More

    ಉನ್ನತ ಅಧಿಕಾರಿಗಳ ‘ರಿವ್ಯೂ’ಗಳಿಗೆ ಬೇಸತ್ತು ರಾಜೀನಾಮೆ ನೀಡಿದ ವೈದ್ಯರು

    ಲಖನೌ : ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖ್ಯಸ್ಥರಾದ 14 ವೈದ್ಯರಲ್ಲಿ 11 ಜನರು ಬುಧವಾರ ಸಂಜೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಈ ವೈದ್ಯರು, ಜಿಲ್ಲೆಯಲ್ಲಿ ಕರೊನಾ ಉಲ್ಬಣವಾಗಿದ್ದಕ್ಕೆ ತಾವೇ ಹೊಣೆ ಎಂಬಂತೆ ಆಡಳಿತ ನಡೆಸಿಕೊಳ್ಳುತ್ತಿದೆ ಎಂದು ಬೇಸರಪಟ್ಟಿದ್ದಾರೆ ಎನ್ನಲಾಗಿದೆ.

    ರಾಜ್ಯದ ರಾಜಧಾನಿ ಲಖನೌನಿಂದ 40 ಕಿಲೋಮೀಟರ್ ದೂರದಲ್ಲಿರುವ ಉನ್ನಾವ್​​ನ ಗ್ರಾಮೀಣ ಆಸ್ಪತ್ರೆಗಳ 11 ವೈದ್ಯರು ಜಂಟಿ ರಾಜೀನಾಮೆ ಪತ್ರ ಬರೆದು, ಬುಧವಾರ ಸಂಜೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಯ ಸಹಾಯಕ ಅಧಿಕಾರಿಗೆ ನೀಡಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಸಾಂಕ್ರಾಮಿಕದ ಸಮಯದಲ್ಲಿ ತಾವು ಕಷ್ಟ ಪಟ್ಟು ದುಡಿಯುತ್ತಿದ್ದರೂ ತಮ್ಮನ್ನು ತಪ್ಪಿತಸ್ಥರನ್ನಾಗಿ ನೋಡುತ್ತಿದ್ದಾರೆ, ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ರಾಜಧಾನಿಯಲ್ಲಿ ನೆಮ್ಮದಿಯ ಉಸಿರು : 10,400ಕ್ಕೆ ಇಳಿದ ನಿತ್ಯ ಪ್ರಕರಣ; ತಗ್ಗಿದ ಆಕ್ಸಿಜನ್​ ಬೇಡಿಕೆ

    “ನಮ್ಮ ತಂಡಗಳು 24 ಗಂಟೆ ಕೆಲಸ ಮಾಡುತ್ತಿವೆ. ಆದರೆ ನಾವು ಕೆಲಸ ಮಾಡುತ್ತಿಲ್ಲ ಎಂದು ಮಾರ್ಕ್​ ಮಾಡಿಕೊಂಡ ಹಾಗಿದೆ. ಡಿಎಂ, ಇತರ ಅಧಿಕಾರಿಗಳು, ಎಸ್​ಡಿಎಂ ಮತ್ತು ತಹಸೀಲ್ದಾರರು – ಎಲ್ಲರೂ ನಮ್ಮ ಮೇಲ್ವಿಚಾರಣೆ ನಡೆಸುತ್ತಿದ್ದಾರೆ, ರಿವ್ಯೂ ಮೀಟಿಂಗ್​ಗಳನ್ನು ನಡೆಸುತ್ತಿದ್ದಾರೆ. ದಿನವೆಲ್ಲ ಕೋವಿಡ್​ ಪ್ರಕರಣಗಳನ್ನು ಟ್ರ್ಯಾಕ್ ಮಾಡಿ ಅವರಿಗೆ ಔಷಧಿ ಕೊಟ್ಟು ಕಳೆದರೆ ನಂತರ ಸಂಜೆ ರಿವ್ಯೂ ಮೀಟಿಂಗ್​ಗಳಲ್ಲಿ ನಾವು ಕೆಲಸ ಮಾಡಿದ್ದೇವೆ ಅಂತ ಸಾಬೀತುಪಡಿಸಬೇಕಾಗಿದೆ” ಎಂದು ರಾಜೀನಾಮೆ ಸಲ್ಲಿಸಿದ ವೈದ್ಯರಲ್ಲೊಬ್ಬರಾದ ಡಾ. ಶರದ್ ವೈಶ್ಯ ಹೇಳಿದ್ದಾರೆ.

    ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಈ ಬಿಕ್ಕಟ್ಟು ಶೀಘ್ರವೇ ಪರಿಹಾರವಾಗಲಿದೆ ಎಂದಿದ್ದಾರೆ. “ನಾವು ಈ ವೈದ್ಯರೊಂದಿಗೆ ಮಾತನಾಡುತ್ತೇವೆ. ಸಿಎಂ ಕಛೇರಿಯಿಂದಲೂ ಅವರೊಂದಿಗೆ ಸಂಭಾಷಣೆ ನಡೆದಿದೆ. ಅವರು ನಮ್ಮ ತಂಡದ ಸದಸ್ಯರು. ಈ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ” ಎಂದು ಡಿಎಂ ರವೀಂದ್ರ ಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ: ಸಾಯುತ್ತಿದ್ದ ಅಮ್ಮನಿಗಾಗಿ ವಿಡಿಯೋ ಕಾಲ್​ನಲ್ಲೇ ಹಾಡು ಹೇಳಿದ ಮಗ! ಕಣ್ಣೀರು ತರಿಸುವ ಕಥೆ ಹಂಚಿಕೊಂಡ ಡಾಕ್ಟರ್

    ಉತ್ತರ ಪ್ರದೇಶವು ದೇಶದ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿದ್ದು, ಕರೊನಾ ಪ್ರಕರಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉನ್ನಾವ್​ನಲ್ಲಿ ಹಾಲಿ 1,980 ಸಕ್ರಿಯ ಕರೊನಾ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 84 ಹೊಸ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಕರೊನಾ ಸಂಬಂಧಿತ ಸಾವುಗಳು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಅಂಕಿಅಂಶ ತಿಳಿಸಿದೆ. (ಏಜೆನ್ಸೀಸ್)

    ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ

    ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts