More

    ಹೊಂಡಮಯ ರಸ್ತೆಯಲ್ಲಿ ಸಂಚಾರ ದುಸ್ತರ

    ಹುಬ್ಬಳ್ಳಿ: ಆಳುದ್ದ ಅಗಲದ ಹೊಂಡಗಳ ಮಧ್ಯೆ ರಸ್ತೆ ಹುಡುಕಿಕೊಂಡು ಹೋಗುವುದೇ ಹರಸಾಹಸ… ಇಲ್ಲಿನ ಗುಂಡಿಗಳಲ್ಲಿ ಬಿದ್ದ ಬೈಕ್ ಸವಾರರಿಗೆ ಲೆಕ್ಕವೇ ಇಲ್ಲ…ಎಷ್ಟೇ ಬೆಲೆ ಬಾಳುವ ಕಾರಿದ್ದರೂ ಅದು ಈ ರಸ್ತೆಯಲ್ಲಿ ಓಲಾಡುತ್ತಲೇ ಸಾಗಬೇಕಾದ ಅನಿವಾರ್ಯತೆ…

    ನಗರದ ಕುಸುಗಲ್ಲ ರಸ್ತೆಯ ನವೀನ್ ಪಾರ್ಕ್ ಮುಖ್ಯ ರಸ್ತೆಯ ಅವ್ಯವಸ್ಥೆ ಹೀಗಿದೆ. ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಿಂದ ಬಲಭಾಗದ ನವೀನ್ ಪಾರ್ಕ್​ನತ್ತ ಹೊರಳುತ್ತಲೇ ಸ್ವಾಗತಿಸುವುದು ದೊಡ್ಡ ದೊಡ್ಡ ಹೊಂಡಗಳು!

    ವಾಣಿಜ್ಯ ನಗರಿ, ಸ್ಮಾರ್ಟ್​ಸಿಟಿ, ರಾಜ್ಯದ 2ನೇ ರಾಜಧಾನಿ ಎಂದೆಲ್ಲ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಮಹಾ ನಗರದ ನೈಜರೂಪ ಕಾಣಬೇಕೆಂದರೆ ಇಲ್ಲಿಗೆ ಭೇಟಿ ನೀಡಲೇಬೇಕು. ಈ ಬಡಾವಣೆಯಲ್ಲಿರುವವರೆಲ್ಲ ಬಹುತೇಕ ದೊಡ್ಡ ದೊಡ್ಡ ಉದ್ಯಮಿಗಳು. ಮಹಾ ನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸುವವರು. ಆದರೂ ಈ ಬಡಾವಣೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅತಿ ಹೆಚ್ಚಿನ ತೆರಿಗೆ ಪಾವತಿಸುವವರೇ ಸೌಲಭ್ಯಕ್ಕಾಗಿ ಪರದಾಡುವಂತಾಗಿದ್ದು ದುರ್ದೈವ.

    ತಗ್ಗು, ಹೊಂಡಗಳಿಲ್ಲದ ರಸ್ತೆಗಳೇ ಇಲ್ಲಿ ಇಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಗಟಾರುಗಳಿಲ್ಲ. ಒಳ ಚರಂಡಿ ವ್ಯವಸ್ಥೆ ಇಲ್ಲ. ಹೀಗೆ ‘ಇಲ್ಲ’ಗಳ ಸಾಲುಗಳೇ ಇಲ್ಲಿವೆ. ಈ ರಸ್ತೆಯಲ್ಲಿ ಮಾರುದ್ದದ ಹೊಂಡಗಳು ಬಿದ್ದು ತಿಂಗಳುಗಳೇ ಗತಿಸಿದರೂ ದುರಸ್ತಿ ಮಾಡುವ ಗೋಜಿಗೆ ಪಾಲಿಕೆ ಅಧಿಕಾರಿಗಳು ಹೋಗಿಲ್ಲ. ಹೊಂಡಗಳನ್ನು ಮುಚ್ಚುವ ತಾತ್ಕಾಲಿಕ ಕಾಮಗಾರಿಯನ್ನೂ ಮಾಡಲಾಗಿಲ್ಲ. ರಾತ್ರಿ ಸಮಯದಲ್ಲಿ ಇಲ್ಲಿ ವಾಹನ ಸವಾರರಾಗಲಿ ಅಥವಾ ಪಾದಚಾರಿಗಳಾಗಲಿ ಹೊಂಡಗಳಲ್ಲಿ ಬೀಳದೆ ಹೋದರೆ ಅದೊಂದು ಪವಾಡವೇ ಸರಿ. ಇನ್ನು ಮಳೆಗಾಲದಲ್ಲಂತೂ ಇಲ್ಲಿನ ಹೊಂಡಗಳಲ್ಲಿ ನೀರು ನಿಲ್ಲುವುದರಿಂದ ರಸ್ತೆ ಯಾವುದೋ ಹೊಂಡ ಯಾವುದೋ…? ಯಾರಿಗೂ ತಿಳಿಯುವುದಿಲ್ಲ.

    ಮಕ್ಕಳು ಹಾಗೂ ವೃದ್ಧರನ್ನು ಬೈಕ್ ಮೇಲೆ ಕೂರಿಸಿಕೊಂಡು ಈ ರಸ್ತೆಯಲ್ಲಿ ಸಾಗುವವರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಹ ಸ್ಥಿತಿ ನಿರ್ವಣಗೊಂಡಿದೆ. ಗುಣಮಟ್ಟದ ರಸ್ತೆ, ಗಟಾರು, ಒಳಚರಂಡಿಗೆ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಗಳು ಮುಂದಾಗಬೇಕಿದೆ. ಸದ್ಯಕ್ಕೆ ಹೊಂಡಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚಬೇಕಿದೆ. ಇಲ್ಲದಿದ್ದರೆ ಪಾದಚಾರಿಗಳು ಹಾಗೂ ವಾಹನಗಳ ಸವಾರರು ಹೊಂಡಗಳಲ್ಲಿ ಬಿದ್ದು ಅನಾಹುತ ಮಾಡಿಕೊಂಡರೆ ಅದಕ್ಕೆ ಮಹಾನಗರ ಪಾಲಿಕೆಯೇ ಜವಾಬ್ದಾರಿ ಆಗಬೇಕಾಗುತ್ತದೆ.

    ಹೊಂಡಗಳೇ ತುಂಬಿರುವ ಈ ರಸ್ತೆಯಿಂದಾಗಿ ನಮ್ಮ ಬೈಕ್, ಕಾರುಗಳು ಹಾಳಾಗಿವೆ. ನಮ್ಮ ಮಕ್ಕಳು, ಮೊಮ್ಮಕಳು ಈ ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ನವೀನ್​ಪಾರ್ಕ್ ನಿವಾಸಿಗಳು ದೂರಿದ್ದಾರೆ. ವಾಹನಗಳು ಕೆಟ್ಟರೆ ದುರಸ್ತಿ ಮಾಡಿಸಬಹುದು. ಆದರೆ, ನಮ್ಮ ಮಕ್ಕಳು, ಮನೆಯವರು ಹೊಂಡದಲ್ಲಿ ಬಿದ್ದು ಅಪಘಾತಕ್ಕೆ ಈಡಾದರೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ. ನವೀನ್ ಪಾರ್ಕ್ ನಿವಾಸಿಗಳ ದೂರು, ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕಾದರೆ ಇಲ್ಲಿನ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ.

    ಇನ್ನು ಒಂದು ವಾರದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಪುನರಾರಂಭಗೊಳ್ಳಲಿದ್ದು, ನಂತರ ಗಟಾರ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಮಳೆಗಾಲ ಮುಗಿಯುವವರೆಗೆ ಒಳಚರಂಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸ್ಥಳೀಯರೇ ಸಚಿವರ ಮೂಲಕ ಸೂಚಿಸಿದ್ದರು. ಒಳಚರಂಡಿ ಕೆಲಸ ಮುಗಿದ 15 ದಿನದಲ್ಲಿ ಪಾಲಿಕೆಯಿಂದ ತೆರೆದ ಗಟಾರ ನಿರ್ವಿುಸಲಾಗುವುದು. ನಂತರ ಲೋಕೋಪಯೋಗಿ ಇಲಾಖೆಯವರು ಶಾಶ್ವತ ರಸ್ತೆ ನಿರ್ವಿುಸಲಿದ್ದಾರೆ.
    | ವಿಠ್ಠಲ ತುಬಾಕೆ ಮಹಾನಗರ ಪಾಲಿಕೆ ವಲಯ ಕಚೇರಿ 6ರ ಸಹಾಯಕ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts