More

    ಹೊರಗಿನಿಂದ ಬರುವವರಿಗೆ ಹಾಸ್ಟೆಲ್ಗಳಲ್ಲಿ ಕ್ವಾರಂಟೈನ್

    ಕಲಬುರಗಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಾಟ್ಸ್ಪಾಟ್ ರಾಜ್ಯಗಳೆಂದು ಗುರುತಿಸಲಾಗಿರುವ ಮಹಾರಾಷ್ಟ್ರ, ತೆಲಂಗಾಣ ಹಾಗೂ ಹೊರ ಜಿಲ್ಲೆಗಳಿಂದ ಕಲಬುರಗಿ ಜಿಲ್ಲೆಗೆ ಬರುವ ಜನರನ್ನು ತಡೆಯಬೇಕು. ಒಂದು ವೇಳೆ ಕದ್ದು ಮುಚ್ಚಿ ಒಳಗೆ ಬರುವಂತಹ ಜನರನ್ನು ಆಯಾ ತಾಲೂಕಿನ ಹಾಸ್ಟೆಲ್ಗಳಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿಡುವಂತೆ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕರೆದಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ತಾಲೂಕಿನ ಮೊರಾರ್ಜಿ ವಸತಿ ಶಾಲೆ ಮತ್ತಿತರ ವಸತಿ ನಿಲಯಗಳನ್ನು ಗುರುತಿಸಬೇಕು. ಪ್ರತಿನಿತ್ಯ ಹೊರಗಿನಿಂದ ಬರುವವರನ್ನು 14 ದಿನ ಪ್ರತ್ಯೇಕವಾಗಿಟ್ಟು ನಿಗಾವಹಿಸಬೇಕು. ಹೊರರಾಜ್ಯದ ಕಾರ್ಮಿಕರ ಪಟ್ಟಿ ಪಡೆದು, ಪಡಿತರ ವಿತರಣೆಗೆ ಕ್ರಮ ವಹಿಸಬೇಕು. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂದರು.
    ಕರೊನಾ ವೈರಸ್ ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚಳ ಕುರಿತು ಕಳವಳ ವ್ಯಕ್ತಪಡಿಸಿದ ಸಂಸದರು, ರೋಗಿಗಳ ಕೆ- ಶೀಟ್ ತರಿಸಿಕೊಂಡು ಪರಿಶೀಲನೆ ನಡೆಸಿದರು.
    ಜ್ವರ, ಶ್ವಾಸಕೋಶ ತೊಂದರೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಕೋವಿಡ್-19 ಇದೆಯೇ ಎಂಬ ಬಗ್ಗೆ ಪರೀಕ್ಷಿಸಿ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲಾ ವೈದ್ಯರಿಗೂ ಸೂಚನೆ ನೀಡಬೇಕು. ಮಹಾನಗರ ಹಾಗೂ ಜಿಲ್ಲೆಯಲ್ಲಿ ಕರೊನಾ ಸೋಂಕು ನಿವಾರಣಾ ಔಷಧಿ ಸಿಂಪಡಿಸಿ ಫಾಗಿಂಗ್ ಮಾಡಲು ತಿಳಿಸಿದರು.
    ಜಾತ್ರೆ ನಿಷೇಧ: ಚಿತ್ತಾಪುರ ತಾಲೂಕಿನ ರಾವೂರಿನಲ್ಲಿ ನಡೆದ ರಥೋತ್ಸವ ಪ್ರಸ್ತಾಪಿಸಿದ ಸಂಸದರು, ಜಿಲ್ಲೆಯಲ್ಲಿ ಯಾವುದೇ ಜಾತ್ರೆ, ಸಭೆ-ಸಮಾರಂಭ ನಡೆಯಬಾರದು. ಜಾತ್ರೆ, ಮಹೋತ್ಸವ ನಡೆಸದಂತೆ ಪೂಜಾರಿ, ಆರ್ಚಕರಿಗೆ ತಿಳಿ ಹೇಳಬೇಕು ಎಂದು ಪೊಲೀಸರಿಗೆ ತಿಳಿಸಿದರು.
    ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಮಾತನಾಡಿ, ಪ್ರತಿದಿನ ಹೊರರಾಜ್ಯದಿಂದ ಜನರನ್ನು ಜಿಲ್ಲೆಯಲ್ಲಿ ಬಿಟ್ಟುಕೊಂಡರೆ, ಕೆಲವೇ ದಿನಗಳಲ್ಲಿ ಕಲಬುರಗಿ ಚೀನಾದ ವುಹಾನ್ ನಗರದಂತೆ ಹಾಟ್ಸ್ಪಾಟ್ ಆದರೂ ಅಚ್ಚರಿಯಿಲ್ಲ. ಹಾಗಾಗಿ ಜಿಲ್ಲೆಗೆ ಸೇರಿದವರು ಪ್ರಸಕ್ತ ಎಲ್ಲಿದ್ದಾರೋ ಅಲ್ಲಿಯೇ ಇರಲಿ, ಅಲ್ಲಿಯ ಅಧಿಕಾರಿಗಳ ಜತೆ ಮಾತನಾಡಿ, ಊಟ ಮತ್ತು ವಸತಿ ಕಲ್ಪಿಸೋಣ ಎಂದು ಸಲಹೆ ನೀಡಿದರು.
    ಬುಧವಾರ ಕವಲಗಾದ ಒಂದು ವರ್ಷದ ಗಂಡು ಮಗುವಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಅವರ ಪ್ರವಾಸ ಪರಿಶೀಲಿಸಿದಾಗ ಇತ್ತೀಚೆಗೆ ಮಗುವಿನೊಂದಿಗೆ ತಂದೆಯೂ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ತಂದೆಗೆ ಸೋಂಕು ಇರುವುದಿಲ್ಲ. ಆದರೆ ಮಗನಿಗೆ ಸೋಂಕು ಬಂದಿರುತ್ತದೆ. ಈ ಕುರಿತು ಇನ್ನುಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಜಿಪಂ ಸಿಇಒ ಡಾ. ಪಿ. ರಾಜಾ ಸಭೆಗೆ ಮಾಹಿತಿ ನೀಡಿದರು.
    ಸಭೆಯಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮುತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಪ್ರಾದೇಶಿಕ ಆಯುಕ್ತ ಡಾ. ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ಶರತ್. ಬಿ, ಜಿಪಂ ಸಿಇಒ ಡಾ. ಪಿ. ರಾಜಾ, ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಎಸ್ಪಿ ಯಡಾ ಮಾಟರ್ಿನ್ ಮಾರ್ಬನ್ಯಾಂಗ್, ಪಾಲಿಕೆ ಅಯುಕ್ತ ರಾಹುಲ್ ಪಾಂಡ್ವೆ, ಇಎಸ್ಐಸಿ ಡೀನ್ ನಾಗರಾಜ್, ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ ಇತರರಿದ್ದರು.

    ವೈದ್ಯರೇ ದೇವರು: ವೈದ್ಯರು ದೇವರಿದ್ದಂತೆ, ಅದರಲ್ಲೂ ಕರೊನಾ ವಾರ್ಡಗಳಲ್ಲಿ ಸೇವೆ ಸಲ್ಲಿಸುವ ಸೇವೆ ಗುರುತರವಾದುದು. ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನರ್ಸ ಮುಂತಾದವರ ಒಗ್ಗೂಡಿ ಕರೊನಾ ವೈರಸ್ ರೋಗಿಗಳ ಗುಣಮುಖರನ್ನಾಗಿಸಲು ಶ್ರಮಿಸಬೇಕು. ಇವರಿಗಾಗಿ 50 ಲಕ್ಷ ರೂ. ವಿಮೆ ಸೌಲಭ್ಯವಿದೆ. ಇಂತಹ ಸೌಲಭ್ಯ ದೇಶದ ಸೈನಿಕರಿಗೂ ಸಹ ಇಲ್ಲ ಎಂದು ಸಂಸದ ಉಮೇಶ್ ಜಾಧವ್ ಅವರು, ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

    ವೈದ್ಯರಿಗೂ ಕ್ವಾರಂಟೈನ್: ಇಎಸ್ಐಸಿ ಮತ್ತು ಜಿಮ್ಸ್ ಅಸ್ಪತ್ರೆಯಲ್ಲಿ ಕರೊನಾ ಐಸೋಲೇಶನ್ ವಾರ್ಡಗಳಲ್ಲಿ ಸೇವೆ ಸಲ್ಲಿಸುವ ಕೆಲ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ನರ್ಸ್​ ಇನ್ನಿತರರು ಕರ್ತವ್ಯದ ಬಳಿಕ ಅವರವರ ಮನೆಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಸದರು, ವೈದ್ಯರು ಮತ್ತು ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಬೇಕು ಎಂದು ಸಂಸದ ಜಾಧವ್ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts