More

    10 ಸಾವಿರ ಉದ್ಯೋಗ ಸೃಷ್ಟಿ, ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

    ಬೆಳ್ತಂಗಡಿ: ಆತ್ಮನಿರ್ಭರ ಯೋಜನೆಯಡಿ ರಾಜ್ಯಕ್ಕೆ 3,500 ಕೋಟಿ ರೂ.ಸಿಗಲಿದೆ. ಕರೊನಾ ಮಹಾಮಾರಿಯಿಂದ ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದ ಸಾವಿರಾರು ಮಂದಿ ನೌಕರಿ ಕಳೆದುಕೊಂಡಿದ್ದಾರೆ. ಮೀನುಗಾರಿಕಾ ವಲಯದಲ್ಲಿ ಹತ್ತು ಸಾವಿರ ಉದ್ಯೋಗ ಸೃಷ್ಟಿಗೆ ಚಿಂತಿಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತೋದ್ಯಾನದಲ್ಲಿ ಮತ್ಸ್ಯ ಪ್ರದರ್ಶನಾಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

    ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯ ಒಂಬತ್ತನೇ ಸ್ಥಾನದಲ್ಲಿದ್ದು, ಸಮುದ್ರ ಮೀನುಗಾರಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈಗ ಸಮುದ್ರ ಮೀನುಗಾರಿಕೆಗೆ ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಂದ ಮೀನುಮರಿಗಳನ್ನು ತರಿಸಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಮೀನುಮರಿ ಉತ್ಪಾದಿಸಲು ಚಿಂತಿಸಲಾಗುತ್ತಿದೆ. ಅಲಂಕಾರಿಕ ಮೀನುಗಳಲ್ಲಿಯೂ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿವಿಧ ಅಪರೂಪದ ಮೀನುಗಳ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಸರ್ಕಾರದ ಹೊಸ ಮೀನುಗಾರಿಕಾ ಅಭಿವೃದ್ಧಿಯ ಚಿಂತನೆಗೆ ಸ್ಫೂರ್ತಿ ಎಂದರು.

    ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದರ್ಶನಾಲಯದ ಮತ್ಸ್ಯಗಳಿಗೆ ಬೇಕಾದ ಆಹಾರವನ್ನು ಉಚಿತವಾಗಿ ಸರಬರಾಜು ಮಾಡುವ ಬೆಂಗಳೂರಿನ ಚೇತನ್ ಹಾಗೂ ಪ್ರದೀಪ್, ಸಿಬ್ಬಂದಿ ಹಂಜಾರನ್ನು ಡಾ.ಹೆಗ್ಗಡೆ ಹಾಗೂ ಸಚಿವರು ಸನ್ಮಾನಿಸಿದರು. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಶ್ರೀ ಧ.ಮಂ.ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಜಿಪಂ ಸದಸ್ಯೆ ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ವಂದಿಸಿದರು. ಉಪನ್ಯಾಸಕ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು.

    ಧಾರ್ಮಿಕ ಕಾರ್ಯಗಳಿಗೆ ಆದ್ಯತೆ: ಶ್ರೀಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿಗೆ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದು, ಈ ಭಕ್ತರು ದೇವರ ದರ್ಶನ ಮಾಡುವ ಜತೆಗೆ ಆಯಾಸ ಕಳೆದುಕೊಳ್ಳಲು ದಿ.ಮಂಜಯ್ಯ ಹೆಗ್ಗಡೆಯವರು ಲಲಿತೋದ್ಯಾನ ಪ್ರಾರಂಭಿಸಿ ಅದರಲ್ಲಿ ವಿವಿಧ ಬಗೆಯ ಮತ್ಸ್ಯಗಳನ್ನು ಸಂರಕ್ಷಿಸುವ ಕಾರ್ಯ ಪ್ರಾರಂಭಿಸಿದರು. ಈ ಮತ್ಸ್ಯಗಳನ್ನು ನೋಡಿದಾಗ ಮನಸ್ಸಿನ ನೋವು, ವೇದನೆಗಳು ದೂರವಾಗುತ್ತದೆ ಎಂದರು.

    ಸರ್ಕಾರ ಮಾಡಬೇಕಾದ ಕೆಲಸಗಳನ್ನು ಡಾ.ಹೆಗ್ಗಡೆ ಮಾಡುತ್ತಿದ್ದಾರೆ. ರಾಜ್ಯ ಸುಭಿಕ್ಷವಾಗಿ ಇರಬೇಕಾದರೆ ಗ್ರಾಮೀಣ ಭಾಗದ ಕುಟುಂಬ ಅಭಿವೃದ್ಧಿಯಾಗಬೇಕು. ಈ ಕುಟುಂಬಗಳನ್ನು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅಭಿವೃದ್ಧಿ ಮಾಡುತ್ತಿದ್ದಾರೆ. ಇಂದು ಮತ್ಸ್ಯ ಸಂರಕ್ಷಣೆ ಮೂಲಕ ಸರ್ಕಾರದ ಮೀನುಗಾರಿಕಾ ವಲಯದ ಯೋಜನೆಗೆ ಶಕ್ತಿ ತುಂಬಿದ್ದಾರೆ.

    ಕೋಟ ಶ್ರೀನಿವಾಸ ಪೂಜಾರಿ
    ದ.ಕ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts