠಿ, 3 ಗಂಟೆಗೆ ರೈತ ಗೋಷ್ಠಿ, ಸಂಜೆ 4 ಗಂಟೆಗೆ ಸನ್ಮಾನ ಸಮಾರಂಭ ಜರುಗಲಿದೆ. ಸಂಜೆ 5 ಗಂಟೆಗೆ ಬಹಿರಂಗ ಅಧಿವೇಶನದಲ್ಲಿ ಎಚ್.ಬಿ. ಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಬಿ.ಪಿ. ಶಿಡೇನೂರ ನಿರ್ಣಯಗಳನ್ನು ಮಂಡಿಸುವರು.

    ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಸಮ್ಮೇಳನದ ಕೋಶಾಧ್ಯಕ್ಷ ಪ್ರಕಾಶ ಶೆಟ್ಟಿ, ಸಿ.ಎಸ್. ಮರಳಿಹಳ್ಳಿ, ಎಸ್.ಎನ್. ದೊಡ್ಡಗೌಡ್ರ, ಜಿ.ಎನ್. ಹೂಗಾರ ಸುದ್ದಿಗೋಷ್ಠಿಯಲ್ಲಿದ್ದರು.

    ಸಮಾರೋಪ ಸಮಾರಂಭ: ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಕರ್ಜಗಿಯ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಜಾನಪದ ವಿದ್ವಾಂಸ ಶಂಭು ಬಳಿಗಾರ ಸಮಾರೋಪ ಭಾಷಣ ಮಾಡುವರು. ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

    12.50 ಲಕ್ಷ ರೂ. ವೆಚ್ಚ: ಸಮ್ಮೇಳನಕ್ಕೆ ಒಟ್ಟು 12.50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಕೇಂದ್ರ ಕಸಾಪದಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನುಳಿದ ಹಣವನ್ನು ಶಾಸಕರು ವಿವಿಧ ಇಲಾಖೆಗಳಿಂದ ಕೊಡಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಾವು ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಕಸಾಪ ಸದಸ್ಯರು ಸೇರಿ ಯಾರಿಂದಲೂ ದೇಣಿಗೆ ಪಡೆಯುತ್ತಿಲ್ಲ. 1 ಸಾವಿರ ಶಾಲಾ ಶಿಕ್ಷಕರಿಗೆ ಪ್ರತಿನಿಧಿ ಶುಲ್ಕವಾಗಿ 200 ರೂ. ಪಡೆಯಲಾಗುವುದು ಎಂದು ಎಚ್.ಬಿ. ಲಿಂಗಯ್ಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts