More

    ಹೆಗ್ಗೇರಿ ಕೆರೆ ಜೀವವೈವಿಧ್ಯ ಪಾರಂಪರಿಕ ತಾಣ

    ಹಾವೇರಿ: ರಾಜ್ಯ ಜೀವವೈವಿಧ್ಯ ಮಂಡಳಿಯಿಂದ ಹಾವೇರಿ ಹೆಗ್ಗೇರಿ ಕೆರೆಯನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೊಷಿಸಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ನಗರಸಭೆಯಿಂದ ನಿರ್ಣಯ ಕೈಗೊಳ್ಳುವಂತೆ ಪೌರಾಯುಕ್ತರಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಹಾಗೂ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚಿಸಿದರು.

    ನಗರದ ಜಿ.ಪಂ. ಸಭಾಭವನದಲ್ಲಿ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಕಾರ್ಯ ಚಟುವಟಿಕೆ, ಪರಿಸರ ರಕ್ಷಣೆ ಹಾಗೂ ಭೂಕುಸಿತ ಕುರಿತು ಮಂಗಳವಾರ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

    ಹೆಗ್ಗೇರಿ ಕೆರೆ ಪುನಶ್ಚೇತನದ ಜೊತೆಗೆ ಪಾರಂಪರಿಕ ಜೈವಿಕ ಪ್ರವಾಸ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜೈವಿಕ ತಜ್ಞರ ಸಮಿತಿಯೊಂದನ್ನು ಕಳುಹಿಸಲಾಗುವುದು. ಕೆರೆಯ ಸುತ್ತಲೂ ಮರಗಳ ಬೆಳೆಸುವಿಕೆ, ಪಕ್ಷಿ ಸಂಕುಲ ಬೆಳವಣಿಗೆಗೆ ಪೂರಕ ವಾತಾವರಣ ಸೇರಿದಂತೆ ಜೀವವೈವಿಧ್ಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ನಗರಸಭೆ, ಅರಣ್ಯ ಇಲಾಖೆ ಇತರ ಇಲಾಖೆಗಳು ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದರು.

    ಜೈವಿಕ ವೈವಿಧ್ಯ ಕಾಯ್ದೆ ಅನುಸಾರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಯನ್ನು ರಚಿಸಬೇಕು. ಜಿಲ್ಲೆಯಲ್ಲಿ 224 ಗ್ರಾ.ಪಂ.ಗಳಿದ್ದು, 146 ಗ್ರಾ.ಪಂ.ಗಳಲ್ಲಿ ಸಮಿತಿ ರಚಿಸಲಾಗಿದೆ. ಉಳಿದ ಗ್ರಾ.ಪಂ.ಗಳಲ್ಲಿ ಹಾಗೂ ನಗರ- ಸ್ಥಳೀಯ ಸಂಸ್ಥೆಗಳಲ್ಲಿ ತಿಂಗಳೊಳಗಾಗಿ ಸಮಿತಿ ರಚನೆ ಕಾರ್ಯ ಪೂರ್ಣಗೊಳ್ಳಬೇಕು. ಜನತಾ ಜೀವವೈವಿಧ್ಯ ದಾಖಲಾತಿ ಕಾರ್ಯಗಳನ್ನು ಅತ್ಯಂತ ಗುಣಮಟ್ಟದಿಂದ ನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಪಶು, ಪಕ್ಷಿ, ಜೀವಸಂಕುಲಗಳು, ಪರಿಸರ ಪ್ರಬೇಧಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು. ಸಭೆಗಳನ್ನು ಆಯೋಜಿಸಿ ಜನರೊಂದಿಗೆ ಸಮಾಲೋಚನೆ ನಡೆಸಬೇಕು. ಜೈವಿಕ ಸಂಪನ್ಮೂಲಗಳು ಹಾಗೂ ಸಂಬಂಧಿಸಿದ ಜ್ಞಾನಪರಂಪರೆಯನ್ನು ಕ್ಷೇತ್ರ ಭೇಟಿ ನೀಡಿ ಜನರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ದಾಖಲಿಸಬೇಕು. ಇದಕ್ಕೆ ಬೇಕಾದ ತಾಂತ್ರಿಕ ಮಾರ್ಗದರ್ಶನ ಹಾಗೂ ಬೆಂಬಲವನ್ನು ಪ್ರಾಧಿಕಾರ ನೀಡುತ್ತದೆ ಎಂದು ತಿಳಿಸಿದರು.

    ಪಶ್ಚಿಮ ಘಟ್ಟದ ಗಡಿ ವಲಯದಲ್ಲಿರುವ ಜಿಲ್ಲೆಯ ಹಲವೆಡೆ ಪಶ್ಚಿಮ ಘಟ್ಟದ ಕುರುಹಗಳಿವೆ. ಇವುಗಳ ರಕ್ಷಣೆ, ಅಭಿವೃದ್ಧಿ ಅವಶ್ಯವಾಗಿದೆ. ಕಂದಾಯ ವಲಯದಲ್ಲಿರುವ ಅರಣ್ಯ ಪ್ರದೇಶದ ರಕ್ಷಣೆ ಹಾಗೂ ಬೆಳವಣಿಗೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಕಂದಾಯ, ಅರಣ್ಯ ಹಾಗೂ ಜಿ.ಪಂ. ವತಿಯಿಂದ ನರೇಗಾ ಸೇರಿ ವಿವಿಧ ಯೋಜನೆಯಡಿ ರಕ್ಷಣೆ ಮಾಡಬೇಕು. ಬನವಾಸಿ ಮಾದರಿಯಲ್ಲಿ ಅರಣ್ಯ ಪ್ರದೇಶದಲ್ಲಿ ಟ್ರಂಚಿಂಗ್, ಬಂಡಿಂಗ್ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಈ ಅರಣ್ಯಗಳನ್ನು ಉಳಿಸಿಕೊಳ್ಳಬೇಕು ಎಂದರು.

    ಸಮಿತಿ ರಚನೆಯ ಪ್ರಗತಿ ಹಾಗೂ ಕಾರ್ಯಗಳ ಕುರಿತು ಜಿ.ಪಂ. ಸಿಇಒ ರಮೇಶ ದೇಸಾಯಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿಕುಮಾರ, ಸಾಮಾಜಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಇತರರಿದ್ದರು.

    ಕಠಿಣ ಕ್ರಮ ಕೈಗೊಳ್ಳಿ

    ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಬೀಜ ವೈವಿಧ್ಯತೆಯ ರಕ್ಷಣೆಯ ಬಗ್ಗೆ ಆದ್ಯತೆ ನೀಡಬೇಕು ಹಾಗೂ ಕೃಷಿ ಬಳಕೆಗಾಗಿ ಪೂರೈಕೆಯಾಗುವ ರಾಸಾಯನಿಕ ಕ್ರಿಮಿನಾಶಕ ಹಾಗೂ ರೋಗನಿರೋಧಕ ಔಷಧಿಗಳಲ್ಲಿ ಕೆಲವೊಂದು ಜೀವಸಂಕುಲ ಹಾಗೂ ಪರಿಸರಕ್ಕೆ ಅಪಾಯ ಎಂದು ನಿರ್ಬಂಧಿಸಲಾಗಿದೆ. ಆದರೂ ಕೆಲವು ವ್ಯಾಪಾರಸ್ಥರು ಇಂತಹ ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯಲು ಕೃಷಿ, ತೋಟಗಾರಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನಂತ ಹೆಗಡೆ ಅಶೀಸರ ಸೂಚಿಸಿದರು.

    ಭೂಕುಸಿತ ಕಾರಣ, ವರದಿ ಶೀಘ್ರ

    ಪಶ್ವಿಮ ಘಟ್ಟಗಳಲ್ಲಿ ಭೂ ಕುಸಿತ ಕಾರಣಗಳು ಹಾಗೂ ಪರಿಹಾರ ಕುರಿತು ರಾಜ್ಯಮಟ್ಟದ ಉನ್ನತ ಸಮಿತಿ ಅಧ್ಯಯನ ಕೈಗೊಂಡಿದ್ದು, ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದರು.

    ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವವೈವಿಧ್ಯ ಮಂಡಳಿಯ ವರ್ಷದ ಕಾರ್ಯ ಪ್ರಗತಿಯನ್ನು ಡಿಸೆಂಬರ್ 2020ಕ್ಕೆ ಸರ್ಕಾರಕ್ಕೆ ಸಲ್ಲಿಸಲಿದ್ದೇನೆ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಹಾಗೂ ಜನತಾ ಜೀವವೈವಿಧ್ಯ ದಾಖಲಾತಿ ಕಾರ್ಯವನ್ನು 3 ತಿಂಗಳೊಳಗಾಗಿ ಪೂರ್ಣಗೊಳಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕೆರೆಗಳ ಪುನಶ್ಚೇತನ, ಸಸ್ಯ ವೈವಿಧ್ಯಗಳ ಪೋಷಣೆಗೆ ಆದ್ಯತೆ ನೀಡಬೇಕು. ನಗರ ಪ್ರದೇಶದಲ್ಲಿ ಅಭಿವೃದ್ಧಿಪಡಿಸುವ ಪಾರ್ಕ್​ಗಳಲ್ಲಿ ಅಲಂಕಾರಿಕ ಗಿಡಗಳ ಜೊತೆಗೆ ಅಪರೂಪದ ಅರಣ್ಯ ಸಸಿಗಳನ್ನು ಬೆಳೆಸಲು ಆದ್ಯತೆ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts