More

    ಹು-ಧಾದಲ್ಲಿ ಕಾಮಗಾರಿಗಳ ಸುಗ್ಗಿ

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಗೆ ವಿವಿಧ ಮೂಲಗಳಿಂದ ಅನುದಾನ ಬಿಡುಗಡೆಯಾಗಿದ್ದು, ಅವಳಿ ನಗರದಲ್ಲಿ ಕಾಮಗಾರಿಗಳ ಸುಗ್ಗಿ ಆರಂಭವಾಗಲಿದೆ. ಈಗಾಗಲೇ ಹಲವು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಗುತ್ತಿಗೆದಾರರು ಕೆಲಸ ಕೈಗೆತ್ತಿಕೊಳ್ಳಲು ಅಣಿಯಾಗಿದ್ದಾರೆ.

    ರಸ್ತೆ, ಗಟಾರ, ಒಳಚರಂಡಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಅಂದಾಜು 300 ಕೋ. ರೂ. ಅನುದಾನದಡಿ ಕಾಮಗಾರಿ ನಡೆಯಲಿದೆ. ಮಳೆಗಾಲ ಆರಂಭ(ಜೂನ್ 2020)ಕ್ಕೂ ಪೂರ್ವ ಕಾಮಗಾರಿ ಪೂರ್ಣಗೊಳಿಸುವ ಹೊಣೆಗಾರಿಕೆ ಪಾಲಿಕೆ ಮೇಲಿದೆ.

    14ನೇ ಹಣಕಾಸು ಯೋಜನೆಯಡಿ 50 ಕೋ., ಎಸ್​ಎಫ್​ಸಿ (ರಾಜ್ಯ ಹಣಕಾಸು ಆಯೋಗ) ಅನುದಾನದಡಿ 29 ಕೋ., ವಿಶೇಷ ಎಸ್​ಎಫ್​ಸಿಯಡಿ 60 ಕೋ., ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ 3.52 ಕೋ., ಪರ್ಫಾರ್ಮನ್ಸ್ ಅನುದಾನದಡಿ 10.38 ಕೋಟಿ ರೂ. ಪಾಲಿಕೆಗೆ ಬಿಡುಗಡೆಯಾಗಿದೆ. ಕೆಲ ತಿಂಗಳು ಹಿಂದೆ ಪಿಂಚಣಿ ಬಾಕಿ ಹಣ 26 ಕೋ. ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಇನ್ನೂ 24 ಕೋಟಿ ರೂ. ಜನವರಿ ಮಾಸಾಂತ್ಯಕ್ಕೆ ಪಾಲಿಕೆ ಕೈ ಸೇರಬಹುದು. ನಗರೋತ್ಥಾನ ಯೋಜನೆಯಡಿ ಪಾಲಿಕೆಗೆ 126 ಕೋಟಿ ರೂ. ಅನುದಾನ ಬರಬೇಕಿದೆ. ಕೆಲ ವರ್ಷದಿಂದ ಆರ್ಥಿಕ ದುಸ್ಥಿತಿಗೆ ತಲುಪಿದ್ದ ಪಾಲಿಕೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅನುದಾನ ಬರತೊಡಗಿದ್ದರಿಂದ ಚೇತರಿಸಿಕೊಳ್ಳತೊಡಗಿದೆ.

    ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅವಳಿ ನಗರದಲ್ಲಿ 90.67 ಕೋ.ರೂ. ನಷ್ಟು ಮೂಲ ಸೌಕರ್ಯಗಳಿಗೆ ಹಾನಿ ಸಂಭವಿಸಿದೆ ಎಂದು ಪಾಲಿಕೆ ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರಲ್ಲಿ ಎನ್​ಡಿಆರ್​ಎಫ್ ಮಾರ್ಗಸೂಚಿಯಂತೆ 3.52 ಕೋ. ಹಾಗೂ ರಾಜ್ಯ ಸರ್ಕಾರ ವಿಶೇಷ ಎಸ್​ಎಫ್​ಸಿಯಡಿ 60 ಕೋ. ಬಿಡುಗಡೆ (ಲೋಕೋಪಯೋಗಿ ಇಲಾಖೆಗೆ 35 ಕೋ. ಹಂಚಿಕೆ ಮಾಡಲಾಗಿದೆ) ಮಾಡಿದೆ. ಮಳೆಯಿಂದ 30 ಸೇತುವೆ ಹಾಗೂ ಕಲ್ವರ್ಟ್ಸ್, 154 ರಸ್ತೆಗಳು, 83 ನಾಲಾ ಹಾಗೂ ಒಳಚರಂಡಿಗಳಿಗೆ ಹಾನಿಯಾಗಿದ್ದವು.

    14ನೇ ಹಣಕಾಸು ಯೋಜನೆಯ 50 ಕೋ. ಅನುದಾನದಲ್ಲಿ 190 ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿತ್ತು. ಇದರಲ್ಲಿ ಈಗಾಗಲೇ 175 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಕೆಲವು ಕಾಮಗಾರಿ ಆರಂಭಿಸಲಾಗಿದೆ.

    10.38 ಕೋ. ಪರ್ಫಾರ್ಮನ್ಸ್ ಅನುದಾನದಲ್ಲಿ 4.15 ಕೋ. ರಸ್ತೆ ಹಾಗೂ 4.15 ಒಳಚರಂಡಿ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಹಣವನ್ನು ಪಾಲಿಕೆಯು ಎಸ್​ಟಿಪಿ (ಸೇವೇಜ್ ಟ್ರೀಟ್​ವೆುಂಟ್ ಪ್ಲಾಂಟ್) ಹಾಗೂ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗೆ ಬಳಕೆ ಮಾಡಲಿದೆ.

    ನಗರೋತ್ಥಾನ ಯೋಜನೆಯಡಿ 126 ಕೋ. ವೆಚ್ಚ ಕಾಮಗಾರಿಗೆ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿ ಒಪ್ಪಿಗೆಗೆ ಕಳುಹಿಸಲಾಗಿದೆ. ಇದರಲ್ಲಿ ಸುಮಾರು 75 ಕೋ. ಒಳಚರಂಡಿ ಕಾಮಗಾರಿಗೆ ಹಂಚಿಕೆ ಮಾಡಲಾಗಿದೆ. ಸಮಿತಿ ಒಪ್ಪಿಗೆ ನೀಡಿದ ಬಳಿಕ ಪಾಲಿಕೆ ಟೆಂಡರ್ ಕರೆಯಬೇಕು.

    ಪಿಂಚಣಿ ಬಾಕಿ: ತಾಂತ್ರಿಕ ಕಾರಣದಿಂದ 3 ವರ್ಷಗಳ ಕಾಲ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಪಿಂಚಣಿ ಅನುದಾನ ಬಿಡುಗಡೆಯಾಗಿರಲಿಲ್ಲ. ಪಿಂಚಣಿ ಅನುದಾನ ಬಾಕಿ 104 ಕೋ. ರೂ. ಇದೆ. ಇದರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 50 ಕೋ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ತಿಂಗಳ ಹಿಂದೆಯೇ ಮೊದಲ ಕಂತಾಗಿ 26 ಕೋ. ಬಿಡುಗಡೆ ಮಾಡಿತ್ತು. ಇದರಲ್ಲಿ 15-16 ಕೋ. ಹಣವನ್ನು ಗುತ್ತಿಗೆದಾರರಿಗೆ ಬಾಕಿ ಪಾವತಿಗೆ ಬಳಸಲಾಗಿದೆ. ‘ಪಿಂಚಣಿ ಅನುದಾನದ ಬಾಕಿ ಮೊತ್ತದ 2ನೇ ಕಂತು 24 ಕೋ. ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಜನವರಿ ಮಾಸಾಂತ್ಯದೊಳಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts