More

    ಹುಬ್ಬಳ್ಳಿ ಒಣಮೆಣಸಿನಕಾಯಿ ಮೇಳ ಆರಂಭ, ಮೂರುಸಾವಿರ ಮಠ ಆವರಣದಲ್ಲಿ ಆಯೋಜನೆ

    ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಒಣ ಮೆಣಸಿನಕಾಯಿ ಮೇಳ ಗ್ರಾಹಕರ ಆಕರ್ಷಣೆಯ ಕೇಂದ್ರವಾಗಿದೆ.

    ರೈತರಿಂದ ನೇರವಾಗಿ ಗ್ರಾಹಕರಿಗೆ ಮೆಣಸಿನಕಾಯಿ ಲಭ್ಯವಾಗುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಖರೀದಿ ಮಾಡಬಹುದಾಗಿದೆ. ಇದರಿಂದ ಗ್ರಾಹಕರಿಗೂ ಹೊರೆಯಾಗುವುದಿಲ್ಲ, ಬೆಳೆಗಾರರಿಗೂ ಉತ್ತಮ ದರ ಸಿಗಲಿದೆ. ಹಾಗಾಗಿ ಹೆಚ್ಚಿನ ಜನರು ಮೇಳಕ್ಕೆ ಆಗಮಿಸುತ್ತಿದ್ದಾರೆ.

    ಬ್ಯಾಡಗಿ ಡಬ್ಬಿ, ದೇವನೂರ ಕಡ್ಡಿ, ಗುಂಟೂರು ಖಾರದ ಕಾಯಿ, ಬಳ್ಳಾರಿ ತಳಿ ಹೀಗೆ ವಿವಿಧ ಬಗೆಯ ಮೆಣಸಿನಕಾಯಿಗಳು ಮಾರಾಟಕ್ಕೆ ಬಂದಿವೆ. ನೂರಕ್ಕೂ ಹೆಚ್ಚು ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದ್ದು, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಿಂದ ರೈತರು ಮೆಣಸಿನಕಾಯಿ ತಂದು ಮಾರಾಟ ಮಾಡುತ್ತಿದ್ದಾರೆ.

    ಉದ್ಘಾಟನೆ: ಜ. 22ರ ವರೆಗೆ ನಡೆಯಲಿರುವ ಒಣಮೆಣಸಿನಕಾಯಿ ಮೇಳವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಶುಕ್ರವಾರ ಉದ್ಘಾಟಿಸಿದರು. ಮೇಳದಿಂದ ಬೆಳೆಗಾರರಿಗೆ ಯೋಗ್ಯ ಮಾರುಕಟ್ಟೆ ದೊರೆತಂತಾಗಿದೆ. ಕಳೆದ ಎರಡು ವರ್ಷ ಕರೊನಾ ಮಹಾಮಾರಿಯಿಂದಾಗಿ ಮೇಳ ನಡೆದಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ಮೆಣಸಿನಕಾಯಿಗೆ ರಾಷ್ಟ್ರಾದ್ಯಂತ ಉತ್ತಮ ಬೇಡಿಕೆ ಇದೆ. ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯು ಹೊಸ ಪ್ರಯೋಗಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

    ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿಯ ಕರ್ನಾಟಕ ವಾಣಿಜೊ್ಯೕದ್ಯಮ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕುಂದಗೋಳದ ಅಮರಶಿವ ರೈತ ಉತ್ಪಾದಕ ಸಂಸ್ಥೆ, ಉಳವಾಯೋಗಿ ರೈತ ಉತ್ಪಾದಕ ಸಂಸ್ಥೆ ಇವುಗಳ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ.

    ಕರ್ನಾಟಕ ವಾಣಿಜೊ್ಯೕದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ, ಮಂಡಳಿಯ ಪ್ರಧಾನ ವ್ಯವಸ್ಥಾಪಕರಾದ ರವೀಂದ್ರ ಹಕಾಟಿ, ಚಿದಾನಂದಪ್ಪ ಪಿ.ಜಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿಜಯಕುಮಾರ, ಗ್ರಾಹಕರು, ಸಾರ್ವಜನಿಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts