More

    ಐಪಿಎಲ್​ನಲ್ಲಿ ಕನ್ನಡಿಗರ ಕಲರವ; ಆರ್​ಸಿಬಿ ತಂಡದಲ್ಲಿಲ್ಲ ರಾಜ್ಯದ ಪ್ರಮುಖ ಆಟಗಾರರು!

    ಬೆಂಗಳೂರು: ಐಪಿಎಲ್​ನಲ್ಲಿ ಆರ್​ಸಿಬಿಯ ಆಟ ನೋಡುವುದು ಎಷ್ಟು ಸಂಭ್ರಮವೋ, ಅಷ್ಟೇ ಕಾತರ ಕರ್ನಾಟಕದ ಆಟಗಾರರ ಆಟವನ್ನು ನೋಡುವುದಕ್ಕೂ ಇರುತ್ತದೆ. ಆರ್​ಸಿಬಿ ತಂಡದಲ್ಲಿ ರಾಜ್ಯದ ಪ್ರಮುಖ ಆಟಗಾರರಿಲ್ಲ ಎಂಬ ಕೊರಗು ಈ ಸಲವೂ ಮುಂದುವರಿದಿದೆ. ಇದರ ನಡುವೆ 16ನೇ ಆವೃತ್ತಿಯಲ್ಲಿ 7 ತಂಡಗಳಲ್ಲಿ ಒಟ್ಟು 10 ಕನ್ನಡಿಗರು ಸ್ಥಾನ ಪಡೆದಿದ್ದಾರೆ. ರಾಬಿನ್​ ಉತ್ತಪ್ಪ ನಿವೃತ್ತಿಯಿಂದಾಗಿ ಈ ಬಾರಿ ಸಿಎಸ್​ಕೆ ತಂಡದಲ್ಲಿ ಕನ್ನಡಿಗರಿಲ್ಲದಂತಾಗಿದೆ. ಜತೆಗೆ ಮುಂಬೈ ಇಂಡಿಯನ್ಸ್​, ಕೆಕೆಆರ್​ ತಂಡದಲ್ಲೂ ಕನ್ನಡಿಗರಿಲ್ಲ. ಮಯಾಂಕ್​ ಅಗರ್ವಾಲ್​, ಮನೀಷ್​ ಪಾಂಡೆ ಈ ಬಾರಿ ತಂಡ ಬದಲಾಯಿಸಿಕೊಂಡಿದ್ದಾರೆ. ರಾಜ್ಯದ ಎರಡು ಹೊಸಮುಖಗಳೂ ಐಪಿಎಲ್​ಗೆ ಎಂಟ್ರಿ ಪಡೆದುಕೊಂಡಿವೆ.

    ಲಖನೌ ಸೂಪರ್​ಜೈಂಟ್ಸ್​ (ಕೆಎಲ್​ ರಾಹುಲ್​, ಕೆ. ಗೌತಮ್​)

    ಸ್ಟಾರ್​ ಬ್ಯಾಟರ್​ ಕೆಎಲ್​ ರಾಹುಲ್​ ಸಾರಥ್ಯದ ಲಖನೌ ಸೂಪರ್​ಜೈಂಟ್ಸ್​ ತಂಡದಲ್ಲಿ ಈ ಬಾರಿ ಕನ್ನಡಿಗರ ಸಂಖ್ಯೆ ಎರಡಕ್ಕಿಳಿದಿದೆ. ಕಳೆದ ಆವೃತ್ತಿಯ ಬಳಿಕ ರಾಹುಲ್​ ಜತೆ ಆಲ್ರೌಂಡರ್​ ಕೆ.ಗೌತಮ್​ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರೆ, ಮನೀಷ್​ ಪಾಂಡೆ ಹರಾಜಿಗೆ ಮುನ್ನ ಹೊರಬಿದ್ದಿದ್ದರು. ಭಾರತ ಟೆಸ್ಟ್​ ತಂಡದಿಂದ ಹೊರಬಿದ್ದಿರುವುದು, ಉಪನಾಯಕನ ಪಟ್ಟ ಕಳೆದುಕೊಂಡಿರುವುದು ಮತ್ತು ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲೂ ಹಿಂಬಡ್ತಿ ಪಡೆದಿರುವುದರ ಸಹಿತ ರಾಹುಲ್​ ಇತ್ತೀಚೆಗೆ ಹಲವು ಹಿನ್ನಡೆ ಎದುರಿಸಿದ್ದಾರೆ. ಅದೆಲ್ಲದಕ್ಕೂ ಅವರು ಈ ಬಾರಿಯ ಐಪಿಎಲ್​ನಲ್ಲಿ ದಿಟ್ಟ ಉತ್ತರ ನೀಡಬೇಕಾಗಿದೆ.

    ರಾಜಸ್ಥಾನ ರಾಯಲ್ಸ್​ (ದೇವದತ್​ ಪಡಿಕಲ್​, ಕೆಸಿ ಕಾರ್ಯಪ್ಪ)

    ಹಾಲಿ ರನ್ನರ್​ಅಪ್​ ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ಕಳೆದ ವರ್ಷ ನಾಲ್ವರು ಕನ್ನಡಿಗರಿದ್ದರು. ಈ ಪೈಕಿ ವೇಗಿ ಪ್ರಸಿದ್ಧ ಕೃಷ್ಣ ಈ ಬಾರಿ ತಂಡದಲ್ಲಿದ್ದರೂ, ಗಾಯದಿಂದಾಗಿ ಆಡುತ್ತಿಲ್ಲ. ಕರುಣ್​ ನಾಯರ್​ ಹೊರಬಿದ್ದಿದ್ದಾರೆ. 2021ರ ನಂತರ ಆರ್​ಸಿಬಿ ತಂಡದಿಂದ ಹೊರಬಿದ್ದಿದ್ದ ಎಡಗೈ ಆರಂಭಿಕ ಬ್ಯಾಟರ್​ ದೇವದತ್​ ಪಡಿಕಲ್​ ಕಳೆದ ವರ್ಷ ರಾಜಸ್ಥಾನ ಪರವೂ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದ್ದರು. ಈ ಸಲವೂ ಅವರು ರಾಯಲ್ಸ್​ಗೆ ಪ್ರಮುಖ ಬ್ಯಾಟರ್​. ಜತೆಗೆ ಸ್ಪಿನ್ನರ್​ ಕೆಸಿ ಕಾರ್ಯಪ್ಪ ಮಿಂಚುವ ತವಕದಲ್ಲಿದ್ದಾರೆ.

    ಸನ್​ರೈಸರ್ಸ್​ ಹೈದರಾಬಾದ್​ (ಮಯಾಂಕ್​ ಅಗರ್ವಾಲ್​)

    ಕಳೆದ ವರ್ಷ ಸನ್​ರೈಸರ್ಸ್​ ತಂಡದಲ್ಲಿದ್ದ ಮೂವರು ಕನ್ನಡಿಗರೂ (ಜೆ. ಸುಚಿತ್​, ಶ್ರೇಯಸ್​ ಗೋಪಾಲ್​, ಆರ್​. ಸಮರ್ಥ್​) ಈ ಬಾರಿ ತಂಡದಲ್ಲಿಲ್ಲ. ಅವರ ಬದಲಿಗೆ ರಾಜ್ಯ ತಂಡದ ನಾಯಕ ಮಯಾಂಕ್​ ಅಗರ್ವಾಲ್​ ಹೊಸ ಎಂಟ್ರಿಯಾಗಿದ್ದಾರೆ. ಪಂಜಾಬ್​ ಕಿಂಗ್ಸ್​ ನಾಯಕತ್ವ ಕಳೆದುಕೊಳ್ಳುವ ಜತೆಗೆ ತಂಡದಿಂದಲೂ ಹೊರಬಿದ್ದಿರುವ ಮಯಾಂಕ್​, ಸನ್​ರೈಸರ್ಸ್​ ಪರ ಮತ್ತೆ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.

    ಡೆಲ್ಲಿ ಕ್ಯಾಪಿಟಲ್ಸ್​ (ಮನೀಷ್​ ಪಾಂಡೆ, ಪ್ರವಿಣ್​ ದುಬೆ)

    ಸ್ಪಿನ್ನರ್​ ಪ್ರವಿಣ್​ ದುಬೆ ಈ ಬಾರಿಯೂ ಡೆಲ್ಲಿ ತಂಡದಲ್ಲಿ ಮುಂದುವರಿದ್ದಾರೆ. ಅವರೊಂದಿಗೆ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ಈ ಸಲ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಮನೀಷ್​ಗೆ ಇದು ಐಪಿಎಲ್​ನಲ್ಲಿ 7ನೇ ತಂಡವಾಗಿದೆ. ಕಳೆದ ವರ್ಷ ಲಖನೌ ತಂಡದಲ್ಲಿದ್ದ ಮನೀಷ್​ ನೀರಸ ನಿರ್ವಹಣೆ ತೋರಿದ್ದರು. ಇತ್ತೀಚೆಗೆ ದೇಶೀಯ ಕ್ರಿಕೆಟ್​ನಲ್ಲೂ ಸ್ಥಿರ ನಿರ್ವಹಣೆ ತೋರಿದ್ದಾರೆ. ಈ ಸಲ ಅವರಿಂದ ಉತ್ತಮ ನಿರ್ವಹಣೆ ಬಾರದಿದ್ದರೆ, ಮುಂದಿನ ಬಾರಿ ಹರಾಜಿನಲ್ಲಿ ಮಾರಾಟವಾಗುವುದೂ ಕಷ್ಟವಾಗಬಹುದು.

    ಗುಜರಾತ್​ ಟೈಟಾನ್ಸ್​ (ಅಭಿನವ್​ ಮನೋಹರ್​)

    ದೇಶೀಯ ಟಿ20 ಕ್ರಿಕೆಟ್​ನಲ್ಲಿ ಮಿಂಚಿ ಕಳೆದ ವರ್ಷ ಗುಜರಾತ್​ ಪರ ಅವಕಾಶ ಪಡೆದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್​ ಅಭಿನವ್​ ಮನೋಹರ್​, ಅದನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ 8 ಪಂದ್ಯವಾಡಿ 108 ರನ್​ ಗಳಿಸಿದ್ದ ಅಭಿನವ್​, ಈ ಬಾರಿಯೂ ಹಾಲಿ ಚಾಂಪಿಯನ್​ ತಂಡದ ಯಶಸ್ಸಿಗೆ ನೆರವಾಗುವ ಹಂಬಲದಲ್ಲಿದ್ದಾರೆ.

    ಪಂಜಾಬ್​ ಕಿಂಗ್ಸ್​ (ವಿದ್ವತ್​ ಕಾವೇರಪ್ಪ)

    ಹಿಂದೊಮ್ಮೆ ಪಂಜಾಬ್​ ತಂಡದಲ್ಲಿ ಕನ್ನಡಿಗರೇ ತುಂಬಿದ್ದರು. ಈ ಬಾರಿ ವಿದ್ವತ್​ ಕಾವೇರಪ್ಪ ತಂಡದಲ್ಲಿರುವ ಏಕೈಕ ಕನ್ನಡಿಗ. ಇದೇ ಮೊದಲ ಬಾರಿಗೆ ಐಪಿಎಲ್​ ತಂಡ ಸೇರಿರುವ ಕೊಡಗಿನ ವೇಗಿ ವಿದ್ವತ್​, ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿದ ಪರಿಣಾಮ ಕಳೆದ ಹರಾಜಿನಲ್ಲಿ 20 ಲಕ್ಷ ರೂ. ಮೂಲಬೆಲೆಗೆ ಪಂಜಾಬ್​ ಪಾಳಯ ಸೇರಿದ್ದಾರೆ. ರಬಾಡ, ಅರ್ಷದೀಪ್​, ಕರನ್​ರಂಥ ವೇಗಿಗಳಿರುವ ತಂಡದಲ್ಲಿ ವಿದ್ವತ್​ ಆಡುವ ಅವಕಾಶದ ನಿರೀೆಯಲ್ಲಿದ್ದಾರೆ.

    ಆರ್​ಸಿಬಿ (ಮನೋಜ್​ ಭಾಂಡಗೆ)

    ಇತ್ತೀಚೆಗಿನ ವರ್ಷಗಳಲ್ಲಿ ಆರ್​ಸಿಬಿ ಲೆಕ್ಕ ಭರ್ತಿಗೆ ರಾಜ್ಯದ ಆಟಗಾರರಿಗೆ ಅವಕಾಶ ಕಲ್ಪಿಸುತ್ತಿದೆ. ಕಳೆದ ವರ್ಷ ಆರ್​ಸಿಬಿಯಲ್ಲಿದ್ದ ರಾಜ್ಯದ ಅನೀಶ್ವರ್​ ಗೌತಮ್​, ಲವನೀತ್​ ಸಿಸೋಡಿಯಾ ಆಡುವ ಅವಕಾಶ ಪಡೆಯದೆ ತಂಡದಿಂದ ಹೊರಬಿದ್ದಿದ್ದಾರೆ. ಮೊದಲ ಬಾರಿ ಐಪಿಎಲ್​ನಲ್ಲಿ ಆಡುವ ಹಂಬಲದಲ್ಲಿರುವ ರಾಯಚೂರಿನ ಆಲ್ರೌಂಡರ್​ ಮನೋಜ್​ ಭಾಂಡಗೆ ಈ ಬಾರಿ ಆರ್​ಸಿಬಿಯಲ್ಲಿರುವ ಏಕೈಕ ಕನ್ನಡಿಗ. ಇವರ ಪ್ರತಿಭೆಯನ್ನಾದರೂ ಆರ್​ಸಿಬಿ ಬಳಸಿಕೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts