More

    ಹುಷಾರು.. ಎರಡನೇ ಅಲೆ ಜೋರು..

    ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಮಾಣ ಹೆಚ್ಚುತ್ತಲೇ ಇದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಕಂಡುಬಂದ ಕಾರಣ ಜಿಲ್ಲೆಯ ಎರಡು ಶಿಕ್ಷಣ ಸಂಸ್ಥೆಗಳನ್ನು ಕೆಲ ದಿನ ಬಂದ್ ಮಾಡಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

    ಯಲ್ಲಾಪುರದ ವೈಟಿಎಸ್​ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೋವಿಡ್ ಸೋಂಕು ಕಂಡುಬಂದ ಕಾರಣ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಾರ್ಚ್ 31 ರಿಂದ ಏಪ್ರಿಲ್ 2ರವರೆಗೆ ಶಾಲೆಯನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

    ಅಂಕೋಲಾದಲ್ಲಿ: ಅಂಕೋಲಾ ತಾಲೂಕಿನ ಅಗಸೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್​ನ 5 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ತಾಲೂಕಿನ ಇನ್ನಿಬ್ಬರು ಶಿಕ್ಷಕರಲ್ಲಿಯೂ ಕರೊನಾ ಇರುವುದು ಪತ್ತೆಯಾಗಿದೆ. ಶಾಲೆಯ ಇನ್ನುಳಿದ 247 ವಿದ್ಯಾರ್ಥಿಗಳು ಹಾಗೂ 16 ಶಿಕ್ಷಕರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸೋಮವಾರದಿಂದ ಏ. 1ರವರೆಗೆ ಶಾಲೆಯನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಅಂಕೋಲಾದಲ್ಲಿ 1 ಸಾವು: ಮಂಗಳವಾರದ ವರದಿಯಂತೆ ಜಿಲ್ಲೆಯ 39 ಜನರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿರಗುಂಜಿ ಗ್ರಾಮದ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ನಿತಿನ್ ಹೊಸ್ಮೇಲ್ಕರ್ ತಿಳಿಸಿದ್ದಾರೆ. ಮಂಗಳವಾರದ ವರದಿಯಂತೆ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ 22, ಅಂಕೋಲಾದಲ್ಲಿ 25, ಕುಮಟಾದಲ್ಲಿ 12, ಹೊನ್ನಾವರದಲ್ಲಿ 7, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 29, ಮುಂಡಗೋಡಿನಲ್ಲಿ 2, ಹಳಿಯಾಳದಲ್ಲಿ 2 ಸಕ್ರಿಯ ಪ್ರಕರಣಗಳಿವೆ.

    ಜಯಂತಿ ಸರಳ ಆಚರಣೆ: ಕರೊನಾ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಡಾ. ಬಾಬು ಜಗಜೀವನರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಪ್ರತಿಮೆಗೆ ಅಥವಾ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಬೇಕು. ನಂತರ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ, ಅದರನ್ನು ಫೇಸ್​ಬುಕ್ ಲೈವ್ ಮೂಲಕ ಪ್ರಸಾರ ಮಾಡಬೇಕು ಎಂದರು. ಸಭೆಯಲ್ಲಿ ಸಮುದಾಯದ ಮುಖಂಡರಿಂದ ಅಹವಾಲು ಆಲಿಸಿ, ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಪುರುಷೋತ್ತಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ. ನಾಯಕ ಇದ್ದರು.

    ದಿನೇದಿನೆ ಏರುತ್ತಿವೆ ಸೋಂಕಿತರ ಸಂಖ್ಯೆ

    ಯಲ್ಲಾಪುರ: ಕಳೆದ ಎರಡು ತಿಂಗಳಿನಿಂದ ಕರೊನಾ ಮುಕ್ತವಾಗಿದ್ದ ಯಲ್ಲಾಪುರದಲ್ಲಿ ಸೋಂಕಿನ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಪಟ್ಟಣದ ವೈಟಿಎಸ್​ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ 20 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಏ. 2ರವರೆಗೆ ಸಂಸ್ಥೆಗೆ ರಜೆ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕರೊನಾ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸೋಂಕಿತರಿಂದ ಇನ್ನೆಷ್ಟು ಜನರಿಗೆ ಸೋಂಕು ತಗುಲಿದೆಯೊ ಎಂಬ ಆತಂಕ ತಾಲೂಕಿನಲ್ಲಿ ಮನೆ ಮಾಡಿದೆ.

    ತಾಲೂಕಾಡಳಿತ ಕರೊನಾ ಬಗೆಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸಭೆ ಕರೆದು ಹೇಳಿದ್ದರೂ, ಜಾಗೃತಿ ಮೂಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನತೆ ಯಾವ ಮುಂಜಾಗ್ರತೆ ಕ್ರಮಗಳನ್ನೂ ಅನುಸರಿಸುತ್ತಿಲ್ಲ.

    655 ವಿದ್ಯಾರ್ಥಿಗಳ ತಪಾಸಣೆ: ಪಟ್ಟಣದ ವೈಟಿಎಸ್​ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹಾಗೂ ತಾಲೂಕಿನ ವಿವಿಧ ಶಾಲೆಗಳ 655ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗಳವಾರ ಕರೊನಾ ತಪಾಸಣೆ ನಡೆಸಲಾಗಿದೆ.ಒಂದೆರಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಮಂಗಳವಾರ ಕಾಳಮ್ಮನಗರ ಸರ್ಕಾರಿ ಪ್ರೌಢಶಾಲೆಯ ಮೂರು ವಿದ್ಯಾರ್ಥಿಗಳಲ್ಲಿ ಹಾಗೂ ನೂತನನಗರದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

    ಹೇಳಿದ್ದೇನು-ಮಾಡಿದ್ದೇನು?: ಕಳೆದ ಶನಿವಾರ ನಡೆದ ಧಾರ್ವಿುಕ ಮುಖಂಡರ ಸಭೆಯಲ್ಲಿ ಸಾರ್ವಜನಿಕವಾಗಿ ಹೋಳಿ ಆಚರಣೆ, ಬೇಡರ ವೇಷಕ್ಕೆ ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.ಆ ಮಾತು ಕೇವಲ ಸಭೆಗೆ ಮಾತ್ರ ಸೀಮಿತವಾಗಿದ್ದು, ಪಟ್ಟಣದಲ್ಲಿ ಬೇಡರ ವೇಷವೂ ಯಾವ ಸಮಸ್ಯೆಯಿಲ್ಲದೇ ಸಾವಿರಾರು ಜನರ ನಡುವೆ ನಡೆಯಿತು. ಹೋಳಿ ಆಚರಣೆಯೂ ಪ್ರತಿ ವರ್ಷದಂತೆ ಸಾರ್ವಜನಿಕವಾಗಿಯೇ ಜರುಗಿತು. ಎಲ್ಲಿಯೂ ಕರೊನಾ ನಿಯಮಾವಳಿ ಪಾಲನೆ ಕಂಡು ಬಂದಿಲ್ಲ. ಇದರಿಂದ ಕರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚಿದರೆ ಅಚ್ಚರಿಯೇನಿಲ್ಲ.

    ಹೋಳಿ ಆಚರಣೆಗೆ, ಬೇಡರ ವೇಷಕ್ಕೆ ನಾವು ಯಾವುದೇ ಅನುಮತಿ ನೀಡಿಲ್ಲ. ಇಂತಹ ಆಚರಣೆಗೂ ಮುನ್ನ ಜನರು ಸ್ವತಃ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ವೈಟಿಎಸ್​ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ತಪಾಸಣೆ ಮಾಡಲಾಗಿದೆ. ಕೆಲವು ಪಾಲಕರ ಗಂಟಲದ್ರವ ಸಂಗ್ರಹಣೆಗೂ ಕ್ರಮ ಕೈಗೊಳ್ಳಲಾಗಿದೆ. ಅದರ ವರದಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

    | ಶ್ರೀಕೃಷ್ಣ ಕಾಮ್ಕರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts