More

    ಹುಡಾದಿಂದ 15ಕ್ಕೂ ಹೆಚ್ಚು ಲೇಔಟ್ ತೆರವು

    ಹುಬ್ಬಳ್ಳಿ: ಅನಧಿಕೃತ ವಸತಿ ವಿನ್ಯಾಸಗಳ ವಿರುದ್ಧ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ಇಲ್ಲಿಯ ಮಂಟೂರ ರಸ್ತೆಯಲ್ಲಿ ಸೋಮವಾರ ಸುಮಾರು 15ಕ್ಕೂ ಹೆಚ್ಚು ಅಕ್ರಮ ಲೇಔಟ್ ತೆರವುಗೊಳಿಸಲಾಯಿತು.

    ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಸದಸ್ಯರ ನೇತೃತ್ವದಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು. ಸೋಮವಾರ ಬೆಳಗ್ಗೆ ಪೊಲೀಸರ ನೆರವಿನೊಂದಿಗೆ ಜೆಸಿಬಿಯೊಂದಿಗೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಅನಧಿಕೃತ ಲೇಔಟ್ ನಿರ್ವಪಕರಿಗೆ ಬಿಸಿ ಮುಟ್ಟಿಸಿದರು.

    ಹುಡಾದಿಂದ ಯಾವುದೇ ಅನುಮೋದನೆ ಪಡೆಯದೇ ನಿರ್ವಿುಸಿದ್ದ ಲೇಔಟ್​ಗಳಲ್ಲಿನ ನಿವೇಶನ ಗುರುತು ಕಲ್ಲುಗಳು, ವಿದ್ಯುತ್ ಕಂಬ, ಚರಂಡಿ, ಒಳಚರಂಡಿ, ನೀರಿನ ಸಂಪರ್ಕ್ ಸೌಲಭ್ಯಗಳನ್ನು ಕಿತ್ತು ಹಾಕಲಾಯಿತು.

    ಯಂತ್ರಗಳ ಸಹಾಯದಿಂದ ಕೈಗೊಂಡ ತೆರವು ಕಾರ್ಯ ವೇಗವಾಗಿ ಮುಗಿಯಿತು. ಎರಡು ದಿನ ಕೈಗೊಳ್ಳಬೇಕಿದ್ದ ಕಾರ್ಯಾಚರಣೆ ಒಂದೇ ದಿನದಲ್ಲಿ ಮುಗಿಸಿದ್ದೇವೆ. ತೆರವು ಮಾಡಿದ ಕಲ್ಲು, ಇತ್ಯಾದಿ ತ್ಯಾಜ್ಯಗಳನ್ನು ಬೇರೆಡೆ ಸಾಗಿಸಲಾಗಿದೆ. ಮತ್ತೆ ಏನಾದರೂ ತೆರವು ಮಾಡಿದ ಜಾಗದಲ್ಲಿ ಕಲ್ಲು ನೆಡುವ ಕಾರ್ಯ ಮಾಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು. ಜ. 20ರಂದು ಧಾರವಾಡದಲ್ಲಿ ತೆರವು ಕಾರ್ಯ ನಡೆಯಲಿದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ‘ವಿಜಯವಾಣಿ’ಗೆ ತಿಳಿಸಿದರು.

    ಅಧಿಕಾರಿಗಳು ಗುರುತಿಸಿದ್ದ 20 ಲೇಔಟ್ ಪೈಕಿ ನಾಲ್ಕು ಅನಧಿಕೃತವಾಗಿರಲಿಲ್ಲ. ಒಂದೇ ಸರ್ವೆ ನಂಬರ್​ನಲ್ಲಿ ಇದ್ದಿದ್ದರಿಂದ ಅಧಿಕಾರಿಗಳಿಗೂ ಗೊಂದಲವಾಗಿತ್ತು. ಈ ಬಗ್ಗೆ ಲೇಔಟ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ ದಾಖಲೆಗಳನ್ನು ನೀಡಿದ್ದರಿಂದ ಅಂಥವುಗಳನ್ನು ಕೈಬಿಡಲಾಯಿತು ಎಂದು ಅವರು ತಿಳಿಸಿದರು.

    ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ್, ಮೀನಾಕ್ಷಿ ಒಂಟಮುರಿ, ಯಲ್ಲಪ್ಪ ಅರವಾಳದ, ಸುನಿಲ್ ಮೋರೆ, ಆಯುಕ್ತ ವಿನಾಯಕ ಪಾಲನಕರ, ಟಿಪಿಎಂ ವಿವೇಕ ಕಾರೇಕರ, ಇತರ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿದ್ದರು.

    ಸೈಟ್ ಪಡೆದವರಿಗೂ ನ್ಯಾಯ ಸಿಗಲಿ: ಹುಡಾ ನಡೆಸುತ್ತಿರುವ ಅನಧಿಕೃತ ಲೇಔಟ್ ವಿರುದ್ಧದ ಕಾರ್ಯಾಚರಣೆಗೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಅದೇ ಸಮಯಕ್ಕೆ ಅಂತಹ ಅಕ್ರಮ ಲೇಔಟ್​ಗಳಲ್ಲಿ ನಿವೇಶನ ಪಡೆದವರ ಕಥೆ ಏನು ಎಂಬ ಪ್ರಶ್ನೆಯೂ ಹಲವರನ್ನು ಕಾಡುತ್ತಿದೆ. ಸಾಲ ಮಾಡಿ ಅಥವಾ ಕೂಡಿಟ್ಟ ಹಣದಿಂದ ನಿವೇಶನ ಕಾಯ್ದಿರಿಸಿಕೊಂಡಿದ್ದೇವೆ. ನಮ್ಮಂಥವರಿಗೂ ನ್ಯಾಯ ಒದಗಿಸಿ ಎಂದು ಕೆಲವರು ಹುಡಾ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಅಕ್ರಮ ಲೇಔಟ್ ಮಾಡಿದವರೇ ನಿಯಮಾನುಸಾರ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಅನುಮೋದನೆ ನೀಡಲು ಹುಡಾ ಬದ್ಧವಾಗಿದೆ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts