More

    ಸೌಕರ್ಯ ವಂಚಿತ ಮಹಾಲಕ್ಷ್ಮಿ ಬಡಾವಣೆ ಮತದಾನ ಬಹಿಷ್ಕಾರಕ್ಕೆ ಸ್ಥಳೀಯರ ನಿರ್ಧಾರ

    ದಾವಣಗೆರೆ: ಕುಂದುವಾಡ ರಸ್ತೆ ಸಮೀಪದ ಮಹಾಲಕ್ಷ್ಮಿ ಬಡಾವಣೆಗೆ ನಗರಪಾಲಿಕೆಯಿಂದ ಮೂಲ ಸೌಕರ್ಯ ಕಲ್ಪಿಸದಿರುವ ಆರೋಪದಡಿ  ಸ್ಥಳೀಯರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
    25 ವರ್ಷದ ಹಿಂದೆ ಈ ಬಡಾವಣೆ ನಿರ್ಮಾಣವಾಗಿದೆ. 10 ವರ್ಷದಲ್ಲಿ 200ಕ್ಕೂ ಹೆಚ್ಚು ಮನೆಗಳು ತಲೆ ಎತ್ತಿವೆ. ಕಂದಾಯ ಕಟ್ಟುತ್ತಿದ್ದೂ ಕುಡಿವ ನೀರು, ಬೀದಿದೀಪ, ರಸ್ತೆ, ಉದ್ಯಾನ ಅಭಿವೃದ್ಧಿಪಡಿಸಿಲ್ಲ ಎಂದು ಮಹಾಲಕ್ಷ್ಮಿ ಬಡಾವಣೆ ನಾಗರೀಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಪಿ. ಪ್ರಕಾಶ್‌ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಮಳೆಗಾಲದಲ್ಲಿ ಸಣ್ಣ ಮಳೆ ಬಂದರೂ ಬಡಾವಣೆ ಕೆಸರು ಗದ್ದೆಯಾಗಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪರದಾಡಬೇಕಾಗುತ್ತದೆ.  ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಆಗಾಗ್ಗೆ ಕೊಳಚೆ ನೀರು ಉಕ್ಕುತ್ತ ಅಲ್ಲಲ್ಲಿ ದುರ್ವಾಸನೆ ಬೀರುತ್ತಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಲಿಮಿಟೆಟ್,  ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸಂಜೆ 6ರ ನಂತರ ಕೆಲವು ಕಿಡಿಗೇಡಿಗಳು ಮದ್ಯಪಾನ ಮಾಡುತ್ತಿದ್ದು ಮಹಿಳೆಯರು ಓಡಾಡದ ಸ್ಥಿತಿ ಬಡಾವಣೆಯಲ್ಲಿ ನಿರ್ಮಾಣವಾಗಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು ಕಡಿವಾಣ ಹಾಕುತ್ತಿಲ್ಲ ಎಂದು ಗೃಹಿಣಿ ಕವಿತಾ ಹೇಳಿದರು.
    ಇದುವರೆಗೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸೌಲಭ್ಯ ಕಲ್ಪಿಸಲು ಕ್ರಮ ವಹಿಸಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿ ಎಸ್. ಪ್ರಸಾದ್ ಹೇಳಿದರು.
    ಸಮಿತಿಯ ಗೌರವಾಧ್ಯಕ್ಷ ಕೆ.ಪಿ. ಚಂದ್ರಶೇಖರಪ್ಪ, ಪದಾಧಿಕಾರಿಗಳಾದ ರವಿಕುಮಾರ್ ಎಸ್.  ಕುಲಕರ್ಣಿ, ಪಿ.ಬಿ. ಶಿವಕುಮಾರ್,  ಕಿರಣ್, ಎನ್.ಎಚ್. ಮೌನೇಶ್ವರ, ಎಚ್. ಗುರುಮೂರ್ತಿ, ಹಿತೇಷ್‌ಕುಮಾರ್ ವಿ. ಪಟೇಲ್, ಎಂ.ಎ. ಸಮೀವುಲ್ಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
    ———-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts